ಕರ್ತವ್ಯ ನಿರ್ವಹಿಸುತ್ತಿದ್ದ ಗುತ್ತಿದಾರರ ಕಚೇರಿಯಲ್ಲಿಯೇ ಕಳ್ಳತನ ಮಾಡಿ ಪರಾರಿಯಾಗಿದ್ದ ಖತರ್ನಾಕ್ ನೌಕರನೊಬ್ಬನನ್ನು ವಿಜಯನಗರ ಪೊಲೀಸರು ಬಂಧಿಸಿ 24.50 ಲಕ್ಷ ನಗದನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಮಹೇಶ್(26) ಬಂಧಿತ ಆರೋಪಿಯಾಗಿದ್ದು, ಆತನಿಂದ 24.50 ಲಕ್ಷ ನಗದನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ಮಾ. ರಂದು ರಾತ್ರಿ 8 ರ ವೇಳೆ ಗುತ್ತಿಗೆದಾರ ನವೀನ್ ಕುಮಾರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಯು ಕೆಲಸಗಾರರಿಗೆ ವೇತನ ನೀಡಲು ಕಛೇರಿಯ ಕ್ಯಾಶ್ ಸೆಕ್ಷನ್‍ನಲ್ಲಿ ಬ್ಯಾಗ್ ನಲ್ಲಿ ತಂದಿಟ್ಟಿದ್ದ 25 ಲಕ್ಷ ನಗದನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದನು.
ಈ ಸಂಬಂಧ ವಿಜಯನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆಯನ್ನು ನಡೆಸಿ ಕಾರ್ಯಾಚರಣೆ ಕೈಗೊಂಡು ಕಳೆದ ಏ. 28 ರಂದು ಮಧ್ಯಾಹ್ನ ಮಡಿಕೇರಿ ಟೋಲ್‍ಗೇಟ್ ಬಳಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲಿಂದ ಆರೋಪಿಯನ್ನು ನಗರಕ್ಕೆ ಕರೆತಂದು ವಿಚಾರಣೆಗೊಳಪಡಿದಾಗ ಕಳುವು ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.
ಕಳವು ಮಾಡಿದ ನಗದು ಹಣವನ್ನು ಮೂಡಲಪಾಳ್ಯದಲ್ಲಿರುವ ತನ್ನ ಸ್ನೇಹಿತನ ರೂಂನಲ್ಲಿ ಇಟ್ಟಿರುವುದಾಗಿ ತಿಳಿಸಿದ್ದು, ಸ್ನೇಹಿತನ ಮನೆಯಿಂದ 24.50 ಲಕ್ಷ ಜಪ್ತಿ ಮಾಡಿ ಹೆಚ್ಚಿನ ತನಿಖೆಯನ್ನು ನಡೆಸಲಾಗಿದೆ.
ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ.ಎಸ್.ಗಿರೀಶ್ ಎಸಿಪಿ ಚಂದನ್ ಕುಮಾರ್ ಮಾರ್ಗದರ್ಶನದಲ್ಲಿ ವಿಜಯನಗರ ಪೊಲೀಸ್ ಇನ್ಸ್‌ಪೆಕ್ಟರ್ ಎಫ್.ಕೆ ನದಾಫ್ ಮತ್ತವರ ಸಿಬ್ಬಂದಿ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.