ಶಹಾಪುರ: ರಾಜ್ಯಮಟ್ಟದ ಪ್ರತಿಷ್ಠಿತ ಹೊನ್ಕಲ್ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ನೀಡುವ ರಾಜ್ಯ ಮಟ್ಟದಲ್ಲಿ ಪುರಸ್ಕಾರಕ್ಕೆ ಐದು ಕೃತಿಗಳು ಆಯ್ಕೆಯಾಗಿವೆ ಎಂದು ಸಿದ್ಧರಾಮ ಹೊನ್ಕಲ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ಹಂಚಿಕೊಂಡಿರುವ ಅವರು, “ವಿವಿಧ ಪ್ರಕಾರದ 2022-2023ನೇ ಸಾಲಿನ ಕೃತಿಗಳನ್ನು ಅಹ್ವಾನಿಸಲಾಗಿತ್ತು. ಅನೇಕ ಲೇಖಕ ಲೇಖಕಿಯರು ತಮ್ಮ ಉತ್ತಮ ಕೃತಿಗಳನ್ನು ಪುರಸ್ಕಾರದ ಪರಿಶೀಲನೆಗೆ ಕಳಿಸಿದ್ದರು. ಆ ಪೈಕಿ ಐದು ಲೇಖಕ-ಲೇಖಕಿಯರ ಕೃತಿಗಳು ಅಂತಿಮ ಸುತ್ತಿನಲ್ಲಿ ಪುಸ್ತಕ ಆಯ್ಕೆ ಸಮಿತಿಯ ಮೂಲಕ ಆಯ್ಕೆಯಾಗಿವೆ” ಎಂದು ಹೇಳಿದ್ದಾರೆ.
ಪ್ರಶಸ್ತಿ ಪುರಸ್ಕೃತರು
ಡಾ.ಎಚ್ ಎಸ್ ಸತ್ಯನಾರಾಯಣ ಯುವ ತಲೆಮಾರಿನ ಹೆಸರಾಂತ ವಿಮರ್ಶಕ ಚಿಕ್ಕಮಂಗಳೂರು ಅವರ “ಪನ್ನೆರಳೆ” ಲಲಿತ ಪ್ರಬಂಧ ಸಂಕಲನ, ಖ್ಯಾತ ಕಾದಂಬರಿಕಾರ್ತಿ ಫೌಜಿಯಾ ಸಲಿಂ ದುಬೈ ಅವರ “ನೀ ದೂರ ಹೋದಾಗ..” ಕಾದಂಬರಿ, ಯುವ ತಲೆಮಾರಿನ ಕಥೆಗಾರ ವೀರೇಂದ್ರ ರಾವಿಹಾಳ್ ಅವರ “ಡಂಕಲ್ ಪೇಟೆ” ಕಥಾ ಸಂಕಲನ, ಹೆಸರಾಂತ ಕವಿಯತ್ರಿ “ಪದ್ಮಶ್ರೀ ಗೋವಿಂದರಾಜ್ ಭದ್ರಾವತಿ” ಅವರ “ಅವಳು” ಕವನ ಸಂಕಲನ, ಹೆಸರಾಂತ ಹಿರಿಯ ಲೇಖಕ ಡಾ.ಬಸವಪ್ರಭು ಪಾಟೀಲ ಬೆಟ್ಟದೂರು ಅವರ ಸಂಪಾದನೆಯ ಹಿರಿಯ ತಲೆಮಾರಿನ ಸಾಂಸ್ಕೃತಿಕ ಸಾಹಿತ್ಯಿಕ ವ್ಯಕ್ತಿ ಚಿತ್ರಣಗಳ “ಸಂಗಡಿಗರ ಸಮಿತಿ” ಕೃತಿ ಸಂಕೀರ್ಣ ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆ ಆಗಿವೆ.
“ಐದು ಕೃತಿಗಳು ಹಾಗೂ ಈ ಐದು ಕೃತಿಗಳ ಲೇಖಕರಿಗೆ ಪ್ರಶಸ್ತಿಯ ಜೊತೆಗೆ ಬೆಳ್ಳಿ ಪದಕ, ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ ಹಾಗೂ ವಿಶೇಷ ಸನ್ಮಾನ ಮಾಡಿ ಗೌರವಿಸಲಾಗುವುದು” ಎಂದು ಹೊನ್ಕಲ್ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಆಯ್ಕೆ ಸಮಿತಿಯ ಪರವಾಗಿ ಲೇಖಕ ಸಿದ್ಧರಾಮ ಹೊನ್ಕಲ್ ಮಾಹಿತಿ ಹಂಚಿಕೊಂಡಿದ್ದಾರೆ.
ಹೊನ್ಕಲ್ ಕುಟುಂಬದಿಂದ ಅಭಿನಂದನೆ
ಪುರಸ್ಕೃತರಿಗೆ ಅವರ ಸಹೋದರರಾದ ವಿಜಯಕುಮಾರ್ ಹೊನ್ಕಲ್, ಜಗದೀಶ ಹೊನ್ಕಲ್, ಮತ್ತು ಪ್ರತಿಷ್ಠಾನದ ಕಾರ್ಯದರ್ಶಿ ಬಸವಪ್ರಭು ಹೊನ್ಕಲ್, ಹಾಗೂ ಆಯ್ಕೆ ಸಮಿತಿಯ ಸದಸ್ಯರು, ಮತ್ತು ಹೊನ್ಕಲ್ ಪರಿವಾರದ ಅನೇಕ ಬಂಧು ಮಿತ್ರರು ಅಭಿನಂದಿಸಿದ್ದಾರೆ.
ಇದೇ ಪ್ರಶಸ್ತಿ ಪ್ರದಾನ ವೇದಿಕೆಯಲ್ಲಿ ಲೇಖಕ ಸಿದ್ಧರಾಮ ಹೊನ್ಕಲ್ ಅವರ “ಹೊನ್ಕಲ್ ರ ಶಾಯಿರಿಲೋಕ” (ಶಾಯಿರಿಗಳ ಸಂಕಲನ), “ನುಡಿನೋಟ” (ವಿಮರ್ಶೆ ಹಾಗೂ ವ್ಯಕ್ತಿ ಚಿತ್ರಣಗಳ ಸಂಕಲನ), “ಪ್ರತಿಬಿಂಬ” (ಹೊನ್ಕಲ್ ರ ಕೃತಿಗಳಿಗೆ ಬಂದ ವಿಮರ್ಶೆಗಳ ಕೃತಿ), “ಲೋಕ ಸಂಚಾರಿ” (ಆರು ಪ್ರವಾಸ ಕಥನಗಳ ಸಮಗ್ರ ಕೃತಿ), “ನಿನ್ನ ಜೊತೆ ಜೊತೆಯಲಿ..” ( ಇಲ್ಲಿಯವರೆಗಿನ ಸಮಗ್ರ ಗಜಲ್ ಸಂಕಲನ) ಅಲ್ಲದೆ ಪ್ರಭುಲಿಂಗ ನೀಲೂರೆ ಅವರು ಬರೆದ ಹೊನ್ನುಡಿಯ ಸಾಧಕ ಸಿದ್ಧರಾಮ ಹೊನ್ಕಲ್ ಕೃತಿ ಕೃತಿಗಳು ಲೋಕಾರ್ಪಣೆ ಆಗಲಿವೆ. ಕಾರ್ಯಕ್ರಮದ ದಿನಾಂಕ ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಸಿದ್ಧರಾಮ ಹೊನ್ಕಲ್ ವಿವರಿಸಿದ್ದಾರೆ.