ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿ ಐಟಿ, ಇಡಿ, ಸಿಬಿಐ ಹಾಗೂ ರಾಜ್ಯಪಾಲರನ್ನು ಬಳಸಿ ತಮ್ಮ ಮಾತು ಕೇಳದ ರಾಜ್ಯ ಸರ್ಕಾರಗಳನ್ನು ಅಸ್ಥಿರಗೊಳಿಸುವ ಕೆಲಸ ಮಾಡುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಜೊತೆ ಜಂಟಿಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
“ಮುಖ್ಯಮಂತ್ರಿಗಳ ವಿರುದ್ಧದ ಪ್ರಸಿಕ್ಯೂಷನ್ ಪ್ರಕರಣದಿಂದಾಗಿ ರಾಜ್ಯಪಾಲರ ನಡೆ ಹಾಗೂ ಅವರ ಕಾರ್ಯಗಳ ಮೇಲೆ ಬೆಳಕು ಚೆಲ್ಲಿದಂತಾಗಿದೆ. ರಾಜ್ಯಪಾಲರು ತಮ್ಮ ಅಧಿಕಾರವನ್ನು ದುರಾಡಳಿತಕ್ಕೆ ಬಳಸಿಕೊಳ್ಳುತ್ತಿದ್ದಾರೆ” ಎಂದರು.
“2019ರ ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ದೊರೆಯುವುದಿಲ್ಲ. ಆದರೆ ಅಲ್ಲಿನ ರಾಜ್ಯಪಾಲರು ದೇವೇಂದ್ರ ಫಡ್ನವಿಸ್ ಅವರಿಗೆ ಬೆಳಗಿನ ಜಾವ ಐದು ಗಂಟೆಗೆ ಪ್ರಮಾಣವಚನ ಬೋಧಿಸುತ್ತಾರೆ. ಈ ಸರ್ಕಾರ ಕೇವಲ 80 ಗಂಟೆಗಳಲ್ಲಿ ಬಿದ್ದು ಹೋಗುತ್ತದೆ. ಉದ್ದವ್ ಠಾಕ್ರೆ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸುತ್ತಾರೆ. ಅವರನ್ನು ಮೇಲ್ಮನೆಗೆ ಕಳಿಸಬೇಕು ಎಂದು ತೀರ್ಮಾನ ಮಾಡಲಾಗುತ್ತದೆ. ಇದಕ್ಕೆ ರಾಜ್ಯಪಾಲರು ಆರು ತಿಂಗಳ ಕಾಲ ಅನುಮೋದನೆಯನ್ನೇ ನೀಡುವುದಿಲ್ಲ. ಆನಂತರ ಉದ್ದವ್ ಠಾಕ್ರೆ ಅವರು ದೆಹಲಿಗೆ ತೆರಳಿ ರಾಷ್ಟ್ರಪತಿಗಳು ಹಾಗೂ ಪ್ರಧಾನಿಗಳ ಗಮನಕ್ಕೆ ತಂದು ಇದು ಅಸಾಂವಿಧಾನಿಕ ನಡೆ ಎಂದಾಗ ಠಾಕ್ರೆ ಅವರಿಗೆ ಅವಕಾಶ ಸಿಗುತ್ತದೆ” ಎಂದು ವಿವರಿಸಿದರು.
“ಪಶ್ಚಿಮ ಬಂಗಾಳ ರಾಜ್ಯಪಾಲರಾಗಿದ್ದ ಜಗದೀಪ್ ಧನಕರ್ ಅವರ ರಾಜಕೀಯ ಹಸ್ತಕ್ಷೇಪದಿಂದ ಕಾನೂನು ಸಂಘರ್ಷ ಉಂಟಾಗಿತ್ತು. ಕೇರಳದ ರಾಜ್ಯಪಾಲರಾಗಿದ್ದ ಆರಿಫ್ ಮೊಹಮ್ಮದ್ ಖಾನ್ ಅವರಿಗೆ ಸರ್ಕಾರವು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕರಾಳ ಕಾಯ್ದೆಗಳ ವಿರುದ್ಧ ವಿಶೇಷ ಅಧಿವೇಶ ನಡೆಸಲು ಅನುಮತಿ ನೀಡಬೇಕೆಂದು ಪತ್ರ ಬರೆಯುತ್ತದೆ. ಆದರೆ ರಾಜ್ಯಪಾಲರು ಅಧಿವೇಶ ನಡೆಸಲು ಅನುಮತಿಯನ್ನೇ ನೀಡುವುದಿಲ್ಲ” ಎಂದರು.
“2018ರಲ್ಲಿ ಕರ್ನಾಟಕದಲ್ಲಿ ರಾಜ್ಯಪಾಲರಾಗಿದ್ದ ವಾಜುಬಾಯಿ ವಾಲಾ ಅವರು ಯಡಿಯೂರಪ್ಪನವರಿಗೆ ಬಹುಮತ ಇಲ್ಲದಿದ್ದರೂ ಸಹ ಪ್ರಮಾಣ ವಚನ ಬೋಧಿಸಿ 15 ದಿನಗಳ ಒಳಗೆ ಬಹುಮತ ಸಾಬೀತು ಪಡಿಸಲು ಅವಕಾಶ ನೀಡಿದ್ದರು. ಆಗ ಕಾಂಗ್ರೆಸ್ ಪಕ್ಷವು ಸುಪ್ರೀಂಕೋರ್ಟ್ ಗೆ ಹೋದಾಗ ನ್ಯಾಯಾಲಯವು 15 ದಿನ ಅಲ್ಲ ಕೇವಲ ಮೂರು ದಿನದಲ್ಲಿ ಸಾಬೀತು ಪಡಿಸುವಂತೆ ಹೇಳಿತು. ಆನಂತರ ಸರ್ಕಾರ ಬಿದ್ದುಹೋಯಿತು” ಎಂದು ತಿಳಿಸಿದರು.
“ನವೆಂಬರ್ 2023ರಲ್ಲಿ ಸುಪ್ರೀಂ ಕೋರ್ಟ್ ತಮಿಳುನಾಡಿನ ರಾಜಭವನ ಸೂಕ್ಷ್ಮವಾಗಿ ಪರಿಶೀಲಿಸಿತ್ತು. ಚುನಾಯಿತ ಸರ್ಕಾರ ಚರ್ಚೆ ನಡೆಸಿ ಅನುಮೋದನೆ ಮಾಡಿದ್ದ 10 ಬಿಲ್ ಗಳನ್ನು ರಾಜ್ಯಪಾಲರು ಸಹಿ ಮಾಡದೆ ವಾಪಸ್ ಕಳುಹಿಸಿದ್ದರು. ಜನವರಿ 2023ರಲ್ಲಿ ಇದೆ ತಮಿಳುನಾಡಿನ ರಾಜ್ಯಪಾಲರು ರಾಜ್ಯಪಾಲರ ಭಾಷಣವನ್ನೇ ಧಿಕ್ಕರಿಸಿ ಹೊರ ನಡೆದಿದ್ದರು. ದೆಹಲಿಯಲ್ಲಿ ಕಳೆದ 9 ವರ್ಷಗಳಿಂದ ರಾಜ್ಯಪಾಲರು ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾರೆ. ಕೇರಳದಲ್ಲಿ ಒಂದೊಂದು ಬಿಲ್ಲನ್ನು ಸುಮಾರು ಎರಡು ವರ್ಷಗಳ ಕಾಲ ಸಹಿ ಮಾಡದೆ ಬಾಕಿ ಇಟ್ಟಿದ್ದರು. ಆನಂತರ ಕೇರಳ ಸರ್ಕಾರ ನ್ಯಾಯಾಲಯದ ಮೊರೆ ಹೋಯಿತು. ಬಿಲ್ ಗಳನ್ನು ಹೀಗೆ ರಾಜ್ಯಪಾಲರು ಇಟ್ಟುಕೊಳ್ಳಬಾರದು ಎಂದು ನ್ಯಾಯಾಲಯದಿಂದ ಆದೇಶ ತಂದರು” ಎಂದು ನೆನಪಿಸಿದರು.
ಸಿಎಂ ಜೊತೆ ನಿಲ್ಲುತ್ತೇವೆ
“ಶನಿವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯಪಾಲರ ಪ್ರಾಸಿಕ್ಯೂಷನ್ ಆದೇಶದ ವಿರುದ್ಧ ಒಂದಷ್ಟು ನಿಲುವುಗಳನ್ನು ತೆಗೆದುಕೊಳ್ಳಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಸರ್ಕಾರ ಹಾಗೂ ಪಕ್ಷದ ಎಲ್ಲಾ ಪದಾಧಿಕಾರಿಗಳು ಮುಖ್ಯಮಂತ್ರಿಯ ಜೊತೆ ನಿಲ್ಲುತ್ತಾರೆ. ಸಚಿವ ಸಂಪುಟ ಸಲಹೆಯನ್ನ ಆರ್ಟಿಕಲ್ 163 ಅಡಿಯಲ್ಲಿ ತಿರಸ್ಕಾರ ಮಾಡಿರುವುದನ್ನು ಸರ್ಕಾರ ಖಂಡಿಸಿದೆ. ರಾಜ್ಯಪಾಲರು ಒಂದಷ್ಟು ತೀರ್ಪುಗಳನ್ನು ತಮ್ಮ ಉತ್ತರದಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಅವರು ಇಡೀ ಆದೇಶವನ್ನೇ ತಿಳಿದುಕೊಳ್ಳದೆ ಅದರಲ್ಲಿ ಕೆಲವೊಂದಷ್ಟು ಮಾತ್ರ ಆಯ್ಕೆ ಮಾಡಿಕೊಂಡಿದ್ದಾರೆ. ಆರ್ಟಿಕಲ್ 17 ಎ ನಿಯಮಗಳನ್ನು ಗಾಳಿಗೆ ತೂರಿ ರಾಜ್ಯಪಾಲರು ನಡೆದುಕೊಂಡಿದ್ದಾರೆ” ಎಂದು ಹೇಳಿದರು.
ಕರಾಳ ದಿನ : ಶರತ್ ಬಚ್ಚೇಗೌಡ
ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಕರಾಳ ದಿನ ಎಂದರೆ ಸಿದ್ದರಾಮಯ್ಯನವರ ವಿರುದ್ಧ ರಾಜ್ಯಪಾಲರು ಪಾಸಿಕ್ಯೂಷನ್ ಗೆ ಅನುಮತಿ ನೀಡಿದ ದಿನ. ಕಳೆದ ಹತ್ತು ವರ್ಷಗಳಿಂದ ಸರ್ಕಾರಿ ಸಂಸ್ಥೆಗಳಾದ ಐಟಿ, ಇ ಡಿ, ಸಿಬಿಐ ಸೇರಿದಂತೆ ಅನೇಕ ಸಂಸ್ಥೆಗಳನ್ನು ಬಳಸಿಕೊಂಡು ಕೇಂದ್ರ ಬಿಜೆಪಿ ಸರ್ಕಾರ ವಿರೋಧ ಪಕ್ಷದ ನಾಯಕರ ಮೇಲೆ ಹಾಗೂ ಸರ್ಕಾರಗಳ ಮೇಲೆ ದಾಳಿ ನಡೆಸುತ್ತಲೇ ಬಂದಿದೆ” ಎಂದು ಶರತ್ ಬಚ್ಚೇಗೌಡ ವಾಗ್ದಾಳಿ ನಡೆಸಿದರು.
“ರಾಜ್ಯಪಾಲರು ಕೇಂದ್ರ ಬಿಜೆಪಿ ಸರ್ಕಾರದ ಕೈ ಗೊಂಬೆಯಾಗಿ ಸುಸ್ಥಿರ ಸರ್ಕಾರವನ್ನು ಅಸ್ಥಿರಗೊಳಿಸಲು ಹೊರಟಿದ್ದಾರೆ. ಕಟ್ಟಕಡೆಯ ಕಾಂಗ್ರೆಸ್ ಕಾರ್ಯಕರ್ತ, ಸಚಿವರು ಮುಖಂಡರು, ಎಲ್ಲರೂ ಸಹ ಮುಖ್ಯಮಂತ್ರಿಗಳು ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತೇವೆ. ಕಾನೂನು ಹೋರಾಟವನ್ನು ಮಾಡುತ್ತೇವೆ. ರಾಜ್ಯ ಜನತೆ ನಮ್ಮ ಜೊತೆ ನಿಲ್ಲಬೇಕು ಎಂದು ಮನವಿ ಮಾಡುತ್ತೇವೆ” ಎಂದರು.