ಪ್ರಧಾನಿ ನರೇಂದ್ರ ಅವರೇ, ವಿಧಾನಸಭಾ ಚುನಾವಣೆಗಾಗಿ ಮೂರು ದಿನಕ್ಕೊಮ್ಮೆ ಕೈಬೀಸಿ ಹೋದರೂ ಕನ್ನಡಿಗರು ಕ್ಯಾರೇ ಅಂದಿಲ್ಲ. ಈಗ ನಿಮ್ಮ ತಗಡು ಚುನಾವಣಾ ಭಾಷಣ ಕೇಳುವರೇ” ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಎಕ್ಸ್ ತಾಣದಲ್ಲಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, “ಎಸ್‌ಬಿಐ ಬ್ಯಾಂಕನ್ನೇ ಏಟಿಎಂ ಮಾಡಿಕೊಂಡಿರುವ ತಾವು ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾತಾಡುವ ಅರ್ಹತೆ ಹೊಂದಿಲ್ಲ. ದಮ್ಮು ತಾಕತ್ತು ಇದ್ದರೆ ಚುನಾವಣಾ ಬಾಂಡ್ ಬಗ್ಗೆ ಮಾತಾಡಿ” ಎಂದು ಸವಾಲು ಹಾಕಿದೆ.
“ಹಿಪಾಕ್ರಸಿಗೆ ಮತ್ತೊಂದು ಹೆಸರೇ ಮೋದಿ! ಶಿವಮೊಗ್ಗದಲ್ಲಿ ವೇದಿಕೆ ಮೇಲೆ ಯಡಿಯೂರಪ್ಪರನ್ನು ಕೂರಿಸಿಕೊಂಡು, ಆ ಕಡೆ ಅಭ್ಯರ್ಥಿಯಾಗಿರುವ ದೊಡ್ಡ ಮಗ, ಈ ಕಡೆ ರಾಜ್ಯಾಧ್ಯಕ್ಷನಾದ ಚಿಕ್ಕ ಮಗನನ್ನು ಕೂರಿಸಿಕೊಂಡಿದ್ದ ಮೋದಿ ಅವರೇ ನಿಮ್ಮ ಡೋಂಗಿತನ ಬಯಲಾಗಿದೆ. ನಿಮ್ಮ ಟೆಲಿಪ್ರಾಂಪ್ಟರ್ ನಿಂದ “ಕುಟುಂಬ ರಾಜಕೀಯ“ ಎಂಬ ಪದವನ್ನು ಅಳಿಸಿಬಿಡಿ. ಅಥವಾ ರಾಜ್ಯ ಬಿಜೆಪಿಗೆ “BSY & ಸನ್ಸ್ ಪಾರ್ಟಿ” ಎಂದು ನಾಮಕರಣ ಮಾಡಿಬಿಡಿ” ಎಂದು ಟೀಕಿಸಿದೆ.
“ನರೇಂದ್ರ ಅವರೇ, ನೀವು ಮತ ಕೇಳುತ್ತಿರುವುದು ಯಡಿಯೂರಪ್ಪನವರ ಮಗ ಎನ್ನುವುದು ತಿಳಿದಿದೆಯೇ? ನಿಮ್ಮ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪನವರ ಮಗ ಎನ್ನುವುದು ತಿಳಿದಿದೆಯೇ? ಇದು ಕುಟುಂಬ ರಾಜಕಾರಣ ಅಲ್ಲವೇ? “ಕುಟುಂಬ ರಾಜಕಾರಣ“ ಎಂದು ಟೀಕಿಸಿ ಈಗ ರಾಜಕೀಯ ಕುಟುಂಬದ ಪರ ಮತ ಕೇಳುವ ಮೋದಿಯದ್ದು ಹಿಪಾಕ್ರಸಿ ಅಲ್ಲದೆ ಇನ್ನೇನು” ಎಂದು ಕುಟುಕಿದೆ.
“ಕಷ್ಟಕ್ಕೆ ಬರಲಿಲ್ಲ, ಚುನಾವಣೆಗೆ ಬಾರದೆ ಇರುವುದಿಲ್ಲ“ ಇದು ಮೋದಿ ಅವರ ಧ್ಯೇಯವಾಕ್ಯ! ಕರ್ನಾಟಕಕ್ಕೆ ಬರ ಪರಿಹಾರ ನೀಡಿ ಎಂದು ಪತ್ರ ಬರೆದಿದ್ದು ಆಯ್ತು, ಮುಖ್ಯಮಂತ್ರಿಗಳು ಭೇಟಿಯಾಗಿ ಮನವಿ ಮಾಡಿದ್ದೂ ಆಯ್ತು, ಆದರೂ ನಯಾಪೈಸೆ ಹಣ ಬಿಡುಗಡೆ ಮಾಡದೆ ಯಾವ ಮುಖವಿಟ್ಟುಕೊಂಡು ಮತ ಕೇಳಲು ಬಂದಿದ್ದೀರಿ? ಕೇಂದ್ರ ಬರ ಅಧ್ಯಯನ ತಂಡ ಮಾಡಿದ ಅಧ್ಯಯನ ವರದಿ ಎಲ್ಲಿ ಹೋಯ್ತು, ಫಲಶೃತಿ ಏನಾಯ್ತು ಮೋದಿಯವರೇ” ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
“ಬರದಿಂದ ಕಂಗಾಲಾಗಿರುವ ಕನ್ನಡಿಗರಿಗೆ ಕೇಂದ್ರ ಸರ್ಕಾರ ನೀಡಿದ ಒಂದೇ ಒಂದು ನೆರವು ನೀಡಿದ ಉದಾಹರಣೆ ಇದ್ದರೆ ಮೋದಿ ಅವರು ಜನತೆಗೆ ತಿಳಿಸಲಿ. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ದಿನಗಳನ್ನು 100ರಿಂದ 150 ದಿನಗಳಿಗೆ ಏರಿಸುವಂತೆ ನಮ್ಮ ಸರ್ಕಾರ ಮನವಿ ಮಾಡಿದ್ದರೂ ಕೂಲಿ ದಿನಗಳನ್ನು ಏರಿಸಲಿಲ್ಲವೇಕೆ? ಭಾರತದ ಬಡ ಜನರು “ಚುನಾವಣಾ ಬಾಂಡ್” ಖರೀದಿಸಲಿಲ್ಲ ಎನ್ನುವ ಅಸಹನೆಯೇ?” ಎಂದು ವಾಗ್ದಾಳಿ ನಡೆಸಿದೆ.