ರಾಜ್ಯ ಸರಕಾರ ಹಣ ಪಡೆದು ಪೋಸ್ಟಿಂಗ್ ನೀಡುವುದು ನಿಲ್ಲಿಸಿದರೆ ತುಂಗಭದ್ರಾ ಜಲಾಶಯದಲ್ಲಿ ಕ್ರಸ್ಟ್ ಗೇಟ್ ಕೊಚ್ಚಿ ಹೋದಂತಹ ಗಂಭೀರ ಪ್ರಕರಣಗಳು ನಿಲ್ಲುತ್ತವೆ ಎಂದು ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ಬೆಂಗಳೂರಿನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ತುಂಗಭದ್ರಾ ಜಲಾಶಯದ ಘಟನೆ ಅತ್ಯಂತ ಗಂಭೀರವಾದದ್ದು. ನಾನು ಸರಕಾರಕ್ಕೆ ಒಂದು ಸಲಹೆ ಕೊಡಲು ಬಯಸುತ್ತೇನೆ. ಅಧಿಕಾರಿಗಳ ವರ್ಗಾವಣೆ ಮಾಡುವಾಗ ಹಣ ತೆಗೆದುಕೊಂಡು ವರ್ಗ ಮಾಡುವ ಕೆಲಸ ಬಿಡಿ” ಎಂದು ತರಾಟೆಗೆ ತೆಗೆದುಕೊಂಡರು.
“ನಾನು ಕೂಡ ಸಿಎಂ ಆಗಿ ಎರಡು ಬಾರಿ ಕೆಲಸ ಮಾಡಿದ್ದೇನೆ. ವರ್ಗಾವಣೆ ದಂಧೆಯಲ್ಲಿ ಕಾಂಗ್ರೆಸ್ ನವರು ಎಷ್ಟರಮಟ್ಟಿಗೆ ತೊಡಗುತ್ತಿದ್ದರು ಎಂಬುದು ಗೊತ್ತಿದೆ. ನನಗೆ ವರ್ಗಾವಣೆ ಮಾಡುವ ಅಧಿಕಾರವೇ ಇರಲಿಲ್ಲ” ಎಂದರು.
“ದುಡ್ಡು ಕೊಟ್ಡು ವರ್ಗಾವಣೆ ಮಾಡಿಸಿಕೊಳ್ಳುವ ಅಧಿಕಾರಿಗೆ ಕೆಲಸದ ಕಡೆ ಗಮನ ಎಲ್ಲಿರುತ್ತದೆ. ಕೊಟ್ಟ ದುಡ್ಡನ್ನು ಮರಳಿ ವಸೂಲಿ ಮಾಡಿಕೊಳ್ಳುವ ಕಡೆ ಅವನ ಗಮನ ಇರುತ್ತದೆ. ಅಲ್ಲಿರುವಷ್ಟರಲ್ಲಿ ಅಷ್ಟೂ ಹಣವನ್ನು ಸಂಗ್ರಹ ಮಾಡುವ ಗುರಿ ಹೊಂದಿರುತ್ತಾನೆ. ಹೀಗಾಗಿ ಅವನ ಗಮನವೆಲ್ಲಾ ಹಣದ ಕಡೆಯೇ ಇರುತ್ತದೆ. ಮುಖ್ಯ ಎಂಜಿನಿಯರ್, ಕಾರ್ಯನಿರ್ವಾಹಕ ಎಂಜಿನಿಯರ್ ಸೇರಿ ಎಲ್ಲಾ ಉನ್ನತ ಅಧಿಕಾರಿಗಳಿಗೆ ದುಡ್ಡು ತೆಗೆದುಕೊಂಡು ಪೋಸ್ಟಿಂಗ್ ಕೊಡಲಾಗುತ್ತಿದೆ” ಎಂದು ಸಚಿವರು ಆರೋಪಿಸಿದರು.
“ತುಂಗಭದ್ರಾ ಅಣೆಕಟ್ಟು ಪ್ರಕರಣದ ಬಗ್ಗೆ ವಿಸ್ತೃತ ತನಿಖೆ ಮಾಡಬೇಕು. ತರಾತುರಿಯಲ್ಲಿ ಮಾಡಲು ಹೋಗಿ ಮತ್ತೇನೋ ಅವಾಂತರ ಮಾಡಿಕೊಳ್ಳಬೇಡಿ. ಪರಿಣಿತರ ನೆರವು ಪಡೆದು ಶಾಶ್ವತವಾಗಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಿ. ಮತ್ತೆ ರೈತರಿಗೆ ತೊಂದರೆ ಕೊಡುವುದು ಬೇಡ” ಎಂದು ಸಲಹೆ ನೀಡಿದರು.
ಅಣೆಕಟ್ಟೆಯ ಸುರಕ್ಷತೆಯ ಬಗ್ಗೆ ತಾಂತ್ರಿಕ ಸಮಿತಿ ಪ್ರತೀ ವರ್ಷ ಭೇಟಿ ಕೊಟ್ಟು ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲನೆ ಮಾಡುತ್ತದೆ. ರೆಡಿಮೇಡ್ ಪ್ರಶ್ನಾವಳಿಗೆ ರೆಡಿಮೇಡ್ ಉತ್ತರ ಬರೆದು ಕಾಟಾಚಾರಕ್ಕೆ ಆ ಕೆಲಸ ಮುಗಿಸುತ್ತದೆ. ಕ್ರಸ್ಟ್ ಗೇಟ್ ಗಳಿಗೆ ಅಳವಡಿಸಿರುವ ಸರಪಳಿಗಳನ್ನು ಕಾಲ ಕಾಲಕ್ಕೆ ಪರಿಶೀಲನೆ ಮಾಡುತ್ತಿರಬೇಕು. ಅವುಗಳಿಗೆ ಹಲವಾರು ವರ್ಷಗಳಿಂದ ಲೂಬ್ರಿಕೇಷನ್ ಮಾಡದ ಕರ್ಣಾಕ್ಕೆ ಈ ಪರಿಸ್ಥಿತಿ ಉಂಟಾಗಿದೆ ಎಂದು ಅವರು ಟೀಕಾಪ್ರಹಾರ ನಡೆಸಿದರು