Homeಕರ್ನಾಟಕಪೆಟ್ರೋಲಿಯಂ ಉತ್ಪನ್ನಗಳ ಅಭಾವ, ರಸಗೊಬ್ಬರ ಕೊರತೆ ಎದುರಾಗಬಹುದು: ಡಿ ಕೆ ಸುರೇಶ್ 

ಪೆಟ್ರೋಲಿಯಂ ಉತ್ಪನ್ನಗಳ ಅಭಾವ, ರಸಗೊಬ್ಬರ ಕೊರತೆ ಎದುರಾಗಬಹುದು: ಡಿ ಕೆ ಸುರೇಶ್ 

ಶಾಸಕರು ಐಪಿಎಲ್ ಉಚಿತ ಟಿಕೆಟ್ ಕೇಳುವುದು ತಪ್ಪು: ಡಿ.ಕೆ. ಸುರೇಶ್

– ಆಸಕ್ತಿ ಇದ್ದವರು ಕಾಸು ಕೊಟ್ಟು ಪಂದ್ಯ ನೋಡುವುದು ಉತ್ತಮ ಬೆಳವಣಿಗೆ

ಉಚಿತವಾಗಿ ಟಿಕೆಟ್ ಕೇಳಿರುವುದು ತಪ್ಪು. ಪಂದ್ಯ ವೀಕ್ಷಣೆ ಮಾಡುವ ಆಸೆ ಇರುವವರು ವೈಯಕ್ತಿಕವಾಗಿ ಹಣ ಕೊಟ್ಟು ಹೋಗಿ ನೋಡಲಿ. ಇದು ಉತ್ತಮವಾದುದು ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಸುರೇಶ್ ಅವರು ಪ್ರತಿಕ್ರಿಯೆ ನೀಡಿದರು.

ಶಾಸಕರಿಗೆ ಉಚಿತವಾಗಿ ಐಪಿಎಲ್ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಬಗ್ಗೆ ಕೇಳಿದಾಗ, “ಈ ಬಗ್ಗೆ ಯಾರು ಮಾತನಾಡುತ್ತಿದ್ದಾರೆ ಅದು ಮಹಾಪರಾಧ. ಐಪಿಎಲ್ ದುರ್ಘಟನೆ ಸಂದರ್ಭದಲ್ಲಿ ಅವರು ಯಾವ ರೀತಿ ವಾಗ್ದಾಳಿ ಮಾಡಿದ್ದರು, ಪದ ಬಳಸಿದ್ದರು ಎಂದು ತೆಗೆದು ನೋಡಲಿ. ಮೊದಲಿನಿಂದಲೂ ಟಿಕೆಟ್ ನೀಡುತ್ತಾ ಬಂದಿದ್ದಾರೆ. ಇದನ್ನು ಅಪಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಬಿಜೆಪಿ ಶಾಸಕರು ಕೂಡ ಐಪಿಎಲ್ ಟಿಕೆಟ್ ಪಡೆದಿದ್ದಾರೆ. ಐಪಿಎಲ್ ರಾಷ್ಟ್ರವನ್ನು ಪ್ರತಿನಿಧಿಸುವ ಪಂದ್ಯಾವಳಿ ಅಲ್ಲ. ವಾಣಿಜ್ಯ ಉದ್ದೇಶಿತ ಪಂದ್ಯಾವಳಿ. ಇವುಗಳ ಬಗ್ಗೆ ಜನಪ್ರತಿನಿಧಿಗಳು ಹೆಚ್ಚು ಗಮನಹರಿಸುವುದು ಒಳ್ಳೆಯದಲ್ಲ” ಎಂದು ಹೇಳಿದರು.

ಬೆಂಗಳೂರಿನ ನಾಲ್ಕು ಕಡೆ ಕ್ರೀಡಾಂಗಣಗಳನ್ನು ನಿರ್ಮಿಸಬೇಕು

ಚಿನ್ನಸ್ವಾಮಿ ಕ್ರೀಡಾಂಗಣ ಬೇರೆಡೆ ಸ್ಥಳಾಂತರ ಮಾಡಬೇಕು ಎಂಬ ಚರ್ಚೆ ಬಗ್ಗೆ ಕೇಳಿದಾಗ, “ಈಗಾಗಲೇ ನಾನು ಆಯ್ಕೆ ಮಾಡಿ, ಸೂಚಿಸಿದ ಜಾಗದಲ್ಲಿ ಹೊಸ ಕ್ರೀಡಾಂಗಣ ಮಾಡಲು ಸರ್ಕಾರ ಮನ್ನಣೆ ನೀಡಿದೆ. ಸೂರ್ಯ ಸಿಟಿಯಲ್ಲಿ ಕ್ರೀಡಾಂಗಣ ಮಾಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದು ನಾನೇ. ಬೆಂಗಳೂರಿನ ನಾಲ್ಕು ದಿಕ್ಕಿನಲ್ಲಿ ನಾಲ್ಕು ಕ್ರೀಡಾಂಗಣ ಮಾಡಬೇಕು. ಕಂಠೀರವ ಕ್ರೀಡಾಂಗಣ, ಕೆಎಸ್ ಸಿಎ, ಫುಟ್ಬಾಲ್ ಕ್ರೀಡಾಂಗಣ ಹೊರತಾಗಿ ಬೇರೆ ಯಾವುದೇ ಕ್ರೀಡಾಂಗಣವಿಲ್ಲ. ಇಷ್ಟು ದೊಡ್ಡ ಜನಸಂಖ್ಯೆ ಇರುವ ನಗರದಲ್ಲಿ ಯುವಕರಿಗೆ ಕ್ರೀಡೆಯಲ್ಲಿ ಪ್ರೋತ್ಸಾಹ ನೀಡಬೇಕಾದರೆ ನಾಲ್ಕು ದಿಕ್ಕಿನಲ್ಲಿ ಕ್ರೀಡಾಂಗಣ ನಿರ್ಮಿಸಬೇಕು ಎಂದು ಸಲಹೆ ನೀಡಿದ್ದೆ. ನಾನು ಲೋಕಸಭೆ ಸದಸ್ಯನಾಗಿದ್ದಾಗ, ನನ್ನದೇ ಕ್ಷೇತ್ರದ ಸೂರ್ಯ ಸಿಟಿಯಲ್ಲಿ 100 ಎಕರೆ ಮೀಸಲಿಡಬೇಕು ಎಂದು ಹೇಳಿದ್ದೆ. ನಂತರ ಅದನ್ನು ಮೀಸಲಿಟ್ಟು, ಯೋಜನೆ ಅನುಮೋದನೆ ಪಡೆಯಲಾಗಿತ್ತು. ಈ ಬಗ್ಗೆ ನಾನು ಸಚಿವರಾದ ಜಮೀರ್ ಅಹ್ಮದ್, ಅಧ್ಯಕ್ಷರಾದ ಶಿವಲಿಂಗೇಗೌಡರನ್ನು ಭೇಟಿ ಮಾಡಿ ನಾನು ಹಾಗೂ ಶಾಸಕರಾದ ಶಿವಣ್ಣ ಅವರು ಚರ್ಚೆ ಮಾಡಿದ್ದೆವು. ಈಗ ಈ ಯೋಜನೆಗೆ ಸಚಿವ ಸಂಪುಟ ಸಭೆಯಲ್ಲೂ ಅನುಮೋದನೆ ನೀಡಲಾಗಿದೆ. 50-60 ಎಕರೆ ಪ್ರದೇಶದಲ್ಲಿ ಅತ್ಯುತ್ತಮ ಕ್ರೀಡಾಂಗಣ ಆಗಲಿದೆ. ಬಿಡಿಎ ಮೂಲಕ ಶಿವರಾಮ ಕಾರಂತ ಬಡಾವಣೆಯಲ್ಲೂ ಕ್ರೀಡಾಂಗಣ ಮಾಡಬೇಕು ಎಂದು ಉಪಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ಅಲ್ಲೂ 40 ಎಕರೆ ಮೀಸಲಿಡಲಾಗಿದೆ. ಬಿಡದಿಯಲ್ಲೂ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಜಾಗ ಮೀಸಲಿಡಲು ಸಂಬಂಧಪಟ್ಟವರ ಜತೆ ಚರ್ಚೆ ಮಾಡುವೆ” ಎಂದು ತಿಳಿಸಿದರು.

ದ್ವಿಭಾಷಾ ನೀತಿ ತೀರ್ಮಾನ ಉತ್ತಮ

ದ್ವಿಭಾಷಾ ನೀತಿ ತೀರ್ಮಾನದ ಬಗ್ಗೆ ಕೇಳಿದಾಗ, “ಮಕ್ಕಳ ಮೇಲೆ ಮೂರು ಭಾಷೆಗಳ ಕಲಿಕೆ ಒತ್ತಡ ಹಾಕಿದರೆ, ಅವರ ಕಲಿಗೆ ಹಾಗೂ ಗ್ರಹಿಕೆ ಕಡಿಮೆಯಾಗುತ್ತದೆ. ಈ ದೃಷ್ಟಿಯಿಂದ ಶಿಕ್ಷಕರು ಕೈಗೊಂಡಿರುವ ತೀರ್ಮಾನ ಉತ್ತಮವಾಗಿದೆ. ಮಕ್ಕಳು ಎರಡು ಭಾಷೆ ಕಡ್ಡಾಯವಾಗಿ ಕಲಿಯಬೇಕು ಎಂಬುದು ಉತ್ತಮ ನಿರ್ಧಾರ. ಮೂರು ಭಾಷೆ ಕಲಿಯುವುದು ಅವರವರ ವೈಯಕ್ತಿಕ ಅಭಿಲಾಷೆ” ಎಂದರು.

ಬಿಜೆಪಿ ನಾಯಕರು ಈ ನಿರ್ಧಾರ ಟೀಕೆ ಮಾಡುತ್ತಿರುವ ಬಗ್ಗೆ ಕೇಳಿದಾಗ, “ಸರ್ಕಾರ ಯಾವುದೇ ತೀರ್ಮಾನ ಕೈಗೊಂಡರೂ ವಿರೋಧ ಮಾಡಬೇಕು ಎಂಬುದೊಂದೇ ಬಿಜೆಪಿ ನಾಯಕರ ಗುರಿ. ಅವರ ಕೇಂದ್ರ ನಾಯಕರನ್ನು ಮೆಚ್ಚಿಸಲು, ಮನವೊಲಿಸಲು ಹಿಂದಿ ಪರವಾಗಿರಬೇಕು. ಬಿಜೆಪಿ ನಾಯಕರು ತಮ್ಮ ಕೇಂದ್ರ ನಾಯಕರಿಗೆ ಕನ್ನಡವನ್ನು ಎಲ್ಲಾ ರಾಜ್ಯಗಳಲ್ಲಿ ಅಳವಡಿಸಿಕೊಳ್ಳುವಂತೆ ಮಾಡಬೇಕು ಎಂದು ಮನವರಿಕೆ ಮಾಡಬೇಕು” ಎಂದು ತಿಳಿಸಿದರು.

ತ್ರಿಭಾಷಾ ನೀತಿ ಜಾರಿಗೆ ತಂದಿದ್ದು ಕಾಂಗ್ರೆಸ್, ಈ ನಿರ್ಧಾರ ರಾಜಕೀಯವೇ ಎಂದು ಕೇಳಿದಾಗ, “ಅವತ್ತಿನ ಪರಿಸ್ಥಿತಿ ಬೇರೆ, ಈಗಿನ ಪರಿಸ್ಥಿತಿ ಬೇರೆ. ಇಂದು ಗುಣಮಟ್ಟದ ಅಗತ್ಯವಿದ್ದು, ಎರಡು ಭಾಷೆಗಳಲ್ಲಿ ಕಲಿಕೆ ಆಗಬೇಕು. ಕನ್ನಡವನ್ನು ಪ್ರಧಾನ ಭಾಷೆಯಾಗಿಟ್ಟುಕೊಂಡು ಉಳಿದ ಮತ್ತೊಂದು ಭಾಷೆ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಾಗಿದ್ದು, ಇದು ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಬಿಟ್ಟ ವಿಚಾರ” ಎಂದರು.

ವರ್ಷಪೂರ್ತಿ ಓದಿದ ಬಳಿಕ ಈಗ ಈ ನಿರ್ಧಾರ ಗೊಂದಲ ಮೂಡಿಸುವುದಿಲ್ಲವೇ ಎಂದು ಕೇಳಿದಾಗ, “ಬಹುತೇಕರು ತೃತೀಯ ಭಾಷೆಯಲ್ಲಿ ಅನುತ್ತೀರ್ಣರಾಗುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ತೀರ್ಮಾನ ಮಾಡಿದೆ” ಎಂದು ತಿಳಿಸಿದರು.

ಪೆಟ್ರೋಲಿಯಂ ಉತ್ಪನ್ನಗಳ ಅಭಾವ, ರಸಗೊಬ್ಬರ ಅಭಾವ ಸೃಷ್ಟಿಯಾಗಬಹುದು

ಅಡುಗೆ ಅನಿಲ, ಇಂಧನ ತೈಲ ಸಮಸ್ಯೆ ವಿರುದ್ಧ ಕೋವಿಡ್ ಸಮಯದಲ್ಲಿ ಹೋರಾಡಿದಂತೆ ಹೋರಾಡಬೇಕು ಎಂಬ ಪ್ರಧಾನಮಂತ್ರಿಗಳ ಸಂದೇಶದ ಬಗ್ಗೆ ಕೇಳಿದಾಗ, “ಯಾವ ಸಮಸ್ಯೆ ಆಗುತ್ತಿದೆ, ಯಾವ ಸಮಸ್ಯೆ ಆಗುತ್ತಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಗೊತ್ತಿದೆ. ಒಟ್ಟಾರೆಯಾಗಿ ಇದೇ ಪರಿಸ್ಥಿತಿ ಮುಂದುವರಿದರೆ, ಬಹಳ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ. ಬೆಲೆ ಏರಿಕೆ ಬಿಸಿ ಭಾರತಕ್ಕೆ ಈಗಾಗಲೇ ತಟ್ಟಿದ್ದು, ಇನ್ನಷ್ಟು ತಟ್ಟಲಿದೆ. ಕೆಲವು ಉತ್ಪನ್ನಗಳ ಅಭಾವದಿಂದ ದರ ಏರಿಕೆಯಾದರೆ, ಮತ್ತೆ ಕೆಲವು ವಸ್ತುಗಳ ಬೆಲೆಯನ್ನು ಈ ಪರಿಸ್ಥಿತಿಯ ಲಾಭ ಪಡೆಯಲು ಏರಿಕೆ ಮಾಡಲಾಗಿದೆ. ಹೊಟೇಲ್ ಗಳು ಮಾತ್ರವಲ್ಲ. ಆಮದು ಮಾಡಿಕೊಳ್ಳುತ್ತಿರುವ ಎಲ್ಲಾ ವಸ್ತುಗಳ ಮೇಲೆ ಇದರ ಪರಿಣಾಮ ಬೀರುತ್ತಿದೆ. ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಅವಲಂಬಿತವಾಗಿರುವ ವಸ್ತುಗಳ ಉತ್ಪಾದನೆ ಕಡಿಮೆಯಾದರೆ ಬೆಲೆ ಏರಿಕೆಯಾಗುತ್ತದೆ. ಮುಂಗಾರು ಆರಂಭವಾಗಿ ಮಳೆ ಬೀಳಲು ಆರಂಭಿಸಿದರೆ ರಸಗೊಬ್ಬರದ ಮೇಲೂ ಇದು ಪರಿಣಾಮ ಬೀರಲಿದೆ. ಇದಕ್ಕೆ ಸರ್ಕಾರ ಸಜ್ಜಾಗಬೇಕು. 3 ತಿಂಗಳಿಗೆ ಆಗುವಷ್ಟು ದಾಸ್ತಾನು ಇರಬಹುದು. ಆದರೆ ಇಡೀ ಋತುವಿಗೆ ಸಾಲುವಷ್ಟು ದಾಸ್ತಾನು ಇಟ್ಟುಕೊಳ್ಳುವುದು ಕಷ್ಟ. ಇದಕ್ಕೆ ಅಗತ್ಯ ತಯಾರಿ ಮಾಡಬೇಕಾಗಿದೆ” ಎಂದರು.

ಗ್ಯಾಸ್ ಬಳಕೆ ಇಳಿಕೆಗೆ ಹಾಲು ಒಕ್ಕೂಟಗಳಿಗೂ ಸೂಚನೆ

ಇದಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚು ವಾಹನ ಬಳಸುವುದನ್ನು ತಪ್ಪಿಸಬೇಕು. ನಮ್ಮ ಹಾಲು ಒಕ್ಕೂಟಕ್ಕೂ ಸಂದೇಶ ನೀಡಲಾಗಿದೆ. ಅನಿಲ ಬಳಕೆ ಪ್ರಮಾಣವನ್ನು 55% ಒಳಗೆ ಇಳಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ. 100% ಬಳಸಿದರೆ 30% ಹೆಚ್ಚುವರಿ ವೆಚ್ಚ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಈ ರೀತಿ ಮಾಡಿದರೆ ಇದರಿಂದ ಬೆಲೆ ಏರಿಕೆ ಮಾಡಬೇಕಾಗುತ್ತದೆ. ನಾವು ಕೂಡ ಅಗತ್ಯವಸ್ತುಗಳ ವ್ಯಾಪ್ತಿಯಲ್ಲಿ ಬರುತ್ತಿದ್ದು, ಇಂತಹ ಸಮಸ್ಯೆಗಳು ಎದುರಾಗಲಿವೆ. ಹೀಗಾಗಿ ಜನ ಈಗಲೇ ಎಚ್ಚೆತ್ತುಕೊಳ್ಳುವುದು ಉತ್ತಮ” ಎಂದು ವಿವರಿಸಿದರು.

ಹಾಲು ಒಕ್ಕೂಟಕ್ಕೆ ಈ ಸಮಸ್ಯೆ ಎದುರಾಗಿದೆಯೇ ಎಂದು ಕೇಳಿದಾಗ, “ಸಧ್ಯಕ್ಕೆ ಸಮಸ್ಯೆಯಾಗುತ್ತಿಲ್ಲ. ನಮ್ಮ ಖರ್ಚು ವೆಚ್ಚ ಹೆಚ್ಚಾಗುವುದನ್ನು ಏನೆಂದು ವ್ಯಾಖ್ಯಾನ ಮಾಡುತ್ತೀರಿ? ಇದರ ಹೊರೆಯನ್ನು ನಾವು ಯಾರ ಮೇಲೆ ಹಾಕಬೇಕು? ನಾನು ಈ ಬಗ್ಗೆ ಹೇಳಿದರೆ ಬೆಲೆ ಏರಿಕೆ ಬಗ್ಗೆ ಡಿ.ಕೆ. ಸುರೇಶ್ ಮುನ್ಸೂಚನೆ ನೀಡಿದ್ದಾರೆ ಎಂದು ಪ್ರಕಟಿಸುತ್ತೀರಿ. ಇಲ್ಲಿ ವಸ್ತುಸ್ಥಿತಿ ಬಗ್ಗೆ ಚಿಂತನೆ ಮಾಡಲಾಗಿದೆಯೇ? ಮುಂಗಾರು ಪ್ರಾರಂಭವಾದರೆ ಜನರು ಉಳುಮೆಗೆ ಮುಂದಾಗುತ್ತಾರೆ. ಈಗ ಎದುರಾಗಬಹುದಾದ ರಸಗೊಬ್ಬರ ಅಭಾವದ ಬಗ್ಗೆ ಸರ್ಕಾರ ಹಾಗೂ ಜನಸಾಮಾನ್ಯರಿಗೆ ಎಚ್ಚರಿಕೆ ನೀಡಿ” ಎಂದು ತಿಳಿಸಿದರು.

ಹಾಲು ಒಕ್ಕೂಟದಲ್ಲಿ ಗ್ಯಾಸ್ ಬದಲು ಸೌದೆ ಒಲೆ ಅಥವಾ ಸೋಲಾರ್ ಬಳಕೆ ಬಗ್ಗೆ ಕೇಳಿದಾಗ, “ಸೋಲಾರ್ ಬಳಸಲು ಸಾಧ್ಯವಿಲ್ಲ. ನಾವು ಬಾಯ್ಲರ್ ಗಳ ಮೂಲಕ ಹಬೆ ಸೃಷ್ಟಿಸುತ್ತೇವೆ. ನಮ್ಮಲ್ಲಿ ಯಾರೂ ಎಲೆಕ್ಟ್ರಿಕ್ ಬಾಯ್ಲರ್ ಬಳಸುತ್ತಿಲ್ಲ. ಫರ್ನೆಸ್ ಆಯಿಲ್, ಸೌದೆ ಒಲೆ ಅಥವಾ ಗ್ಯಾಸ್ ಬಳಸಲಾಗುತ್ತಿದೆ. ನಾನು ಅಧಿಕಾರಕ್ಕೆ ಬಂದ ಬಳಿಕ ಡೈರಿಯ ಒಂದು ಭಾಗದಲ್ಲಿ ಸೌದೆ ಒಲೆ ಬಳಸುವ ಅವಕಾಶವಿದ್ದು, ಬಾಯ್ಲರ್ ಗಳನ್ನು ಅದಕ್ಕೆ ಪರಿವರ್ತಿಸಬೇಕು. ಇದು ಒಂದೆರಡು ದಿನಗಳಲ್ಲಿ ಆಗುವ ಪ್ರಕ್ರಿಯೆ ಅಲ್ಲ. ಇದನ್ನು ಟೆಂಡರ್ ಕರೆದು ಮಾಡಬೇಕು. ಈ ಮುನ್ನ ಫರ್ನೆಸ್ ಆಯಿಲ್, ಗ್ಯಾಸ್ ಬೆಲೆ ಕಡಿಮೆ ಇತ್ತು, ಈಗ ಬೆಲೆ ಹೆಚ್ಚಾಗಿರುವುದರಿಂದ ಸ್ಥಳೀಯವಾಗಿ ಸೌದೆ ಒಲೆಯನ್ನು ಒಂದು ಪ್ಲಾಂಟ್ ನಲ್ಲಿ ಅಳವಡಿಸಿಕೊಂಡಿದ್ದೇವೆ. ಉಳಿದ ಎರಡು ಮೂರು ಪ್ಲಾಂಟ್ ಗಳಲ್ಲಿ ಮಾಡಬೇಕು. ಬೆಂಗಳೂರಿನಲ್ಲಿ ಸೌದೆ ಒಲೆ ಬಳಸಲು ಆಗುವುದಿಲ್ಲ. ಮಾಲೀನ್ಯ ಸಮಸ್ಯೆ ಬರುತ್ತದೆ” ಎಂದರು.

ನೀವು ಕೆಎಂಎಫ್ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದು, ಈ ಚುನಾವಣೆ ವಿಳಂಬವಾಗುತ್ತಿರುವ ಬಗ್ಗೆ ಕೇಳಿದಾಗ, “ನನಗೆ ಈ ಬಾಗ್ಗೆ ಮಾಹಿತಿ ಇಲ್ಲ. ನಾನು ಪ್ರಬಲ ಆಕಾಂಕ್ಷಿ ಎಂದು ಯಾವಾಗ ಹೇಳಿದ್ದೇನೆ? ನಾನು ಕೆಎಂಎಫ್ ಅಧ್ಯಕ್ಷನಾಗುತ್ತೇನೆ ಎಂದು ಹೇಳಿಲ್ಲವಲ್ಲ. ನನ್ನ ಪರವಾಗಿ ಬೇಡಿಕೆ ಇಡುತ್ತಿರುವವರು ನನಗೆ ಕಾಣಿಸುತ್ತಿಲ್ಲ” ಎಂದರು.

ಗ್ಯಾರಂಟಿಗಳಿಂದ ಬಡವರ ಜೀವನ ಮಟ್ಟ ಸುಧಾರಿಸಿದೆ

ಪಂಚರಾಜ್ಯ ಚುನಾವಣೆಯಲ್ಲಿ ಎಲ್ಲೆಡೆ ಗ್ಯಾರಂಟಿ ಯೋಜನೆಗಳ ಘೋಷಣೆಯಾಗುತ್ತಿದ್ದು ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದಾಗ, “ಇದು ನಮ್ಮ ರಾಜ್ಯದ ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು, ಯಾವ ವರ್ಗದವರಿಗೆ (ಜಾತಿ ಹೊರತುಪಡಿಸಿ) ಬಡವರನ್ನು ಗುರಿಯಾಗಿಟ್ಟುಕೊಂಡು ಸೂಕ್ತ ರೀತಿಯಲ್ಲಿ ಯೋಜನೆ ಜಾರಿ ಮಾಡಿದರೆ ಆ ರಾಜ್ಯ ಜಿಡಿಪಿ ಜತೆಗೆ ಆರ್ಥಿಕವಾಗಿ ಪ್ರಗತಿ ಸಾಧಿಸಲಿದೆ. ಜೀವನಮಟ್ಟ ಸುಧಾರಣೆಯಾಗಲಿದೆ. ರಾಜ್ಯದ ಬಡ ವರ್ಗದವರು ನೆಮ್ಮದಿಯಿಂದ ಇದ್ದಾರೆ. ಅಭಿವೃದ್ಧಿ ಕುಂಠಿತವಾಗಿದೆ ಎಂಬುದು ಸೇರಿದಂತೆ ಯಾರು ಏನೇ ಹೇಳಿದರು, ಬಡವರು ಮಾತ್ರ ಸಂತೋಷವಾಗಿದ್ದಾರೆ. ಈ ಯೋಜನೆಗಳಿಂದ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಬದಲಾವಣೆ ಆಗಿದೆ. ಈ ಯೋಜನೆ ವಿರುದ್ಧ ಕೆಲವರು ವಿರೋಧ ಮಾಡುತ್ತಾರೆ. ಸಮಸ್ಯೆಗಳಿವೆ, ಇಲ್ಲ ಎಂದು ಹೇಳುವುದಿಲ್ಲ. ಆದರೆ ಬದಲಾವಣೆಯ ಪರಿಸ್ಥಿತಿಯನ್ನು ಗ್ರಾಮೀಣ ಪ್ರದೇಶದಲ್ಲಿ ಕಾಣಬಹುದು” ಎಂದು ತಿಳಿಸಿದರು.

ಉಪಚುನಾವಣೆ ಪ್ರಚಾರಕ್ಕೆ ಹೋಗುತ್ತೀರಾ ಎಂದು ಕೇಳಿದಾಗ, “ನನಗೂ ಹೇಳಿದ್ದಾರೆ. ಸಮಯಾವಕಾಶ ಸಿಕ್ಕರೆ ಹೋಗಿ ಪ್ರಚಾರದಲ್ಲಿ ಭಾಗಿಯಾಗುವೆ. ನಮ್ಮ ನಾಯಕರುಗಳು ಪ್ರಚಾರ ಮಾಡುತ್ತಿದ್ದಾರೆ” ಎಂದರು.

ಸಚಿವ ಜಮೀರ್ ಅಹ್ಮದ್ ಅವರು ಮುನಿಸಿಕೊಂಡಿದ್ದಾರೆ ಎಂಬ ಪ್ರಶ್ನೆಗೆ, “ಅವರು ನಗುನಗುತ್ತಾ ಓಡಾಡುತ್ತಿದ್ದು, ಅವರ ಮುನಿಸು ನಿಮಗೆ ಯಾವಾಗ ಕಾಣಿಸಿತು? ಅವರು ಕೇರಳದಲ್ಲಿ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿದ್ದಾರಲ್ಲ. ಅಲ್ಲಿ ಅವರ ಬೇಡಿಕೆ ಹೆಚ್ಚಾಗಿರಬೇಕು” ಎಂದರು.

ಜಮೀರ್ ಅವರು ಪ್ರಚಾರಕ್ಕೆ ಹೋಗದಿದ್ದರೆ ಫಲಿಂತಾಶದ ಮೇಲೆ ಪರಿಣಾಮ ಬೀರುವುದೇ ಎಂದು ಕೇಳಿದಾಗ, “ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ಭರವಸೆ ಇದೆ. ಯಾರ ಉಪಸ್ಥಿತಿ ಪರಿಣಾಮ ಬೀರುತ್ತದೆ, ಯಾರ ಉಪಸ್ಥಿತಿ ಪರಿಣಾಮ ಬೀರುವುದಿಲ್ಲ ಎಂಬುದಕ್ಕಿಂತ ಉತ್ತಮ ಯುವ ನಾಯಕತ್ವವನ್ನು ಆ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷ ನೀಡಿದೆ. ಹಿರಿಯ ನಾಯಕರು ಕಾಲವಾದ ಕಾರಣದಿಂದ ಅವರ ಕುಟುಂಬಕ್ಕೆ ಈ ಸ್ಥಾನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯ ಅವಕಾಶ ನೀಡಲಾಗುವುದು” ಎಂದು ತಿಳಿಸಿದರು.

ಮುಂದಿನ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಅಲ್ಲಿ ಟಿಕೆಟ್ ನೀಡಲಾಗುವುದು ಎಂಬ ಬಗ್ಗೆ ಕೇಳಿದಾಗ, “ಈ ವಿಚಾರ ನನಗೆ ಗೊತ್ತಿಲ್ಲ. ಹೈಕಮಾಂಡ್ ನಾಯಕತ್ವ ಇದನ್ನು ಗಮನಿಸುತ್ತದೆ. ಈ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments