ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಐದು ವರ್ಷ ಇರುತ್ತಾರೋ ಮೂರು ವರ್ಷ ಇರುತ್ತಾರೋ ಅದು ಹೈಕಮಾಂಡ್‌ಗೆ ಗೊತ್ತಿರುವ ವಿಚಾರ. ಆದರೆ ಈಗಂತೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ. ಇದರಲ್ಲಿ ಅನುಮಾನ ಬೇಡ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಮಂಗಳವಾರ ಮೈಸೂರಿಗೆ ಭೇಟಿ ನೀಡಿದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿ, “ಸಚಿವ ಮಹದೇವಪ್ಪ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಅವರ ಮನೆ ಹಾಗೂ ನಮ್ಮ ಮನೆ ಅಕ್ಕ ಪಕ್ಕ ಇವೆ. ಪ್ರತಿನಿತ್ಯ ನಾವು ಭೇಟಿ ಆಗುತ್ತಿರುತ್ತೇವೆ. ಇಂದು ರಾತ್ರಿ 9 ಗಂಟೆಯವರೆಗೂ ಮಹದೇವಪ್ಪ ಜೊತೆಗೆ ದಸರಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತೇನೆ” ಎಂದರು.
“ಸಿಎಂ ಬದಲಾವಣೆ ಪ್ರಶ್ನೆಯೇ ಉದ್ಭವಿಸಿಲ್ಲ. ಅಂತಹ ಯಾವುದೇ ಚರ್ಚೆಗಳೂ ನಡೆದಿಲ್ಲ. ವಿಪಕ್ಷಗಳು, ಮಾಧ್ಯಮಗಳು, ಚರ್ಚೆ ಮಾಡುತ್ತಿವೆ. ವಿಪಕ್ಷಗಳ ನಾಯಕರು ಪ್ರೀತಿಯಿಂದ ನಮ್ಮ ಹೆಸರು ಹೇಳುತ್ತಿದ್ದಾರೆ ಅಷ್ಟೇ. ಆದರೆ ನಮ್ಮ ಪಕ್ಷದಲ್ಲಿ ಯಾವುದೇ ಚರ್ಚೆ, ಬೆಳವಣಿಗೆ ನಡೆದಿಲ್ಲ. ನಾನು ಈ ವಿಚಾರವನ್ನು ಹಲವು ಬಾರಿ ಸ್ಪಷ್ಟ ಪಡಿಸಿದ್ದೇನೆ” ಎಂದು ತಿಳಿಸಿದರು.
“ಯಾವುದೇ ನಾಯಕರ ಬೆಂಬಲಿಗರು ಅವರ ನಾಯಕರಿಗೆ ಮುಂದಿನ ಸಿಎಂ ಎಂದು ಜೈಕಾರ ಹಾಕುವುದು ಸರ್ವೇ ಸಾಮಾನ್ಯ. ಇದನ್ನೇ ಮುಂದಿಟ್ಟುಕೊಂಡು ಏನೋ ಬದಲಾವಣೆ ಆಗುತ್ತದೆ ಎನ್ನೋದು ಸರಿಯಲ್ಲ” ಎಂದರು.
ಇನ್ನು ಸಿಎಂ ರೇಸ್‌ನಲ್ಲಿ ಡಿ ಕೆ ಶಿವಕುಮಾರ್ ಇದ್ದಾರಾ, ಇಲ್ಲವೋ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, “ಮತ್ತೊಬ್ಬರ ವಿಚಾರ ನಾನು ಹೇಳಲು ಆಗೋದಿಲ್ಲ” ಎಂದು ಹೇಳಿದರು.