Homeಕರ್ನಾಟಕಬಡವರಿಗೆ 15 ಸಾವಿರ ಆಶ್ರಯ ಮನೆ ನೀಡಿದ್ದು ಇದೇ ಶಾಮನೂರು ಶಿವಶಂಕರಪ್ಪ: ಡಿ ಕೆ ಶಿವಕುಮಾರ್

ಬಡವರಿಗೆ 15 ಸಾವಿರ ಆಶ್ರಯ ಮನೆ ನೀಡಿದ್ದು ಇದೇ ಶಾಮನೂರು ಶಿವಶಂಕರಪ್ಪ: ಡಿ ಕೆ ಶಿವಕುಮಾರ್

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ದಿವಂಗತ ಶಾಮನೂರು ಶಿವಶಂಕರಪ್ಪ ಅವರು ಮಾಡಿರುವ ಕೆಲಸ ನೋಡಿ ನನಗೆ ಬಹಳ ಸಂತೋಷವಾಗಿದೆ. ನಾವು ಅವರಿಂದ ಕಲಿಯುವುದಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ದಾವಣಗೆರೆಯಲ್ಲಿ ಉಪಚುನಾವಣೆ ಪ್ರಚಾರದ ಬಗ್ಗೆ ಮಾಧ್ಯಮಗಳು ಕೇಳಿದಾಗ, “ಈ ಕ್ಷೇತ್ರದಲ್ಲಿ ನೂರಕ್ಕೆ 98% ಮಹಿಳೆಯರು ಗ್ಯಾರಂಟಿ ಯೋಜನೆ ಫಲಾನುಭವಿಗಳಾಗಿದ್ದಾರೆ. ಸುಮಾರು 60 ಸಾವಿರ ಮಹಿಳೆಯರು ಗೃಹಲಕ್ಷ್ಮಿ ಯೋಜನೆ ಪಡೆಯುತ್ತಿದ್ದರೆ, 61 ಸಾವಿರ ಕುಟುಂಬಗಳು ಗೃಹಜ್ಯೋತಿ ಯೋಜನೆ ಪಡೆಯುತ್ತಿವೆ. 1.45 ಲಕ್ಷ ಜನ ಅನ್ನಭಾಗ್ಯ ಯೋಜನೆ ಫಲಾನುಭವಿಗಳಾಗಿದ್ದಾರೆ. ಅವರೆಲ್ಲರನ್ನು ಭೇಟಿ ಮಾಡಿದಾಗ, ಯಾರು ಏನಾದರೂ ಮಾಡಿಕೊಳ್ಳಲಿ ನಾವು ಮಾತ್ರ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವುದಾಗಿ ಇಲ್ಲಿನ ಮಹಿಳೆಯರು ತೀರ್ಮಾನಿಸಿದ್ದಾರೆ” ಎಂದರು.

“ಶಾಮನೂರು ಶಿವಶಂಕರಪ್ಪ ಅವರು ಈ ಭಾಗದಲ್ಲಿ ಆಸ್ಪತ್ರೆ, ಸಭಾಂಗಣ, ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಿ ಸಹಾಯ ಮಾಡಿದ್ದಾರೆ. ನಾನು ಅನೇಕ ವರ್ತಕರನ್ನು ಭೇಟಿ ಮಾಡಿದ್ದು, ಅವರು ಶಿವಶಂಕರಪ್ಪ ಅವರ ನಾಯಕತ್ವದಲ್ಲಿ ನಮ್ಮ ವ್ಯಾಪಾರ ವ್ಯವಹಾರಕ್ಕೆ ಯಾವುದೇ ತೊಂದರೆ ಇರಲಿಲ್ಲ. ನಾನು ಈ ಕ್ಷೇತ್ರದ ಒಳಭಾಗಗಳಲ್ಲಿ ಪ್ರಚಾರಕ್ಕಾಗಿ ಸಂಚಾರ ಮಾಡಿದಾಗ, ಇಲ್ಲಿನ ರಸ್ತೆ, ಮನೆಗಳನ್ನು ನೋಡಿ ಬಹಳ ಚೆನ್ನಾಗಿ ಅಭಿವೃದ್ಧಿ ಮಾಡಿದ್ದಾರೆ ಎಂದು ಸಂತೋಷವಾಯಿತು. ಅಗಲವಾದ ರಸ್ತೆಗಳು, ಕಾಂಕ್ರೀಟ್ ರಸ್ತೆಗಳು, ಉದ್ಯಾನಗಳು, ಬಸ್ ನಿಲ್ದಾಣ ಸೇರಿದಂತೆ ಎಲ್ಲ ಪ್ರದೇಶಗಳನ್ನು ಬಹಳ ಉತ್ತಮವಾಗಿ ನಿರ್ವಹಣೆ ಮಾಡಿದ್ದಾರೆ. ಬೆಂಗಳೂರಿಗಿಂತ ಉತ್ತಮವಾಗಿ ಅಭಿವೃದ್ಧಿ ಮಾಡಿದ್ದಾರೆ” ಎಂದು ತಿಳಿಸಿದರು.

“ಬಡವರಿಗೆ 15 ಸಾವಿರ ಆಶ್ರಯ ಮನೆಗಳನ್ನು ನೀಡಿದ್ದು, ಎಲ್ಲಾ ಸಮುದಾಯಗಳಿಗೆ ಪ್ರತ್ಯೇಕವಾಗಿ ಜಾಗ ನೀಡಿದ್ದು, ಇವರ ಕಾರ್ಯ ನೋಡಿ ನಾವು ಕಲಿಯಬೇಕಾದದ್ದು ಸಾಕಷ್ಟಿವೆ. ಕೋವಿಡ್ ಸಮಯದಲ್ಲಿ ಶಿವಶಂಕರಪ್ಪ ಅವರು ಉಚಿತ ಲಸಿಕೆ ನೀಡಿದ್ದನ್ನು ಎಲ್ಲರೂ ಸ್ಮರಿಸುತ್ತಿದ್ದಾರೆ. ಇದೆಲ್ಲವೂ ನಮಗೆ ಶಕ್ತಿ ನೀಡಿದೆ. ನಿನ್ನೆ ಸಮರ್ಥ ಅವರ ಭಾಷಣ ಕೇಳಿದೆ. ಅವರ ಮಾತು ಕೇಳಿ ಉತ್ತಮ ಅಭ್ಯರ್ಥಿ ಆಯ್ಕೆ ಮಾಡಿದ ಸಮಾಧಾನ ನಮಗಿದೆ. ಜನರು ಶಿವಶಂಕರಪ್ಪ ಅವರಿಗಿಂತ ಹೆಚ್ಚಿನ ಅಂತರದಲ್ಲಿ ಸಮರ್ಥ್ ಅವರನ್ನು ಗೆಲ್ಲಿಸುವ ವಿಶ್ವಾಸ ನಮಗಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎರಡೂ ಕ್ಷೇತ್ರಗಳಲ್ಲಿ ಗೆಲುವು ನಮ್ಮದೇ

“ಉಪಚುನಾವಣೆಯಲ್ಲಿ ನಾವು ಎರಡೂ ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವಿದೆ. ಜನರು ಬೆಲೆ ಏರಿಕೆಯಿಂದ ಬಳಲುತ್ತಿದ್ದು, ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ನಮ್ಮ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿರುವುದರಿಂದ ಬಡವರು ನಿರಾಳವಾಗಿದ್ದಾರೆ. ಇಲ್ಲವಾಗಿದ್ದರೆ, ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿತ್ತು. ಈ ಪರಿಸ್ಥಿತಿಯಲ್ಲಿ ಜನರ ಅಗತ್ಯ ವಸ್ತುಗಳನ್ನು ಸರಿಯಾಗಿ ಪೂರೈಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸುತ್ತೇನೆ” ಎಂದು ತಿಳಿಸಿದರು.

ಮೋದಿ ಸರ್ಕಾರ ಸಾಲ ಮಾಡಿಲ್ಲವೇ?

ಬಿಜೆಪಿಯವರು ಸರ್ಕಾರವನ್ನು ಸಾಲದ ಸರ್ಕಾರ ಎಂದು ಟೀಕೆ ಮಾಡುತ್ತಿರುವ ಬಗ್ಗೆ ಕೇಳಿದಾಗ, “ಹೌದಪ್ಪಾ, ನಾವು ಸಾಲ ಮಾಡಿದ್ದೀವಿ ಅಂದುಕೊಳ್ಳೋಣ. ಪ್ರಧಾನಿ ನರೇಂದ್ರ ಮೋದಿ ಅವರು ಸಾಲ ಪಡೆದಿಲ್ಲವೇ? ಬೆಲೆ ಏರಿಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರದಿಂದ ಸಾಧ್ಯವಾಗಿಲ್ಲ. ಈಗ ನಾವು ಜನರಿಗೆ ಹಣ ಕೊಟ್ಟಿರುವುದಕ್ಕೆ ಅವರ ಮೇಲೆ ಹೊರೆ ಕಡಿಮೆಯಾಗಿದೆ. ಕೇಂದ್ರ ಸರ್ಕಾರ ಕೂಡ ನಮ್ಮ ರೀತಿ ಯೋಜನೆ ನೀಡಲಿ. ಕೇಂದ್ರ ಸರ್ಕಾರ ಕೂಡ ಜನರ ಖಾತೆಗೆ ತಿಂಗಳಿಗೆ 10 ಸಾವಿರ ಹಾಕಲಿ. ಜನರ ಖಾತೆಗೆ 15 ಲಕ್ಷ ಹಾಕುತ್ತೇವೆ. ಅಚ್ಛೇದಿನ ತರುತ್ತೇವೆ ಎಂದಿದ್ದರಲ್ಲಾ ಬಂತಾ? ನಮಗೆ ಬೇಡ, ನಿಮಗೆ ಬಂದಿದೆಯಾ? ನಾವು ಐದು ಗ್ಯಾರಂಟಿ ಯೋಜನೆಗಳ ಮೂಲಕ ಬಡ ಕುಟುಂಬಕ್ಕೆ ತಿಂಗಳಿಗೆ 5 ಸಾವಿರದಷ್ಟು ನೆರವು ನೀಡುತ್ತಿದ್ದೇವೆ. ಬಿಜೆಪಿಯವರು ನೆರವು ನೀಡಿದ್ದಾರಾ? ಅವರದ್ದು ಏನಿದ್ದರೂ ಖಾಲಿ ಮಾತು. ಇಲ್ಲಿನ ಅಕ್ಕಿಗೆ, ಇಲ್ಲಿನ ಅರಿಷಿನ ಸೇರಿಸಿ ಇದು ಅಯೋಧ್ಯೇಯಿಂದ ಬಂದಿರುವ ಅಕ್ಷತೆ ಎಂದು ಹಂಚಿದವರು ಅವರು. ಅದೇ ರೀತಿ ಈಗ ಬಿಜೆಪಿಯವರು ಗ್ಯಾಸ್ ಸಿಲಿಂಡರ್ ಅನ್ನು ಮನೆ ಬಾಗಿಲಿಗೆ ತೆಗೆದುಕೊಂಡು ಹೋಗಿ ಹಂಚಲಿ. ಪೆಟ್ರೋಲ್ ಬಂಕ್ ಗಳಲ್ಲಿ ಉಜ್ವಲ ಯೋಜನೆ ಬಗ್ಗೆ ಮೋದಿ ಅವರ ಫೋಟೋ ಇರುವ ಜಾಹಿರಾತು ಈಗ ಏನಾಯ್ತು? ಕೇವಲ ಮಾತನಾಡಿದರೆ ಏನೂ ಸುಖವಿಲ್ಲ. ಅವರು ಜನರ ಬಳಿ ಮತ ಕೇಳುವ ಎಲ್ಲಾ ಅರ್ಹತೆ ಕಳೆದುಕೊಂಡಿದ್ದಾರೆ. ಈ ಸರ್ಕಾರ ಸುಭದ್ರವಾಗಿದ್ದು, ಬಲಿಷ್ಠವಾಗಿದೆ. 2028ರಲ್ಲೂ ಜನ ನಮಗೆ ಆಶೀರ್ವಾದ ಮಾಡಲಿದ್ದಾರೆ” ಎಂದು ಹೇಳಿದರು.

ಶಾಸಕರು, ಕಾರ್ಯಕರ್ತರು ಶಿಸ್ತಿನ ಸಿಪಾಯಿಗಳಂತೆ ಶ್ರಮಿಸುತ್ತಿದ್ದಾರೆ

ಈ ಚುನಾವಣೆ ಡಿಕೆಶಿ ವರ್ಸಸ್ ಸಿದ್ದರಾಮಯ್ಯ ಎಂದು ಹೇಳುತ್ತಿದ್ದಾರೆ ಎಂದು ಕೇಳಿದಾಗ, “ನಾವು ಹಿಂದೆಯೂ ಒಠ್ಟಾಗಿ ಈ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದು, ಮುಂದೆಯೂ ಅಧಿಕಾರಕ್ಕೆ ತರುತ್ತೇವೆ. ನನ್ನ ಜತೆಗೆ ಎಲ್ಲಾ ಕಾರ್ಯಕರ್ತರು, ಪಕ್ಷದ ಸದಸ್ಯತ್ವ ಪಡೆದ 78 ಲಕ್ಷ ಸದಸ್ಯರು ಇದ್ದಾರೆ. ಎಲ್ಲರೂ ಯೋಧರಂತೆ ಬಂದು ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಇದು ನನ್ನ ಒಬ್ಬನ ಸರ್ಕಾರವಲ್ಲ, ಸಿದ್ದರಾಮಯ್ಯ ಅವರೊಬ್ಬರ ಸರ್ಕಾರವಲ್ಲ. ಎಲ್ಲಾ ಶಾಸಕರು ಶಿಸ್ತಿನ ಸಿಪಾಯಿಗಳಂತೆ ಶ್ರಮಿಸುತ್ತಿದ್ದಾರೆ. ಸಾವಿರಾರು ಜನ ಕಾರ್ಯಕರ್ತರು ದುಡಿಯುತ್ತಿದ್ದಾರೆ” ಎಂದು ತಿಳಿಸಿದರು.

ದಾವಣಗೆರೆಯಲ್ಲಿ ಗೆದ್ದರೆ ಲಿಂಗಾಯತರು ಕಾರಣ, ಸೋತರೆ ಮುಸಲ್ಮಾನರು ಕಾರಣ ಎಂಬ ಚರ್ಚೆ ಬಗ್ಗೆ ಕೇಳಿದಾಗ, “ನಮಗೆ ಲಿಂಗಾಯತರು, ಮುಸಲ್ಮಾನರು ಎಂಬುದಲ್ಲ. ನಮ್ಮದು ಕಾಂಗ್ರೆಸ್ ಪಕ್ಷ, ಇಲ್ಲಿ ಎಲ್ಲಾ ಸಮುದಾಯಗಳು ಇವೆ. ನಾವು ಜಾತಿ ಮೇಲೆ ರಾಜಕಾರಣ ಮಾಡುವುದಿಲ್ಲ, ನೀತಿ ಮೇಲೆ ರಾಜಕಾರಣ ಮಾಡುತ್ತೇವೆ” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments