2019 ರಿಂದ 2023ನೇ ಸಾಲಿನವರೆಗಿನ ಟಿಯೆಸ್ಸಾರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿ ಮತ್ತು ಮೊಹರೆ ಹಣಮಂತರಾಯ ಪ್ರಶಸ್ತಿಗೆ ಆಯ್ಕೆಯಾದ ಹಿರಿಯ ಪತ್ರಕರ್ತರ ಹೆಸರುಗಳನ್ನು ಸರ್ಕಾರ ಘೋಷಿಸಿದೆ.
ಟಿಯೆಸ್ಸಾರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿಗೆ ಆಯ್ಕೆಯಾದ ಪತ್ರಕರ್ತರು
ಶಿವಾಜಿ ಎಸ್ ಗಣೇಶನ್ (2019ನೇ ಸಾಲಿಗೆ), ಎಸ್ ಆರ್ ಮಣೂರ (2020ನೇ ಸಾಲಿಗೆ), ಡಾ. ಆರ್ ಪೂರ್ಣಿಮಾ (2021ನೇ ಸಾಲಿಗೆ), ಪದ್ಮರಾಜ ದಂಡಾವತಿ (2023ನೇ ಸಾಲಿಗೆ), ಡಾ. ಸರಜೂ ಕಾಟ್ಕರ್ (2023ನೇ ಸಾಲಿಗೆ)
ಮೊಹರೆ ಹಣಮಂತರಾಯ ಪ್ರಶಸ್ತಿಗೆ ಆಯ್ಕೆಯಾದ ಪತ್ರಕರ್ತರು
ರಾಜೀವ್ ಕಿದಿಯೂರ (2019ನೇ ಸಾಲಿಗೆ), ಇಂದೂಧರ ಹೊನ್ನಾಪುರ (2020ನೇ ಸಾಲಿಗೆ), ಎನ್ ಮಂಜುನಾಥ್ (2021ನೇ ಸಾಲಿಗೆ), ಚಂದ್ರಶೇಖರ್ ಪಾಲೆತ್ತಾಡಿ (2022ನೇ ಸಾಲಿಗೆ), ಶಿವಲಿಂಗಪ್ಪ ದೊಡ್ಡಮನಿ (2023ನೇ ಸಾಲಿಗೆ)
2019 ರಿಂದ 2023ನೇ ವರ್ಷಗಳ ಟಿಯೆಸ್ಸಾರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿ ಮತ್ತು ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗಳಿಗೆ ಅರ್ಹ ಪತ್ರಕರ್ತರನ್ನು ಆಯ್ಕೆ ಮಾಡಲು ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶರಾದ ನ್ಯಾ. ಪಿ ಎನ್ ದೇಸಾಯಿ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ರಚಿಸಲಾಗಿತ್ತು.
ಆಯ್ಕೆ ಸಮಿತಿಯು ಈ ಸಂಬಂಧ ಸ್ವೀಕೃತವಾಗಿದ್ದ ಅರ್ಜಿಗಳು ಮತ್ತು ನಾಮನಿರ್ದೇಶನಗಳ ಸಮಗ್ರ ಪರಿಶೀಲನೆ ನಡೆಸಿ, ಈ ಎರಡೂ ಪ್ರಶಸ್ತಿಗಳಿಗೆ ಅರ್ಹ ಪತ್ರಕರ್ತರನ್ನು ಆಯ್ಕೆ ಮಾಡಿ ಸರ್ಕಾರಕ್ಕೆ ವರದಿ ನೀಡಿತ್ತು.
ಟಿಯೆಸ್ಸಾರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ವಶಸ್ತಿಗಾಗಿ ಆಯ್ಕೆ ಮಾಡಿರುವ ಪತ್ರಕರ್ತರ ಹೆಸರುಗಳನ್ನು ಅನುಮೋದಿಸಿ, ಪ್ರಶಸ್ತಿ ಮೊತ್ತವಾದ ತಲಾ 2.00 ಲಕ್ಷ ರೂ. ನಗದು ಬಹುಮಾನ ಘೋಷಿಸಿ, ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸಲು ಸರ್ಕಾರದ ಆದೇಶಿಸಿದೆ.
ಸದರಿ ಪ್ರಶಸ್ತಿಗಳ ನಗದು ಬಹುಮಾನದ ಮೊತ್ತ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭಗಳ ವೆಚ್ಚವನ್ನು 2024-25ನೇ ಸಾಲಿನ ಆಯವ್ಯಯ ಲೆಕ್ಕಶೀರ್ಷಿಕೆಯಡಿ ಸರ್ಕಾರಿ ಕಾರ್ಯಕ್ರಮಗಳ ಪ್ರಚಾರ ಮತ್ತು ಮಾಹಿತಿ, ಶಿಕ್ಷಣ ಹಾಗೂ ಸಂವಹನಇತರೆ ವೆಚ್ಚಗಳ ಅಡಿಯಲ್ಲಿ ಒದಗಿಸಲು ಸೂಚಿಸಲಾಗಿದೆ.
ಟಿಯೆಸ್ಸಾರ್ ಪತ್ರಿಕೋದ್ಯಮ ಪ್ರಶಸ್ತಿಯನ್ನು ಕನ್ನಡ ಪತ್ರಿಕೋದ್ಯಮದಲ್ಲಿ ಅನುಪಮ ಸೇವೆ ಸಲ್ಲಿಸುವ ಪತ್ರಕರ್ತರೊಬ್ಬರಿಗೆ ಅವರ ನೆನಪಿನಲ್ಲಿ 1993ರಿಂದ ಕರ್ನಾಟಕ ಸರ್ಕಾರ ಪ್ರತಿ ವರ್ಷ ‘ಟಿಯೆಸ್ಸಾರ್ ಪತ್ರಿಕೋದ್ಯಮ ಪ್ರಶಸ್ತಿ’ ನೀಡುತ್ತ ಬಂದಿದೆ. 2018 ರವರೆಗೆ 26 ಜನ ಹಿರಿಯ ಪತ್ರಕರ್ತರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಮೋಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಯನ್ನು ಕನ್ನಡ ಪತ್ರಿಕಾ ರಂಗದ ಭೀಷ್ಮ ಎಂದೇ ಹೆಸರಾದ ಮೊಹರೆ ಹಣಮಂತರಾಯರ ಅವರ ಹೆಸರಿನಲ್ಲಿ ಈ ಪ್ರಶಸ್ತಿ ನೀಡಲಾಗುತ್ತದೆ. ಕನ್ನಡ ಪತ್ರಿಕೆ ಅಥವಾ ಪತ್ರಿಕಾ ಸಮೂಹವನ್ನು ಕಟ್ಟಿ ಬೆಳೆಸಿದ ಪತ್ರಕರ್ತರ ಸಾಧನೆಯನ್ನು ಗುರುತಿಸಿ ಇವರ ಸ್ಮರಣಾರ್ಥ ‘ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ’ಯನ್ನು ಕರ್ನಾಟಕ ಸರ್ಕಾರವು 2010ರಿಂದ ಪ್ರತಿ ವರ್ಷ ನೀಡುತ್ತಿದೆ. ಈ ವರೆಗೆ 9 ಪತ್ರಕರ್ತರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ