ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಮುರಿದು, ಕೊಚ್ಚಿ ಹೋದ ಪರಿಣಾಮ 40 ಟಿಎಂಸಿಯಷ್ಟು ಖಾಲಿಯಾಗಿದ್ದ ನೀರು ಗೇಟ್ ದುರಸ್ತಿ ನಂತರ ಜಲಾಶಯದಲ್ಲಿ 98.10 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.
ತುಂಗಭದ್ರಾ ಅಣೆಕಟ್ಟೆ ಭರ್ತಿಯಾಗಲು 1.94 ಅಡಿಯಷ್ಟೇ ಬಾಕಿ ಉಳಿದಿದ್ದು, ಅಣೆಕಟ್ಟೆಯ ಸುರಕ್ಷತೆಯ ದೃಷ್ಟಿಯಿಂದ ಯಾವುದೇ ಕ್ಷಣದಲ್ಲಿ ಕೆಲವು ಕ್ರಸ್ಟ್‌ಗೇಟ್‌ಗಳನ್ನು ತೆರೆದು ನೀರನ್ನು ನದಿಗೆ ನೀರು ಹರಿಸಬಹುದು.
ಅಣೆಕಟ್ಟೆಯ ಗರಿಷ್ಠ ಮಟ್ಟ 1,633 ಅಗಿದ್ದು, ಸೋಮವಾರ ಬೆಳಿಗ್ಗೆ 1,631.06 ಅಡಿಯಷ್ಟು ನೀರಿನ ಮಟ್ಟ ಇದೆ. 105.78 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯ ಭರ್ತಿಗೆ ಇನ್ನು ಏಳು ಟಿಎಂಸಿ ಅಡಿ ನೀರು ಬೇಕಿದೆ.
ಮೂರು ದಿನದೊಳಗೆ ಜಲಾಶಯ ಸಂಪೂರ್ಣ ಭರ್ತಿಯಾಗಲಿದೆ. ಆದರೆ ಒಳಹರಿವು ಅಧಿಕ ಇರುವ ಸ್ಥಿತಿಯಲ್ಲಿ ಅಣೆಕಟ್ಟೆ ಸಂಪೂರ್ಣ ಭರ್ತಿಯಾಗುವ ತನಕ ಕಾಯದೆ, ಅದಕ್ಕಿಂತ ಮೊದಲೇ ನೀರನ್ನು ನದಿಗೆ ಹರಿಸುವ ಪರಿಪಾಠ ಇದೆ. ಜುಲೈ 22ರಂದು ಜಲಾಶಯದಲ್ಲಿ 98 ಟಿಎಂಸಿ ಅಡಿಯಷ್ಟು ನೀರಿದ್ದಾಗಲೇ ಮತ್ತು ಒಳಹರಿವಿನ ಪ್ರಮಾಣ ಲಕ್ಷದಷ್ಟು ಇದ್ದ ಕಾರಣ 3 ಕ್ರಸ್ಟ್‌ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಸಲಾಗಿತ್ತು.
ಎರಡು ದಿನಗಳಿಂದ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಕಾಯ್ದುಕೊಳ್ಳುವ ಸಲುವಾಗಿ ಕ್ರಸ್ಟ್ ಗೇಟ್ ತೆರೆಯದೆ, ಅಧಿಕ ಜಲವಿದ್ಯುತ್ ಉತ್ಪಾದನೆ ಮಾಡುವ ಮೂಲಕ ಸುಮಾರು 5 ಸಾವಿರ ಕ್ಯುಸೆಕ್‌ನಷ್ಟು ನೀರನ್ನು ನದಿಗೆ ಹರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅಧಿಕ ನೀರು ಹೊರಬಿಡುವ ಸಂದರ್ಭ ಎದುರಾದಾಗ ಕ್ರಸ್ಟ್‌ಗೇಟ್ ತೆರೆಯುವುದು ಅನಿವಾರ್ಯವಾಗಲಿದೆ. ಮಂಡಳಿ ಕೂಡ ಅಧಿಕೃತ ಪ್ರಕಟಣೆ ಹೊರಡಿಸಿ ನದಿ ಪಾತ್ರದ ಜನ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದೆ.