ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರ ಯಾವಾಗಲೂ ಕಾಂಗ್ರೆಸ್ ಭದ್ರಕೋಟೆ. ಈಗ ಅದನ್ನು ಮರಳಿ ಕಾಂಗ್ರೆಸ್ ವಶಕ್ಕೆ ತೆಗೆದುಕೊಳ್ಳುವ ಕಾಲ ಕೂಡಿಬಂದಿದೆ ಎಂದು ವಸತಿ ಸಚಿವ ಜಮೀರ್ ಅಹಮದ್ ಹೇಳಿದರು.
ಶಿವಾಜಿ ನಗರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಬೆಂಗಳೂರು ಕೇಂದ್ರ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಆಲಿಖಾನ್ ಅವರ ಪರ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
“ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರ ಯಾವಾಗಲೂ ಕಾಂಗ್ರೆಸ್ ಪಕ್ಷದ ಭದ್ರಕೋಟೆ. ಹಿಂದೆ ನಾನು ಜೆಡಿಎಸ್ ನಿಂದ ಸ್ಪರ್ಧೆ ಮಾಡಿದ ಕಾರಣ ಬಿಜೆಪಿ ಗೆಲುವು ಪಡೆದುಕೊಂಡಿತ್ತು. ಇದೀಗ ಕಾಂಗ್ರೆಸ್ ಪರವಾದ ಅಲೆ ಎದ್ದಿದ್ದು, ಮರಳಿ ಕಾಂಗ್ರೆಸ್ ವಶಕ್ಕೆ ಪಡೆಯಬೇಕಿದೆ” ಎಂದರು.
“ಬಿಜೆಪಿ ನಾಯಕರು ಮಾತೆತ್ತಿದರೆ ಹಿಂದೂ ಮುಸಲ್ಮಾನ ಎನ್ನುತ್ತಾರೆ. ಅವರಿಗೆ ಹಿಂದೂವು ಬೇಕಿಲ್ಲ, ಮುಸಲ್ಮಾನರೂ ಬೇಕಿಲ್ಲ. ಅಧಿಕಾರವಷ್ಟೇ ಬೇಕು. ಅಧಿಕಾರಕ್ಕಾಗಿ ಇಬ್ಬರ ನಡುವೆ ಬೆಂಕಿ ಹಚ್ಚುತ್ತಾರೆ. ಆದರೆ, ನಾವು ಅಣ್ಣತಮ್ಮಂದಿರಂತೆ ಬದುಕುತ್ತಿದ್ದೇವೆ. ಅಂತೆಯೇ ಬದುಕುತ್ತೇವೆ. ಇಂತಹ ಶಾಂತಿಯ ವಾತಾವರಣ ನಿರ್ಮಾಣವಾಗುವುದು ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಮಾತ್ರ” ಎಂದು ತಿಳಿಸಿದರು.
ಗ್ಯಾರಂಟಿ ಕೈ ಹಿಡಿಯುತ್ತವೆ
“ನಮ್ಮ ಸರಕಾರ ಅಧಿಲಾರಕ್ಕೆ ಬಂದಾಗ ಗ್ಯಾರಂಟಿ ಜಾರಿ ಸಾಧ್ಯವಿಲ್ಲ ಎಂದರು. ಈಗ ಎಲ್ಲ ಗ್ಯಾರಂಟಿ ಜಾರಿಯಾಗಿದೆ. ಇದು ಬಡವರ ಬಗ್ಗೆ ಕಾಂಗ್ರೆಸ್ ಗೆ ಕಾಳಜಿ ಎಷ್ಟಿದೆ ಎಂಬುದರ ಪ್ರತೀಕ. ಮೋದಿ ಬಡವರು, ಟೀ ಮಾರಿದ್ದರು ಎಂದು ನಂಬಿ ಜನ ವೋಟ್ ಹಾಕಿದರು. ಆದರೆ ಮೋದಿ ಏನ್ ಮಾಡಿದರು? ಬರೀ ಶ್ರೀಮಂತರನ್ನು ಉದ್ಧಾರ ಮಾಡುತ್ತಿದ್ದಾರೆ. ಮನ್ಸೂರ್ ಆಲಿಖಾನ್ ವಿದ್ಯಾವಂತ ನಾಯಕರು, ಅವರನ್ನು ಗೆಲ್ಲಿಸುವ ಹೊಣೆಗಾರಿಕೆ ನಿಮ್ಮದು. ದೇಶದ ಜನ ಬದಲಾವಣೆ ಬಯಸಿದ್ದಾರೆ. ರಾಹುಲ್ ಗಾಂಧಿ ಪ್ರಧಾನಿಯಾಗುದನ್ನು ತಪ್ಪಿಸಲು ಸಾಧ್ಯವಿಲ್ಲ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಿವಾಜಿ ನಗರ ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, “ನಮ್ಮ ಕೇಂದ್ರ ಲೋಕಸಭೆ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಗೆಲುವು ಶತಸಿದ್ಧ. ಬಿಜೆಪಿಗೆ ನಾವು ಬುದ್ದಿ ಕಲಿಸದಿದ್ದರೆ ಬಡವರು ಬದುಕಲು ಸಾಧ್ಯವಿಲ್ಲ ಎಂಬ ಭಾವನೆ ಮೂಡಿದೆ. ಬಿಜೆಪಿ ಸರಕಾರ ಅಂಬಾನಿ, ಅದಾನಿ ಗುಲಾಮರಾಗಿ ಕೆಲಸ ಮಾಡುತ್ತಿದೆ” ಎಂದು ಹರಿಹಾಯಯ್ದರು.
ಅಭ್ಯರ್ಥಿ ಮನ್ಸೂರ್ ಆಲಿಖಾನ್ ಮಾತನಾಡಿ, “ನಮ್ಮ ಕಾರ್ಯಕರ್ತರ ಉತ್ಸಾಹ, ರಿಜ್ವಾನ್ ಅವರಂತಹ ಯುವ ನಾಯಕರು ಇದ್ದರೆ ಕಾಂಗ್ರೆಸ್ ಸೋಲಲು ಸಾಧ್ಯವೇ ಇಲ್ಲ. ಜಮೀರ್ ಅಹಮದ್ ಅವರಂತಹ ನಾಯಕರಿದ್ದರೆ ಗೆಲುವು ಸುಲಭ. ಮೋದಿ ಹವಾ ಇದೆ ಎಂದುಕೊಳ್ಳುವ ಪರಿಸ್ಥಿತಿಯನ್ನು ಮಾಧ್ಯಮಗಳು ಬಿಂಬಿಸುತ್ತಿವೆ” ಎಂದರು.
ಸಭೆಯಲ್ಲಿ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಜಿ. ಶೇಖರ್, ಬೆಂಗಳೂರು ಕೇಂದ್ರ ಜಿಲ್ಲಾ ಅಧ್ಯಕ್ಷ ಗೌತಮ್ ಕುಮಾರ್ ಹಾಗೂ ಅನೇಕ ಮುಖಂಡರು ಇದ್ದರು.