ಕಳೆದ ಸಾಲಿನಲ್ಲಿ ಮಳೆ ಕೊರತೆಯಿಂದ ಉಂಟಾಗಿರುವ ತೊಗರಿ ಬೆಳೆ ಹಾನಿ ಅಂದಾಜಿಸಲಾಗಿದ್ದು, ರಾಜ್ಯಾದ್ಯಂತ ತೊಗರಿ ಬೆಳೆದ 1.86 ಲಕ್ಷ ರೈತರಿಗೆ 91.93 ಕೋಟಿ ರೂ. ಮೊತ್ತದ ವಿಮಾ ಪರಿಹಾರ ಲೆಕ್ಕಾಚಾರ ಮಾಡಿ ಇತ್ಯರ್ಥಪಡಿಸಲಾಗುತ್ತಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.
ವಿಧಾನಪರಿಷತ್ತಿನಲ್ಲಿ ಬುಧವಾರ ವಿರೋಧಪಕ್ಷದ ನಾಯಕ ಛಲವಾದಿ ನಾರಯಾಯಣಸ್ವಾಮಿ, ವಿರೋಧ ಪಕ್ಷದ ಮುಖ್ಯ ಸಚೇತಕರಾದ ಎನ್.ರವಿಕುಮಾರ್ ಮತ್ತು ಸದಸ್ಯರಾದ ಶಶಿಲ್ ಜಿ.ನಮೋಶಿ, ಡಾ. ತಳವಾರ್ ಸಾಬಣ್ಣ, ವೈ.ಎಂ.ಸತೀಶ್, ಹೇಮಲತಾ ನಾಯಕ್ ಅವರ ಪ್ರಶ್ನೆಗಳಿಗೆ ಉತ್ತರಿಸಿದರು.
“ಕಲಬುರ್ಗಿ, ವಿಜಯಪುರ, ಬೆಳಗಾವಿ, ಬೀದರ್, ಯಾದಗಿರಿ ಜಿಲ್ಲೆಗಳಲ್ಲಿ ತೊಗರಿ ಮುಖ್ಯ ಬೆಳೆಯಾಗಿದ್ದು, ಸೆಪ್ಟೆಂಬರ್ ನಿಂದ ನವೆಂಬರ್ ವರೆಗೆ ವಾಡಿಕೆಗಿಂತ ಕಡಿಮೆ ಮಳೆಯಾಗಿ ತೇವಾಂಶ ಕುಸಿತದಿಂದ ಬೆಳೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ. ಇದಕ್ಕೆ ಕಳಪೆ ಬಿತ್ತನೆ ಬೀಜ ಕಾರಣವಲ್ಲ ಎಂಬುದನ್ನು ಪ್ರಯೋಗಾಲಯದ ಮೂಲಕ ಗುಣಮಟ್ಟ ಖಾತರಿ ಮೂಲಕ ಖಚಿತಪಡಿಸಿಕೊಳ್ಳಲಾಗಿದೆ” ಎಂದು ಸ್ಪಷ್ಟಪಡಿಸಿದರು.
“ರಾಜ್ಯಾದ್ಯಂತ 2024-25 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 4.09 ಲಕ್ಷ ರೈತರು ತೊಗರಿ ಬೆಳೆಗೆ ವಿಮೆ ಮಾಡಿಸಿದ್ದಾರೆ. ಈ ಪೈಕಿ, ಕಲಬುರಗಿ ಜಿಲ್ಲೆಯಲ್ಲಿ 1.70 ಲಕ್ಷ ರೈತರು, ವಿಜಯಪುರ ಜಿಲ್ಲೆಯಲ್ಲಿ 1.08 ಲಕ್ಷ ರೈತರು, ಬೆಳಗಾವಿ ಜಿಲ್ಲೆಯಲ್ಲಿ 1,213 ರೈತರು ಬೀದರ್ ಜಿಲ್ಲೆಯಲ್ಲಿ 82,384 ರೈತರು ಮತ್ತು ಯಾದಗಿರಿ ಜಿಲ್ಲೆಯಲ್ಲಿ 6,390 ರೈತರು, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ನೋಂದಾಯಿಸಿದ್ದಾರೆ. ಸ್ಥಳೀಯ ವಿಕೋಪದಡಿ ರಾಜ್ಯಾದ್ಯಂತ ತೊಗರಿ ಬೆಳೆದ 1.86 ಲಕ್ಷ ರೈತರಿಗೆ 91.93 ಕೋಟಿ ರೂ. ಮೊತ್ತದ ವಿಮಾ ಪರಿಹಾರ ಲೆಕ್ಕಾಚಾರ ಮಾಡಿ ಇತ್ಯರ್ಥಪಡಿಸಲಾಗುತ್ತಿದೆ” ಎಂದು ಸಚಿವರು ವಿವರಿಸಿದರು.
“ಕಲಬುರಗಿ ಜಿಲ್ಲೆಯ 1.69ಲಕ್ಷ ರೈತರಿಗೆ 70.47 ಕೋಟಿ ರೂ. ವಿಮಾ ಪರಿಹಾರವನ್ನು ಇತ್ಯರ್ಥಪಡಿಸಲಾಗಿದೆ. ಇದಲ್ಲದೇ, ರಾಜ್ಯದಲ್ಲಿ ಕೊಯ್ಲೋತ್ತರ ಬೆಳೆ ನಷ್ಟಕ್ಕಾಗಿ 2.74 ಕೋಟಿ ವಿಮೆ ಪರಿಹಾರ ಇತ್ಯರ್ಥಪಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ ಪೈಕಿ, ಕಲಬುರಗಿ ಜಿಲ್ಲೆಯ 2.54 ಕೋಟಿ ರೂ. ಒಳಗೊಂಡಿರುತ್ತದೆ” ಎಂದು ಸದನಕ್ಕೆ ಉತ್ತರ ನೀಡಿದರು.
ತೊಗರಿಗೆ ಹೆಚ್ಚುವರಿ ಬೆಂಬಲ ಬೆಲೆ
ಮಾರುಕಟ್ಟೆ ದರಕ್ಕಿಂತ ತೊಗರಿಗೆ ಕೇಂದ್ರ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆ ಕಡಿಮೆ ಇರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಪ್ರತಿ ಕ್ವಿಂಟಾಲ್ಗೆ 450 ರೂ. ಹೆಚ್ಚುವರಿ ಬೆಂಬಲ ಬೆಲೆ ಒದಗಿಸಿ ರೈತರ ನೆರವಿಗೆ ಧಾವಿಸಿದೆ.
2024-25ನೇ ಸಾಲಿನಲ್ಲಿ ಪ್ರತಿ ಕ್ವಿಂಟಾಲ್ ತೊಗರಿಗೆ 7,550 ರೂ. ರಂತೆ ಕೇಂದ್ರ ಸರ್ಕಾರವು ಬೆಂಬಲ ಬೆಲೆಯನ್ನು ಘೋಷಿಸಿರುತ್ತದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಬೆಂಬಲ ಬೆಲೆಗಿಂತ ಕಡಿಮೆ ಧಾರಣೆಯಲ್ಲಿ ಮಾರಾಟವಾಗಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾ ಟಾಸ್ಕ್ ಫೋರ್ಸ್ ಶಿಫಾರಸ್ಸಿನ ಅನ್ವಯ, ರಾಜ್ಯ ಸರ್ಕಾರದ ವತಿಯಿಂದ ಕೇಂದ್ರ ಸರ್ಕಾರದ ಅನುಮೋದನೆ ಪಡೆದು ಗರಿಷ್ಠ 3,06,150 ಮೆಟ್ರಿಕ್ ಟನ್ ಎಫ್.ಎ.ಕ್ಯೂ ಗುಣಮಟ್ಟದ ತೊಗರಿಯನ್ನು ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ವಿಜಯಪುರ, ಕೊಪ್ಪಳ, ಬೆಳಗಾವಿ, ಬಳ್ಳಾರಿ, ವಿಜಯನಗರ, ಬಾಗಲಕೋಟೆ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಹಾಗೂ ಕೋಲಾರ ಜಿಲ್ಲೆಗಳ ರೈತರಿಂದ ಬೆಂಬಲ ಬೆಲೆ ರೂ.7,550/-ರ ಜೊತೆಗೆ ರಾಜ್ಯ ಸರ್ಕಾರದ ವತಿಯಿಂದ ರೂ.450/- ಗಳ ಪ್ರೋತ್ಸಾಹಧನ ಪ್ರತಿ ಕ್ವಿಂಟಾಲ್ಗೆ ರೂ.8,000/- ರಂತೆ ಪ್ರತಿ ರೈತರಿಂದ ಗರಿಷ್ಟ 40 ಕ್ವಿಂಟಾಲ್ ಖರೀದಿ ಪ್ರಮಾಣವನ್ನು ನಿಗದಿಪಡಿಸಿದೆ.
ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗುವಂತೆ PACS/TAPCMS/ FPO ಗಳ ಮೂಲಕ ಒಟ್ಟು 516 ಖರೀದಿ ಕೇಂದ್ರಗಳನ್ನು ತೆರೆದು ದಿ:05.03.2025 ರ ಅಂತ್ಯಕ್ಕೆ 79,409 ನೋಂದಾಯಿತ ರೈತರ ಪೈಕಿ, 19,323 ರೈತರಿಂದ 25,401 ಮೆಟ್ರಿಕ್ ಟನ್ ಪ್ರಮಾಣದ ತೊಗರಿಯನ್ನು ಖರೀದಿಸಲಾಗಿರುತ್ತದೆ. ಖರೀದಿ ಪ್ರಕ್ರಿಯೆಯು 02.04.2025 ರವರೆಗೂ ಚಾಲ್ತಿಯಲ್ಲಿರುತ್ತದೆ.