Homeಕರ್ನಾಟಕಬಜೆಟ್ ನಲ್ಲಿ ಪತ್ರಕರ್ತ ಸಮುದಾಯಕ್ಕೆ ಸಿಹಿ ಸುದ್ದಿ ಇರಲಿದೆ: ಕೆ.ವಿ.ಪ್ರಭಾಕರ್ ಭರವಸೆ

ಬಜೆಟ್ ನಲ್ಲಿ ಪತ್ರಕರ್ತ ಸಮುದಾಯಕ್ಕೆ ಸಿಹಿ ಸುದ್ದಿ ಇರಲಿದೆ: ಕೆ.ವಿ.ಪ್ರಭಾಕರ್ ಭರವಸೆ

  • 40ನೇ ಪತ್ರಕರ್ತರ ಸಮ್ಮೇಳನದಲ್ಲಿ ತಾಂತ್ರಿಕ ಮತ್ತು ನೈತಿಕ‌ ಸವಾಲುಗಳ ಬಗ್ಗೆ ಅರ್ಥಪೂರ್ಣ ಚರ್ಚೆಯಾಗಲಿ
  • ಬೀದರ್ ಜಿಲ್ಲಾ ಪತ್ರಕರ್ತರ ಸಂಘದ ಭವನದಲ್ಲಿ “ಸಮ್ಮೇಳನದ ವೆಬ್ ಸೈಟ್” ಉದ್ಘಾಟಿಸಿದ ಕೆವಿಪಿ

ಕಾರ್ಯನಿರತ ಪತ್ರಕರ್ತರ 40ನೇ ಸಮ್ಮೇಳನದಲ್ಲಿ ತಾಂತ್ರಿಕ ಮತ್ತು ನೈತಿಕ‌ ಸವಾಲುಗಳ ಬಗ್ಗೆ ಅರ್ಥಪೂರ್ಣ ಚರ್ಚೆಯಾಗಲಿ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪಿ ಕರೆ‌ ನೀಡಿದರು.‌

ಬೀದರ್ ಜಿಲ್ಲಾ ಪತ್ರಕರ್ತರ ಸಂಘದ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ “ಸಮ್ಮೇಳನದ ವೆಬ್ ಸೈಟ್” ಉದ್ಘಾಟಿಸಿ ಮಾತನಾಡಿ, “ಇಂದು ಅಭಿವೃದ್ಧಿ ಪತ್ರಿಕೋದ್ಯಮ ಪಕ್ಕಕ್ಕೆ ಸರಿದು ಹೇಳಿಕೆ ಆಧಾರಿತ ಪತ್ರಿಕೋದ್ಯಮವೇ ಪ್ರಧಾನ ಆಗುತ್ತಿರುವುದು ಆರೋಗ್ಯಕರ ಸಂಗತಿ ಅಲ್ಲ. ಹೀಗಾಗಿ ಕಾರ್ಯನಿರತ ಪತ್ರಕರ್ತರ 40ನೇ ಸಮ್ಮೇಳನ ಮಾಧ್ಯಮ ಜಗತ್ತಿನ “ಮಂಥನ” ದ ವೇದಿಕೆಯಾಗಬೇಕು” ಎಂದರು.

“ಕಾರ್ಯನಿರತ ಪತ್ರಕರ್ತರ ಸಮ್ಮೇಳನಗಳು ಒಂದು ಅರ್ಥದಲ್ಲಿ “ಪಿಟ್ ಸ್ಟಾಪ್ಸ್” ಎಂದು ಹೇಳಬಹುದು. ರೇಸಿಂಗ್ ಕಾರುಗಳು ತಮ್ಮ ಓಟದ ನಡುವೆ ಟೈರ್ ಗಳನ್ನು ಬದಲಾಯಿಸಲು, ಇಂಧನ ತುಂಬಿಸಿಕೊಳ್ಳಲು ಮಾರ್ಗಮಧ್ಯದಲ್ಲಿ ಇರುವ ನಿಲ್ದಾಣಗಳನ್ನು ಪಿಟ್ ಸ್ಟಾಪ್ಸ್ ಎಂದು ಕರೆಯುತ್ತಾರೆ. ವೈರಲ್ ಸುದ್ದಿಗಳ ವೇಗದಲ್ಲಿ ಓಡುತ್ತಿರುವ ಉದ್ಯಮಕ್ಕೆ ಈಗ ಇಂಥಾ ಪಿಟ್ ಸ್ಟಾಪ್ಸ್ ಗಳ ಅಗತ್ಯ ತುಂಬ ಇದೆ” ಎಂದು ವಿವರಿಸಿದರು.

“ಈ ಸಮ್ಮೇಳನ ವೃತ್ತಿಪರರಿಗೆ ತಮ್ಮ ನೋಟಗಳನ್ನು, ಆಯ್ಕೆಗಳನ್ನು ಮತ್ತು ವೃತ್ತಿಪರತೆಯನ್ನು ತೀಕ್ಷ್ಣಗೊಳಿಸಿಕೊಳ್ಳಲು ಮತ್ತು ಅವರ ಆಂತರಿಕ ದಿಕ್ಸೂಚಿಯನ್ನು ಮರು ಚಿಂತನಗೆ ಒಳಪಡಿಸಿಕೊಳ್ಳಲು ವೇದಿಕೆಯನ್ನು ಒದಗಿಸುತ್ತದೆ ಎನ್ನುವ ಭರವಸೆ ಇದೆ. ಕೃತಕ ಬುದ್ದಿಮತ್ತೆ ತಂತ್ರಜ್ಞಾನ-ಚಾಲಿತ ಯುಗದಲ್ಲಿ ನಮ್ಮ ಕೌಶಲ್ಯಗಳನ್ನು ನವೀಕರಣಗೊಳಿಸಿಕೊಳ್ಳುವುದರ ಜೊತೆಗೆ‌
ಪತ್ರಿಕೋದ್ಯಮದ ಆದ್ಯತೆಗಳನ್ನೂ ಮರು ಪರಿಶೀಲನೆಗೆ ಚರ್ಚೆಗೆ ಒಳಪಡಿಸಬೇಕಿದೆ” ಎಂದು ಹೇಳಿದರು.

“ಇವತ್ತಿನ ತಾಂತ್ರಿಕ ವೇಗ ಮತ್ತು ಹೊಸ ಹೊಸ ತಂತ್ರಜ್ಞಾನದ ವೇಗದಲ್ಲಿ ಬಹುತೇಕ ಪ್ರತಿ ಐದು ವರ್ಷಗಳಿಗೆ ಒಮ್ಮೆ ನಾವು ಕಲ್ಪಿಸಕೊಳ್ಳಲಾಗದ ತಂತ್ರಜ್ಞಾನ‌ ಹೊರಗೆ ಬರುತ್ತಿವೆ. ಹೊಸದಾಗಿ ಬಂದಿರುವ AI ತಂತ್ರಜ್ಞಾನದ ಸಾಧ್ಯತೆಗಳನ್ನು ಮತ್ತು ಅಪಾಯಗಳನ್ನು ನಾವು ಸರಿಯಾಗಿ ಗ್ರಹಿಸವ ಮೊದಲೇ ಹೊಸ ತಂತ್ರಜ್ಞಾನ‌ ಬಂದಿರುತ್ತದೆ. ಈಗಾಗಲೇ‌ AI ಕೂಡ ಹಳತಾಗಿ “Super AI” ಅಂತ ಬರುತ್ತಿದೆ” ಎಂದು ಎಚ್ಚರಿಸಿದರು.‌

“ಡೀಪ್‌ಫೇಕ್‌ಗಳನ್ನು ಹೇಗೆ ಗುರುತಿಸುವುದು ಮತ್ತು ಸಾಮಾಜಿಕ ಮಾಧ್ಯಮ ಲೀಡ್‌ಗಳನ್ನು ಪರಿಶೀಲಿಸುವುದು ಹೇಗೆ ಎಂಬುದನ್ನು News room ಗಳು ಕಲಿಸಬೇಕಾಗಿದೆ. ಮಾಧ್ಯಮ ಲೋಕದ ಕಾರ್ಪುರೇಟೀಕರಣದ ತಂದೊಡ್ಡಿರುವ ನೈತಿಕ ಸವಾಲುಗಳ ನಡುವೆಯೇ ಈಗ AI ಮತ್ತು ಆಧುನಿಕ ತಂತ್ರಜ್ಞಾನವೂ ಹೊಸ ಹೊಸ ನೈತಿಕ ಸವಾಲುಗಳನ್ನು ಮುಂದಿಟ್ಟಿದೆ. ಹೀಗಾಗಿ, ನೈತಿಕ ಮತ್ತು ತಾಂತ್ರಿಕ ಸವಾಲುಗಳ ಬಗ್ಗೆ ಅರ್ಥಪೂರ್ಣ ಚರ್ಚೆಗೆ ಸಮ್ಮೇಳನ ವೇದಿಕೆಯಾಗಲಿ ಎಂದು ನಾನು ಬಯಸುತ್ತೇನೆ” ಎಂದರು.

ಈ ಬಜೆಟ್ ನಲ್ಲೂ ಬಂಪರ್

“ಪತ್ರಕರ್ತ ಸಮುದಾಯಕ್ಕೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲಿನಿಂದಲೂ ನೆರಳಾಗಿ ನಿಂತಿದ್ದಾರೆ. ಈ ಬಾರಿಯ ಬಜೆಟ್ ನಲ್ಲೂ ಶ್ರಮಿಕ ಪತ್ರಕರ್ತ ಸಮುದಾಯಕ್ಕೆ ಉತ್ತಮ‌ಅನುಕೂಲಗಳು ಆಗುವ ಭರವಸೆ ಇದೆ” ಎಂದು ಭರವಸೆ ವ್ಯಕ್ತಪಡಿಸಿದರು.

ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಈಶ್ವರ್ ಖಂಡ್ರೆ, ರಹೀಮ್ ಖಾನ್, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ಉಪಾಧ್ಯಕ್ಷರಾದ ಮದನ್ ಗೌಡರು, ಜಿಲ್ಲಾಧ್ಯಕ್ಷರಾದ ಆನಂದ್ ದೇವಪ್ಪ ಸೇರಿ ರಾಜ್ಯ ಮತ್ತು ಜಿಲ್ಲಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments