Homeಕರ್ನಾಟಕಪ್ರವಾಸೋದ್ಯಮ ನೀತಿ 2020-26ರನ್ವಯ ರಾಜ್ಯದಲ್ಲಿ 810 ಪ್ರವಾಸಿ ತಾಣ ಗುರುತು: ಹೆಚ್‌ ಕೆ ಪಾಟೀಲ್

ಪ್ರವಾಸೋದ್ಯಮ ನೀತಿ 2020-26ರನ್ವಯ ರಾಜ್ಯದಲ್ಲಿ 810 ಪ್ರವಾಸಿ ತಾಣ ಗುರುತು: ಹೆಚ್‌ ಕೆ ಪಾಟೀಲ್

ಪ್ರವಾಸೋದ್ಯಮ ನೀತಿ 2020-26ರನ್ವಯ ರಾಜ್ಯದಲ್ಲಿ 810 ಪ್ರವಾಸಿ ತಾಣಗಳನ್ನು ಗುರುತಿಸಲಾಗಿದ್ದು, ಬಾಗಲಕೋಟೆ, ವಿಜಯಪುರ ಜಿಲ್ಲೆಯಲ್ಲಿ 44 ಪ್ರವಾಸಿ ತಾಣಗಳು ಗುರುತಿಸಲಾಗಿದೆ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.

ಅವರು ಇಂದು (ಡಿ.13) ವಿಧಾನ ಪರಿಷತ್ತಿನಲ್ಲಿ ಸದಸ್ಯರಾದ ನಿರಾಣಿ ಹನುಮಂತ ರುದ್ರಪ್ಪ ಹಾಗೂ ಕೇಶವ ಪ್ರಸಾದ್ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿ, “ಪ್ರವಾಸೋದ್ಯಮವನ್ನು ಉತ್ತೇಜಿಸಿ ಅಭಿವೃದ್ಧಿಪಡಿಸುವ ದೃಷ್ಟಿಯಿಂದ ವಿಜಯಪುರ ಪೂರ್ಣ ಜಿಲ್ಲೆಯನ್ನು ಹಾಗೂ ಬಾಗಲಕೋಟೆ ಜಿಲ್ಲೆಯ ಐಹೊಳೆ, ಬದಾಮಿ, ಪಟ್ಟದಕಲ್ಲು, ಕೂಡಲಸಂಗಮ, ಬೀಳಗಿ ತಾಣಗಳನ್ನು ಆದ್ಯತಾ ಪ್ರವಾಸಿ ತಾಣಗಳಾಗಿ ಗುರುತಿಸಿ, ಈ ತಾಣಗಳ ತಾಲ್ಲೂಕುಗಳಲ್ಲಿ ಬಂಡವಾಳ ಹೂಡಲು ಮುಂದೆ ಬರುವ ಖಾಸಗಿ ಹೂಡಿಕೆದಾರರಿಗೆ ಸಹಾಯಧನ, ರಿಯಾಯಿತಿ ಮತ್ತು ಉತ್ತೇಜನಗಳನ್ನು ನೀಡಲು ಅವಕಾಶ ಕಲ್ಪಿಸಲಾಗಿತ್ತು” ಎಂದರು.

“ಬಾಗಲಕೋಟೆ ಜಿಲ್ಲೆಯ ಐಹೂಳೆ ಗ್ರಾಮದ ಐತಿಹಾಸಿಕ ಮತ್ತು ಪಾರಂಪರಿಕ ಸ್ಮಾರಕಗಳನ್ನು ಸಂರಕ್ಷಿಸುವ ಸಲುವಾಗಿ ಸ್ಮಾರಕಗಳನ್ನೇ ಮನೆಗಳನ್ನಾಗಿ ಪರಿವರ್ತಿಸಿಕೊಂಡು ವಾಸಮಾಡುತ್ತಿರುವ ಸುಮಾರು 135 ಕುಟುಂಬಗಳನ್ನು ಸ್ಥಳಾಂತರಿಸಿ, ಪುನರ್ ವಸತಿ ಕಲ್ಪಿಸುವ ದೃಷ್ಟಿಯಿಂದ ಐಹೊಳೆ ಗ್ರಾಮದ ಭೂ-ಮಾಲೀಕರಿಂದ ಜಮೀನನ್ನು ಖರೀದಿಸಿ ಸ್ಥಳಾಂತರಿಸಲು ರೂ. 3.50 ಕೋಟಿ ಅನುದಾನವನ್ನು ಚಾಲುಕ್ಯ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರಕ್ಕೆ ಬಿಡುಗಡೆಗೊಳಿಸಲಾಗಿದೆ. 135 ಕುಟುಂಬಗಳು ಪುನರ್ವಸತಿಗೆ ಒಪ್ಪಿಗೆಯನ್ನು ಮತ್ತು ಈ ಕಾರ್ಯಕ್ಕೆ ರೈತರು ಜಮೀನನ್ನು ನೀಡಲು ಒಪ್ಪಿಗೆ ಸೂಚಿಸಿದ್ದು ಮುಂದಿನ ಪ್ರಕ್ರಿಯೆ ಪ್ರಗತಿಯಲ್ಲಿದೆ” ಎಂದರು.

“135 ಕುಟುಂಬಗಳನ್ನು ಸ್ಥಳಾಂತರಿಸಿ, ಪುನ‌ರ್ ವಸತಿ ಕಲ್ಪಿಸಿದ ನಂತರ ಎಂಟು ಸ್ಮಾರಕಗಳ ಸಂರಕ್ಷಣೆಯನ್ನು ಅಂದಾಜು ರೂ. 8-10 ಕೋಟಿಗಳ ವೆಚ್ಚದಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ಶೇ.50 ಮತ್ತು ಸರ್ಕಾರದ ವಂತಿಗೆ ಶೇ.50 ರಷ್ಟು ಅನುಪಾತದಲ್ಲಿ ವೆಚ್ಚವನ್ನು ಭರಿಸಿ ಸದರಿ ಟ್ರಸ್ಟ್ ವತಿಯಿಂದ ಸಂರಕ್ಷಣೆಯನ್ನು ಕೈಗೊಳ್ಳಲು ಚಾಲುಕ್ಯ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರ, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ಗಳ ನಡುವೆ ತ್ರಿಪಕ್ಷಿಯ ಒಡಂಬಡಿಕೆ ಮಾಡಿಕೊಳ್ಳಲಾಗಿದೆ” ಎಂದು ಹೇಳಿದರು.

“ಪಟ್ಟದಕಲ್ಲು ಪ್ರವಾಸಿ ತಾಣದಲ್ಲಿ ಪ್ರವಾಸಿಗರಿಗೆ ಪಾರ್ಕಿಂಗ್ ಸೌಲಭ್ಯ ಕೆಫೆಟೇರಿಯಾ, ಪ್ರವಾಸಿ ಮಾಹಿತಿ ಕೇಂದ್ರ ಕರಕುಶಲ ಮಳಿಗೆ ಇತ್ಯಾದಿ ಸೌಲಭ್ಯಗಳನ್ನು ಒಂದೇ ಸೂರಿನಲ್ಲಿ ಒದಗಿಸಲು 29.25 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಪ್ರವಾಸಿ ಪ್ಲಾಜಾ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಬಾಗಲಕೋಟೆ ಜಿಲ್ಲೆಯ ಬದಾಮಿಯಲ್ಲಿ 72 ಕೊಠಡಿಗಳ ತ್ರಿ-ಸ್ಟಾರ್ ಹೋಟೆಲ್ ನಿರ್ಮಾಣ ಕಾಮಗಾರಿಯನ್ನು 1,832 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಅನುಮೋದನೆ ನೀಡಿರುತ್ತದೆ. 987 ಲಕ್ಷ ರೂ. ಅನುದಾನವನ್ನು ಅನುಷ್ಠಾನ ಸಂಸ್ಥೆಗೆ ಬಿಡುಗಡೆ ಮಾಡಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ” ಎಂದರು.

“ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ವಿಜಯಪುರ ಜಿಲ್ಲೆಯ ಭೂತನಾಳ ಕೆರೆಯ ಪ್ರದೇಶದಲ್ಲಿ ರೂ.1674.00 ಲಕ್ಷಗಳ ಅಂದಾಜು ವೆಚ್ಚದಲ್ಲಿ 75 ಕೊಠಡಿಗಳ ತ್ರಿಸ್ಟಾರ್ ಹೋಟೆಲ್ ಕಾಮಗಾರಿ ಅನುಮೋದನೆ ನೀಡಿದ್ದು, ರೂ.1669.83 ಲಕ್ಷಗಳ ಅನುದಾನವನ್ನು ಅನುಷ್ಠಾನ ಸಂಸ್ಥೆಗೆ ಬಿಡುಗಡೆ ಮಾಡಲಾಗಿದ್ದು ಕಾಮಗಾರಿ ಅಂತಿಮ ಹಂತದಲ್ಲಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಸಂಬಂಧ ಬಂಡವಾಳ ವೆಚ್ಚಗಳು ಹಾಗೂ ಕೆ.ಟಿ.ವಿ.ಜಿ ಲೆಕ್ಕಶೀರ್ಷಿಕೆ ಅಡಿ ಕಳೆದ 5 ವರ್ಷಗಳಲ್ಲಿ ಇಲಾಖೆಯಿಂದ ರೂ.6793.00 ಲಕ್ಷಗಳ ಅಂದಾಜು ವೆಚ್ಚದಲ್ಲಿ 17 ಕಾಮಗಾರಿಗಳನ್ನು ಕೈಗೊಂಡಿದ್ದು, ರೂ.3688.99 ಲಕ್ಷಗಳ ಅನುದಾನವನ್ನು ಸಂಬಂಧಪಟ್ಟ ಅನುಷ್ಠಾನ ಸಂಸ್ಥೆಗಳಿಗೆ ಬಿಡುಗಡೆ ಮಾಡಲಾಗಿದ್ದು ಕಾಮಗಾರಿಗಳು ವಿವಿಧ ಹಂತದಲ್ಲಿವೆ” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments