ಬಿಜೆಪಿಯಲ್ಲಿ ಮ್ಯೂಸಿಕಲ್ ಚೇರ್ ಆಡಿ ಮೂರು ಸಿಎಂ ಬದಲಾವಣೆಯಾದರು. ನಮ್ಮಲ್ಲಿ ಅಂತಹ ಚೇರ್ ಇಲ್ಲ. ಸಿಎಂ ಸಿದ್ದರಾಮಯ್ಯ ವಾರ ಬಗ್ಗೆ ಮಾತನಾಡಲು ಬಿಜೆಪಿಗೆ ಯೋಗ್ಯತೆ ಇಲ್ಲ ಎಂದು ಸಚಿವ ಶಿವರಾಜ್ ತಂಗಡಗಿ ಕಿಡಿಕಾರಿದರು.
‘ಕಾಂಗ್ರೆಸ್ ಪಕ್ಷದಲ್ಲಿ ಯಾರು ಸಿಎಂ ಆಗಬೇಕೆಂದು ಮ್ಯೂಸಿಕಲ್ ಚೇರ್ ನಂತೆ ಸ್ಪರ್ಧೆ ನಡೆಯುತ್ತಿದೆ’ ಎಂದು ಹೇಳಿಕೆ ನೀಡಿದ್ದ ವಿಪಕ್ಷ ನಾಯಕ ಆರ್.ಅಶೋಕ್ಗೆ ಶಿವರಾಜ್ ತಂಗಡಗಿ ಕೊಪ್ಪಳದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿ ಟಾಂಗ್ ಕೊಟ್ಟಿದ್ದಾರೆ.
“ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಸಂವಿಧಾನದ ಕಗ್ಗೊಲೆಯಾಗುತ್ತಿದೆ. ಅಡ್ಡದಾರಿ ಹಿಡಿದು ಸರ್ಕಾರಕ್ಕೆ ತೊಂದರೆ ಕೊಡುವ ಕೆಲಸವಾಗುತ್ತಿದೆ. ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದ ಸಿಎಂ ಸಿದ್ದರಾಮಯ್ಯರನ್ನ ಮಾನಸಿಕವಾಗಿ ಕುಗ್ಗಿಸಲು ಯತ್ನಿಸುತ್ತಿದ್ದಾರೆ” ಎಂದು ಹರಿಹಾಯ್ದರು.
“ನಮ್ಮ ಸರ್ಕಾರವನ್ನು ಕುಗ್ಗಿಸುವ ತಂತ್ರಕ್ಕೆ ನಾವು ಹೆದರಲ್ಲ. ರಾಜ್ಯಪಾಲರ ನಡೆ ಇಡೀ ರಾಜ್ಯದ ಜನತೆಗೆ ಗೊತ್ತಾಗಿದೆ. ರಾಜ್ಯಪಾಲರು ಬಿಜೆಪಿ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಮೊದಲು ರಾಜ್ಯಪಾಲರು ಕರ್ನಾಟಕ ಬಿಟ್ಟು ಹೋಗಲಿ ರಾಜ್ಯಪಾಲರು ರಾಜ್ಯ ಬಿಟ್ಟು ಹೋಗುವಂತೆ ಅಭಿಯಾನ ಮಾಡುತ್ತೇವೆ” ಎಂದು ಶಿವರಾಜ್ ತಂಗಡಗಿ ತಿಳಿಸಿದರು.
“ಸಿಎಂ ಸಿದ್ದರಾಮಯ್ಯ ತಪ್ಪು ಮಾಡಿದ್ರೆ ನಮ್ಮ ಹೈಕಮಾಂಡ್ ಸುಮ್ಮನೆ ಇರ್ತಿತ್ತಾ? ಕಾನೂನು ಸುಮ್ಮನೆ ಇರುತ್ತಿತ್ತಾ” ಎಂದು ತಂಗಡಗಿ ಪ್ರಶ್ನಿಸಿದರು.