ಉತ್ತರಾಖಂಡದಲ್ಲಿ ಮೃತಪಟ್ಟಿರುವ 9 ಚಾರಣಿಗರ ದೇಹಗಳನ್ನು ಎಂಬಾಮಿಂಗ್ಗಾಗಿ ವಿಮಾನ ನಿಲ್ದಾಣದಿಂದ ಆಸ್ಪತ್ರೆಗೆ ಸ್ಥಳಾಂತರಿಸಿದ್ದೇವೆ. ನಾಳೆ ಬೆಳಿಗ್ಗೆ ದೆಹಲಿ-ಬೆಂಗಳೂರು ವಿಮಾನಗಳಲ್ಲಿ ಮೃತ ದೇಹಗಳನ್ನು ರವಾನಿಸಲು ಸ್ಥಳವನ್ನು ಕಾಯ್ದಿರಿಸಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಮಾಧ್ಯಮಗಳಿಗೆ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು, “ಎಂಬಾಮಿಂಗ್ ನಂತರ ಮೃತದೇಹಗಳನ್ನು ಆಂಬ್ಯುಲೆನ್ಸ್ಗಳ ಮೂಲಕ ದೆಹಲಿ ವಿಮಾನ ನಿಲ್ದಾಣಕ್ಕೆ ಸಾಗಿಸಲಾಗುತ್ತದೆ. ಗುರುವಾರ ಸಂಜೆ 5.50 ರ ವಿಮಾನದಲ್ಲಿ ಬದುಕುಳಿದ ಎಲ್ಲ 13 ಜನ ಚಾರಣಿಗರು ಬೆಂಗಳೂರಿಗೆ ಹಿಂತಿರುಗಲು ಟಿಕೆಟ್ ಕಾಯ್ದಿರಿಸಲಾಗಿದೆ” ಎಂದಿದ್ದಾರೆ.
ಮಧ್ಯಾಹ್ನ 2.30ಕ್ಕೆ ಮೃತದೇಹಗಳ ಹೊತ್ತ ಹೆಲಿಕಾಫ್ಟರ್ ಡೆಹ್ರಾಡೂನ್ ತಲುಪಿದೆ. ಕಾನೂನಾತ್ಮಕ ಪ್ರಕ್ರಿಯೆಗಳ ಕಾರಣದಿಂದಾಗಿ ಏರ್ ಲಿಫ್ಟ್ ನಲ್ಲಿ ವಿಳಂಬವಾಗಲಿದೆ. ಅಲ್ಲದೆ ಚಾರ್ಟರ್ಡ್ ಫ್ಲೈಟ್ ಲಭ್ಯವಾಗದ ಕಾರಣ ಇಂದು ಡೆಹ್ರಾಡೂನ್ ನಿಂದ ಬೆಂಗಳೂರಿಗೆ ಏರ್ ಕ್ರಾಫ್ಟ್ ಮೂಲಕ ಮೃತದೇಹಗಳ ಸ್ಥಳಾಂತರ ಇಲ್ಲ ಎನ್ನಲಾಗುತ್ತಿದೆ.
ಗೂಗಲ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಶಿರಸಿ ಯುವತಿ ಸಾವು
ಉತ್ತರಾಖಂಡದ ಸಹಸ್ತ್ರತಲ್ನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಮೃತಪಟ್ಟ ಕರ್ನಾಟಕದ ಚಾರಣಿಗರ ಪೈಕಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದ ಯುವತಿ ಪದ್ಮಿನಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಪದ್ಮಿನಿ ಸಾವಿನ ಬಗ್ಗೆ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಮಾಹಿತಿ ಸಿಕ್ಕಿದೆ.
ಶಿರಸಿ ತಾಲೂಕಿನ ಜಾಗನಹಳ್ಳಿ ನಿವಾಸಿ ಪದ್ಮಿನಿ ಹೆಗಡೆ(35) ಮೃತ ದುರ್ದೈವಿ. ಬೆಂಗಳೂರಿನಲ್ಲಿ ಗೂಗಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪದ್ಮಿನಿ ಮೇ 9ರಿಂದ ಜೂನ್ 7ರವರೆಗೆ ಟ್ರೆಕ್ಕಿಂಗ್ಗೆ ಅನುಮತಿ ಪಡೆದಿದ್ದರು. ಜೂ.4ರಂದು ಮುಂಬೈನಲ್ಲಿರುವ ತಾಯಿ ಜೊತೆ ಮಾತನಾಡಿದ್ದರು. ಕುಟುಂಬಕ್ಕೆ ಯುವತಿ ನಾಪತ್ತೆಯ ಮಾಹಿತಿಯಷ್ಟೇ ನೀಡಲಾಗಿದ್ದು ಇನ್ನೂ ಸಾವಿನ ವಿಚಾರ ತಿಳಿಸಿಲ್ಲ.
ಮೃತಪಟ್ಟವರ ಹೆಸರು
- ಸಿಂಧು ವಕೆಲಂ
- ಆಶಾ ಸುಧಾಕರ್
- ಸುಜಾತಾ ಮುಂಗುರವಾಡಿ
- ವಿನಾಯಕ್ ಮುಂಗುರವಾಡಿ
- ಚಿತ್ರಾ ಪ್ರಣೀತ್
- ಪದ್ಮನಾಭ ಕೆ.ಪಿ
- ವೆಂಕಟೇಶ್ ಪ್ರಸಾದ್ ಕೆ
- ಅನಿತಾ ರಂಗಪ್ಪ
- ಪದ್ಮಿನಿ ಹೆಗ್ಡೆ