Homeಕರ್ನಾಟಕಕೆಪಿಸಿಸಿಯಲ್ಲಿ ಹುದ್ದೆ ಖಾಲಿ ಇಲ್ಲ, ಅಧ್ಯಕ್ಷ ಸ್ಥಾನದ ಆಸೆ, ದುರಾಸೆ ನನಗಿಲ್ಲ: ಡಿ ಕೆ ಸುರೇಶ್

ಕೆಪಿಸಿಸಿಯಲ್ಲಿ ಹುದ್ದೆ ಖಾಲಿ ಇಲ್ಲ, ಅಧ್ಯಕ್ಷ ಸ್ಥಾನದ ಆಸೆ, ದುರಾಸೆ ನನಗಿಲ್ಲ: ಡಿ ಕೆ ಸುರೇಶ್

ಸದ್ಯಕ್ಕೆ ಕೆಪಿಸಿಸಿಯಲ್ಲಿ ಯಾವುದೇ ಹುದ್ದೆ ಖಾಲಿ ಇಲ್ಲ. ಅಧ್ಯಕ್ಷ ಸ್ಥಾನಕ್ಕೆ ಆಸೆ, ದುರಾಸೆ ನನ್ನಲ್ಲಿಲ್ಲ ಎಂದು ಮಾಜಿ ಸಂಸದ ಡಿ ಕೆ ಸುರೇಶ್ ಹೇಳಿದರು.

ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಸೋಮವಾರ ಪ್ರತಿಕ್ರಿಯೆ ನೀಡಿ, “ಒಂದಷ್ಟು ಜನರು ನನ್ನನ್ನು ಖುಷಿಪಡಿಸಲು, ಮತ್ತೆ ಕೆಲವರು ಇನ್ನೊಬ್ಬರನ್ನು ಖುಷಿ ಪಡಿಸಲು ಹಾಗೂ ತಮ್ಮ ಅನುಕೂಲಕ್ಕಾಗಿ ಈ ರೀತಿ ಹೆಸರುಗಳನ್ನು ಹೇಳುತ್ತಿರುತ್ತಾರೆ. ನಾನು ಪ್ರಸ್ತುತ ವಿಶ್ರಾಂತಿಯಲ್ಲಿದ್ದೇನೆ. ಜನರು ಕೊಟ್ಟ ತೀರ್ಪನ್ನು ಪ್ರಸಾದ ಎಂದು ಸ್ವೀಕರಿಸಿ ಕೆಲಸ ಮಾಡುವವನು ನಾನು. ಯಾವುದೇ ಸ್ಥಾನ ಸಿಗಬೇಕು ಅಂತಾದರೆ ಸಿಕ್ಕೇ ಸಿಗುತ್ತದೆ. ಇಲ್ಲದಿದ್ದರೆ ಸಿಗುವುದಿಲ್ಲ” ಎಂದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧ ಎನ್ನುವ ಕೆ.ಎನ್.ರಾಜಣ್ಣ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಸರ್ವಪಕ್ಷಗಳ ಹಿರಿಯ ನಾಯಕರಾದ ರಾಜಣ್ಣ ಅವರು ಹೆಚ್ಚು ಶಕ್ತಿ ಇರುವ ನಾಯಕರು. ಅವರ ನೇತೃತ್ವದಲ್ಲಿ ಪಕ್ಷ ಇನ್ನಷ್ಟು ಉತ್ತಮವಾಗಿ ಸಂಘಟನೆಯಾಗುತ್ತದೆ ಎನ್ನುವ ವಿಶ್ವಾಸ ಅವರಿಗಿದೆ. ಅವರಿಗೆ ಜನತಾದಳ, ಬಿಜೆಪಿಯವರ ಜೊತೆ ಒಳ್ಳೆ ಸಖ್ಯವನ್ನಿಟ್ಟುಕೊಂಡಿದ್ದಾರೆ. ಅಲ್ಲಿಂದ ಒಂದಷ್ಟು ಜನರನ್ನು ಕರೆದುಕೊಂಡು ಬರಬಹುದು ಎನಿಸುತ್ತದೆ. ಹೀಗಾಗಿ ಅವರು ಪಕ್ಷದ ನೇತೃತ್ವವಹಿಸಲು ತುಡಿತದಲ್ಲಿದ್ದಾರೆ. ಅವರಿಗೆ ಹೈಕಮಾಂಡ್ ಜವಾಬ್ದಾರಿ ವಹಿಸಿದರೆ ನಾವು ಸಹಕಾರ ನೀಡಲು ಸಿದ್ಧ” ಎಂದರು.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ರಾಮನಗರದ ಎಲ್ಲಾ ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ಉತ್ತಮವಾದ ಆಶಾಭಾವನೆ ಇಟ್ಟುಕೊಂಡಿದ್ದಾರೆ. ಜಿಲ್ಲೆಯ ಕಾಂಗ್ರೆಸ್ ಶಾಸಕರು ಜನರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಕುಮಾರಸ್ವಾಮಿ ಅವರ ಹೇಳಿಕೆಯನ್ನು ಸವಾಲು ಹಾಗೂ ಪ್ರತಿಷ್ಟೆಯಾಗಿ ಸ್ವೀಕರಿಸಿ, ನಾಲ್ಕು ಶಾಸಕರು ಜಿಲ್ಲೆಯ ಜನರ ಋಣ ತೀರಿಸುವಂತೆ ಕೆಲಸ ಮಾಡಬೇಕು ಎಂದು ವಿನಯಪೂರ್ವಕ ಮನವಿ ಮಾಡುತ್ತೇವೆ” ಎಂದು ತಿಳಿಸಿದರು.

ಚನ್ನಪಟ್ಟಣದಲ್ಲಿ ಕೃತಜ್ಞತಾ ಸಮಾರಂಭ ಯಾವಾಗ ಎಂದು ಕೇಳಿದಾಗ, “ಡಿ.14ರಂದು ಕೃತಜ್ಞತಾ ಸಮಾರಂಭವನ್ನು ಇಟ್ಟುಕೊಂಡಿದ್ದೇವೆ. ಸಿಎಂ ಹಾಗೂ ಡಿಸಿಎಂ ಕೂಡ ಈ ದಿನಾಂಕ ಕೊಟ್ಟಿದ್ದಾರೆ. ಆದರೆ ಕೆಲವು ಶಾಸಕರು ಅಧಿವೇಶನ ಮುಕ್ತಾಯದ ಬಳಿಕ ಮಾಡಿ ಎಂದು ಕೇಳುತ್ತಿದ್ದು, ಅಧಿವೇಶನದ ಬಳಿಕ ಭಾನುವಾರದಂದು ಈ ಸಮಾರಂಭ ಮಾಡುತ್ತೇವೆ” ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರ ಬೀಳಿಸಲು ನಾವು ಬಿಜೆಪಿಗೆ ಸಹಕಾರ ನೀಡಬೇಕು ಎಂದು ಕುಮಾರಸ್ವಾಮಿ ಅವರು ತಮ್ಮ ಕಾರ್ಯಕರ್ತರಿಗೆ ಕರೆ ನೀಡಿರುವ ಬಗ್ಗೆ ಕೇಳಿದಾಗ, “ಈಗ ಅವರು ಮಾಡುತ್ತಿರುವುದು ಅದೇ ಅಲ್ಲವೇ? ಅವರು ಈಗ ಅವರು ಯಾರ ಜತೆ ಇದ್ದಾರೆ? ಕಾಂಗ್ರೆಸ್ ಜೊತೆ ಇದ್ದಾರಾ? ಸ್ವತಂತ್ರವಾಗಿದ್ದಾರಾ? ಮಾಧ್ಯಮಗಳು ಅವರ ಹೇಳಿಕೆ ವಿಶ್ಲೇಷಣೆ ಮಾಡುವುದರಲ್ಲಿ ವ್ಯತ್ಯಾಸ ಮಾಡಿರಬೇಕು ಹೀಗಾಗಿ ಈ ರೀತಿ ಹೇಳಿದ್ದಾರೆ. ಅವರ ಜತೆ ಮತ್ತೆ ಸಂಬಂಧ ಭದ್ರಪಡಿಸಿಕೊಳ್ಳಲು ಈ ಹೇಳಿಕೆ ನೀಡುತ್ತಿದ್ದಾರೆ. ಅವರು ಬಿಜೆಪಿ ಜತೆಯಲ್ಲಿದ್ದಾರೆ ಎಂದು ರಾಜ್ಯ ಹಾಗೂ ರಾಷ್ಟ್ರದ ಜನರಿಗೆ ಗೊತ್ತಿದೆ” ಎಂದರು

ಸ್ವಾಮೀಜಿಗಳ ವಿರುದ್ಧದ ಪ್ರಕರಣ ಮುಕ್ತಾಯಗೊಳಿಸಲು ಮನವಿ

ಚಂದ್ರಶೇಖರ ಸ್ವಾಮೀಜಿಗಳ ವಿರುದ್ಧದ ಪ್ರಕರಣ ವಿಚಾರವಾಗಿ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, “ಸ್ವಾಮೀಜಿಗಳ ಮೇಲೆ ದ್ವೇಷದ ರಾಜಕಾರಣ ಮಾಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಈಗಾಗಲೇ ಸ್ವಾಮೀಜಿಗಳು ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ನಾವು ಸಂವಿಧಾನದ ಅಡಿಯಲ್ಲಿ ಪ್ರಜೆಯಾಗಿ ಬದುಕುತ್ತಿದ್ದು, ಸಂವಿಧಾನ ನಮಗೆ ಮತದಾನ ಸೇರಿದಂತೆ ಅನೇಕ ಹಕ್ಕುಗಳನ್ನು ನೀಡಿದೆ. ಸಂವಿಧಾನ ನೀಡಿರುವ ವಾಕ್ ಸ್ವಾತಂತ್ರ್ಯವನ್ನು ಬಳಸಿಕೊಂಡು ಕೆಲವರು ಆಗಾಗ್ಗೆ ಏನೇನೋ ಹೇಳಿಕೆ ನೀಡುತ್ತಿರುತ್ತಾರೆ. ಪರಮಪೂಜ್ಯರು ಈಗಾಗಲೇ ಸ್ಪಷ್ಟನೆ ನೀಡಿ, ತಮ್ಮ ಮಾತು ಸಾಂದರ್ಭಿಕವಾಗಿ ತಪ್ಪು ಎಂದಿದ್ದಾರೆ. ಇಂತಹ ಹೇಳಿಕೆ ಬಂದಾಗ ಸರ್ಕಾರ ದೂರು ದಾಖಲಿಸಿಕೊಳ್ಳುವುದು ಸಹಜ. ಸ್ವಾಮೀಜಿಗಳು ವಿಷಾದ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಇಲ್ಲಿಗೆ ಮುಕ್ತಾಯಗೊಳಿಸಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಹಾಗೂ ಗೃಹಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ” ಎಂದು ತಿಳಿಸಿದರು.

ಡಿ.ಕೆ. ಶಿವಕುಮಾರ್ ಜತೆ ಯತ್ನಾಳ್ ಉತ್ತಮ ಬಾಂಧವ್ಯ

ವಿಜಯೇಂದ್ರ ಹಾಗೂ ಡಿ.ಕೆ ಶಿವಕುಮಾರ್ ನಡುವಣ ಹೊಂದಾಣಿಕೆ ರಾಜಕೀಯದ ದಾಖಲೆ ಬಿಡುಗಡೆ ಮಾಡುತ್ತೇನೆ ಎಂಬ ಯತ್ನಾಳ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ದಾಖಲೆಗಳನ್ನು ಬಿಡುಗಡೆ ಮಾಡಲಿ. ವಿಜಯೇಂದ್ರ ಮಾತ್ರವಲ್ಲ ಯತ್ನಾಳ್ ಅವರಿಗೂ ಶಿವಕುಮಾರ್ ಜತೆ ಉತ್ತಮ ಬಾಂಧವ್ಯವಿದೆ. ಅವರು ಕೂಡ ಆತ್ಮೀಯರು. ಅವರು ಕೂಡ ಶಿವಕುಮಾರ್ ಅವರ ಜತೆಗೆ ಉಭಯಕುಶಲೋಪರಿ ಚರ್ಚೆ ಮಾಡುತ್ತಿರುತ್ತಾರೆ. ಕೇವಲ ವಿಜಯೇಂದ್ರ ಬಗ್ಗೆ ಯಾಕೆ ಹೇಳಿದ್ದಾರೆ ಗೊತ್ತಿಲ್ಲ. ನನಗೆ ಅವರ ಆಂತರಿಕ ವಿಚಾರ ಅಗತ್ಯವಿಲ್ಲ” ಎಂದರು.

ಸ್ವಾಭಿಮಾನಿ ಸಮಾವೇಶದ ಬಗ್ಗೆ ಕೇಳಿದಾಗ, “ಇದು ಕಾಂಗ್ರೆಸ್ ಪಕ್ಷದ ಸಮಾವೇಶ. ಇದನ್ನು ರಾಜ್ಯದ ಮೂರ್ನಾಲ್ಕು ಕಡೆಗಳಲ್ಲಿ ಮಾಡುವ ಉದ್ದೇಶವಿದ್ದು, ಮೊದಲು ಹಾಸನದಲ್ಲಿ ಮಾಡಲಾಗುತ್ತಿದೆ. ಈ ಸಮಾವೇಶದಲ್ಲಿ ರಾಜ್ಯ ಹಾಗೂ ರಾಷ್ಟ್ರ ನಾಯಕರು ಭಾಗವಹಿಸಲಿದ್ದಾರೆ. ಕೆಲವರು ಹೇಳಿಕೆ ನೀಡುವಾಗ ಅವರನ್ನು ಓಲೈಸಿಕೊಳ್ಳಲು ಈ ರೀತಿ ಹೇಳಿಕೆ ನೀಡುತ್ತಾರೆ. ಆದರೆ ಎಲ್ಲರಿಗಿಂತ ಪಕ್ಷ ಮೊದಲು ಎಂದು ಅರಿತಿದ್ದಾರೆ ಎಂದು ಭಾವಿಸಿದ್ದೇನೆ” ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments