ಮನುಷ್ಯನ ಶ್ರೇಷ್ಠತೆಯ ವ್ಯಸನಕ್ಕೆ ತಮ್ಮ ಅನುಭಾವದ ಮೂಲಕ ಮದ್ದು ಅರೆದವರು ಕೈವಾರ ತಾತಯ್ಯ ಅವರು,
ಅದ್ಯಾತ್ಮ ಅಂದರೆ ಚರ್ಮಶುದ್ಧಿ ಅಲ್ಲ: ಅಂತರಂಗದ ಶುದ್ದಿ ಎಂದು ಬದುಕಿ ತೋರಿಸಿದವರು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಅಭಿಪ್ರಾಯಪಟ್ಟರು.
ಕೈವಾರ ತಾತಯ್ಯ ಅವರ 300ನೇ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, “ಜಾತಿ, ಧರ್ಮ, ಲಿಂಗ ಹಣ, ಅಂತಸ್ತು ಎಲ್ಲದರ ಶ್ರೇಷ್ಠತೆಯ ವ್ಯಸನವನ್ನು ನಿವಾಳಿಸಿದ ಕೈವಾರದ ಶ್ರೀ ಯೋಗಿ ನಾರೇಯಣ ಯತೀಂದ್ರರು “ತಾತಯ್ಯ” ಅಂತಲೇ ಜನಮಾನಸದಲ್ಲಿ ನೆಲೆಯಾಗಿದ್ದಾರೆ. ಅಧ್ಯಾತ್ಮ ಎಂದರೆ ಬಹಳ ಕಠಿಣ, ಎಲ್ಲರ ಪಾಲಿನ ಪ್ರಸಾದ ಅಲ್ಲ ಎನ್ನುವ ಶ್ರೇಷ್ಠತೆಯನ್ನು ಅಳಿಸಿ, “ಕಠಿಣವಾದ ಅಧ್ಯಾತ್ಮದ ಸಾರವನ್ನು ಸರಳ ಭಾಷೆಯಲ್ಲಿ ಸಮಾಜದ ಕಟ್ಟ ಕಡೆಯವರಿಗೂ ತಲುಪಿಸಿದ ಸಂತ ಶ್ರೇಷ್ಠರು ತಾತಯ್ಯ ಎಂದರು.
“ಕರ್ನಾಟಕದ ಶ್ರೇಷ್ಠ ಸಂತರು ದಾರ್ಶನಿಕರು ಮತ್ತು ಸಮಾಜ ಸುಧಾರಕರಲ್ಲಿ ಒಬ್ಬರಾದ ತಾತಯ್ಯ ತೆಲುಗು ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ತಮ್ಮ ಅನುಭಾವವನ್ನೇ ತತ್ವಪದಗಳನ್ನಾಗಿ ರಚಿಸಿ ಹಾಡಿದರು. ಜನಸಾಮಾನ್ಯರಿಗೆ ಅಧ್ಯಾತ್ಮದ ದಾರಿಯನ್ನು ತೋರಿಸಿದ ಸೂಫಿಗಳು, ಸಂತರ ಪರಂಪರೆಯನ್ನು ಮುಂದುವರೆಸಿದರು. ಅಧ್ಯಾತ್ಮ ಅಂದರೆ ಚರ್ಮ ಶುದ್ಧಿಯ ಸಂಪ್ರದಾಯವಲ್ಲ, ಅಂತರಂಗ ಶುದ್ಧಿಯ ಹಾದಿ ಎನ್ನುವುದನ್ನು ಬದುಕಿ ತೋರಿಸಿದರು” ಎಂದು ವಿವರಿಸಿದರು.
“ಮನುಷ್ಯ ನಿರ್ಮಿಸಿದ ಎಲ್ಲವೂ ಕಡೆ ಗಾಲಕ್ಕೆ, ಕೇಡುಗಾಲಕ್ಕೆ ಜಾರುವ ನೈತಿಕ ಅವನತಿಯನ್ನು ತಾತಯ್ಯ 300 ವರ್ಷಗಳ ಹಿಂದೆಯೇ ಹಾಡಿ ಮನುಕುಲವನ್ನು ಎಚ್ಚರಿಸಿದರು. ಈ ಕಾರಣಕ್ಕೇ ತಾತಯ್ಯ ಬರೆದಿರುವ ‘ಕಾಲಜ್ಞಾನ’ ಇಂದಿಗೂ ಪ್ರಸ್ತುತವಾಗಿದೆ. ಮಾನವೀಯತೆ ಮತ್ತು ಭಕ್ತಿಯೇ ಮುಕ್ತಿಗೆ ದಾರಿ ಎಂದು ಬೋಧಿಸಿ, ತಾತಯ್ಯ ಬರೆದ ‘ಕಾಲಜ್ಞಾನ’ ಕೇವಲ ಭವಿಷ್ಯವಾಣಿಯಲ್ಲ, ಅದು ಅಧ್ಯಾತ್ಮ ಮತ್ತು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಒಂದು ದರ್ಶನ” ಎಂದು ಹೇಳದರು.
ತಾತಯ್ಯನವರು ವಿಜ್ಞಾನದ ಬೆಳವಣಿಗೆಯನ್ನು “ಕಬ್ಬಿಣದ ಕುದುರೆಗಳು ಓಡುತ್ತವೆ”, “ಆಕಾಶದಲ್ಲಿ ಪಕ್ಷಿಗಳಂತೆ ಮನುಷ್ಯ ಹಾರುತ್ತಾನೆ” ಎಂಬ ರೂಪಕಗಳ ಮೂಲಕ ವರ್ಣಿಸಿದ್ದರು. ಇಂದು ನಾವು ಬಳಸುವ ರೈಲು ಮತ್ತು ವಿಮಾನಗಳನ್ನು ಅವರು ಅಂದೇ ಊಹಿಸಿದ್ದರು. ತಾತಯ್ಯನವರು ಕೇವಲ ಭಯ ಹುಟ್ಟಿಸಲು ಕಾಲಜ್ಞಾನ ಬರೆಯಲಿಲ್ಲ. “ಕಾಲ ಬದಲಾದರೂ ಮನುಷ್ಯ ತನ್ನ ಅಂತರಾತ್ಮವನ್ನು ಶುದ್ಧವಾಗಿಟ್ಟುಕೊಂಡು, ಭಕ್ತಿಯ ಹಾದಿಯಲ್ಲಿ ನಡೆದರೆ ಎಂತಹ ಕಠಿಣ ಕಾಲವನ್ನೂ ಸುಲಭವಾಗಿ ದಾಟಬಹುದು ಎನ್ನುವ ಸಂದೇಶ ನೀಡಿದ್ದಾರೆ” ಎಂದು ವಿವರಿಸಿದರು.


