Homeಕರ್ನಾಟಕಟೋಯಿಂಗ್ ವ್ಯವಸ್ಥೆ ಮತ್ತೆ ಆರಂಭ: ಗೃಹ ಸಚಿವ ಡಾ. ಜಿ.ಪರಮೇಶ್ವರ್

ಟೋಯಿಂಗ್ ವ್ಯವಸ್ಥೆ ಮತ್ತೆ ಆರಂಭ: ಗೃಹ ಸಚಿವ ಡಾ. ಜಿ.ಪರಮೇಶ್ವರ್

ವಾಹನಗಳನ್ನು ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡಲಾಗುತ್ತಿದೆ. ಇದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಿದೆ ಟೋಯಿಂಗ್ ವ್ಯವಸ್ಥೆಯನ್ನು ಮತ್ತೆ ಆರಂಭಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಹೇಳಿದರು.

ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, “ಟೋಯಿಂಗ್‌ ಮಾಡಲು ಇಲಾಖೆಯ ಸಿಬ್ಬಂದಿ ಮತ್ತು ವಾಹನಗಳನ್ನೇ ಬಳಸಿಕೊಳ್ಳಲಾಗುವುದು. ಟ್ರಾಫಿಕ್‌ ಸಮಸ್ಯೆಯ ಪರಿಹಾರಕ್ಕೆ ಬಿಬಿಎಂಪಿಯವರೊಂದಿಗೆ ಜೊತೆಗೂಡಿ ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ‌” ಎಂದು ತಿಳಿಸಿದರು.‌

“ನಗರದಲ್ಲಿ ಮಳೆ ಬಂದಾಗ ತೀವ್ರ ಸಮಸ್ಯೆಯಾಗುತ್ತಿದೆ. ಪ್ರಮುಖವಾಗಿ 19 ಕಡೆ ಹೆಚ್ಚು ಒತ್ತಡವಿದೆ. 8 ಕಡೆ ಹೆಚ್ಚಿನ ಟ್ರಾಫಿಕ್ ಸಮಸ್ಯೆಯಾಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಪೊಲೀಸ್ ಇಲಾಖೆ ಮತ್ತು ಬಿಬಿಎಂಪಿ ಒಟ್ಟಾಗಿ ಕೆಲಸ‌ ಮಾಡಿದರೆ ಸಮಸ್ಯೆ ಬಗೆಹರಿಯುತ್ತದೆ. ಟ್ರಾಫಿಕ್ ಸಮಸ್ಯೆಯ ಕುರಿತಂತೆ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ನಗರ ಪೊಲೀಸರಿಗೆ ಸೂಚಿಸಿದ್ದೇನೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರೊಂದಿಗೆ ಸಭೆ ಕರೆದು ಚರ್ಚಿಸಲಾಗುವುದು” ಎಂದು ಹೇಳಿದರು.

“ನಗರದಲ್ಲಿ ನೆಲೆಸಿರುವ ವಿದೇಶಿಗರ ಕುರಿತು ಮಾಹಿತಿ ಸಂಗ್ರಹಿಸುವಂತೆ ಸೂಚಿಸಿದ್ದೇನೆ. ಅಕ್ರಮ ವಲಸಿಗರ ಮಾಹಿತಿಯೂ ಗೊತ್ತಾಗುತ್ತದೆ. ಡ್ರಗ್ಸ್ ದಂಧೆಯನ್ನು ಹತೋಟಿಗೆ ತಂದಿದ್ದೇವೆ. ನಗರದಲ್ಲಿ ಡ್ರಗ್ಸ್ ಸಿಗುತ್ತಿದೆ ಎಂಬ ಮಾತುಗಳು ಸಾರ್ವಜನಿಕರಿಂದ ಬರುತ್ತಿವೆ. ಡ್ರಗ್ಸ್ ಚಟುವಟಿಕೆಗಳನ್ನು ಮಟ್ಟ ಹಾಕಲು ಮತ್ತಷ್ಟು‌ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಇದನ್ನು ನಿರ್ಲಕ್ಷ್ಯಿಸುವ ಪೊಲೀಸ್ ಅಧಿಕಾರಿಗಳನ್ನೆ ಹೊಣೆಯನ್ನಾಗಿ ಮಾಡಲಾಗುವುದು” ಎಂದರು.

“ಮಹಿಳೆಯರು ಮತ್ತು ಮಕ್ಕಳಾ ಸುರಕ್ಷತೆಗೆ ಸೂಕ್ತ ಕ್ರಮ ತೆಗದುಕೊಂಡಿದ್ದೇವೆ. ನಿರ್ಭಯಾ ಯೋಜನೆಯಡಿ 9 ಸಾವಿರ ಕ್ಯಾಮೆರಾಗಳನ್ನು ಅಳವಡಿಸಿದ್ದೇವೆ. ಸೇಫ್ಟಿ ಐಲ್ಯಾಂಡ್ಸ್ ಸ್ಥಾಪಿಸಲಾಗಿದೆ‌. ಬೆಂಗಳೂರು ಸೇಫ್ ಸಿಟಿ ಎಂದು ಸೇಫ್‌ ಸಿಟಿ ವರದಿ ಬಂದಿದೆ. ಬೆಂಗಳೂರು ನಗರ ಪೊಲೀಸ್ ಇಷ್ಟಕ್ಕೆ ಸಮಾದಾನ ಪಟ್ಟುಕೊಳ್ಳದೇ, ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ” ಎಂದು ಹೇಳಿದರು.

“ರಿಯಲ್ ಎಸ್ಟೇಟ್ ದಂಧೆಯ ಏಜೆಂಟ್‌ಗಳೊಂದಿಗೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಶಾಮಿಲಾಗುವುದನ್ನು ಸಹಿಸಲಾಗುವುದಿಲ್ಲ. ಅವರೊಂದಿಗೆ ತೊಡಗಿರುವುದು ಕಂಡುಬಂದರೆ‌, ಯಾವುದೇ ರೀತಿಯ ಮುಲಾಜಿಲ್ಲದೇ ಕೂಡಲೇ ಕ್ರಮ ಜರುಗಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದೇನೆ” ಎಂದರು.

15 ಸಾವಿರ ಹುದ್ದೆಗಳು ಖಾಲಿ

“ಪೊಲೀಸ್ ಇಲಾಖೆಯಲ್ಲಿ ಸುಮಾರು 15 ಸಾವಿರ ಹುದ್ದೆಗಳು ಖಾಲಿ ಇವೆ. ಅದನ್ನು ಭರ್ತಿ ಮಾಡಲಾಗುವುದು. ಈಗಾಗಲೇ 545 ಪಿಎಸ್‌ಐಗಳು ತರಬೇತಿ ಪಡೆಯುತ್ತಿದ್ದಾರೆ. 402 ಪಿಎಸ್‌ಐ ಫಲಿತಾಂಶ ಬಾಕಿ ಇದೆ. ಶೀಘ್ರವಾಗಿ ಬಿಡುಗಡೆ ಮಾಡಲಾಗುವುದು. ಇದರಲ್ಲಿ 219 ಪಿಎಸ್‌ಐಗಳನ್ನು ಬೆಂಗಳೂರು ನಗರಕ್ಕೆ ನೀಡಲಾಗುವುದು” ಎಂದು ತಿಳಿಸಿದರು.

ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ.‌‌ ಎಂ.ಎ.ಸಲೀಂ, ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಹೆಚ್ಚುವರಿ ಪೊಲೀಸ್ ಆಯುಕ್ತರಾದ ರಮೇಶ್ ಬಾನೋತ್, ವಿಕಾಶ್‌ಕುಮಾರ್ ವಿಕಾಶ್, ಸಂಚಾರ ವಿಭಾಗದ ಜಂಟಿ‌ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್, ಸಿಸಿಬಿ ವಿಭಾಗದ ಜಂಟಿ ಆಯುಕ್ತ ಚಂದ್ರಗುಪ್ತ ಹಾಗೂ ಎಲ್ಲ ವಿಭಾಗದ ಡಿಸಿಪಿಗಳು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments