ಬಳ್ಳಾರಿ ಸಂಸದ ದೇವೇಂದ್ರಪ್ಪ ಅವರ ಪುತ್ರ, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಪ್ರೊ. ರಂಗನಾಥ್ ಮೇಲೆ ಯುವತಿಯೊಬ್ಬರು ತನ್ನನ್ನು ವಿವಾಹವಾಗುವುದಾಗಿ ನಂಬಿಸಿ, ಲೈಂಗಿಕ ದೌರ್ಜನ್ಯ ನಡೆಸಿ ಮೋಸಮಾಡಿದ್ದಾರೆ ಎಂದು ಆರೋಪಿಸಿ ಬಸವನಗುಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರೊ. ರಂಗನಾಥ್‌ಗೆ 42 ವರ್ಷ, ಯುವತಿಗೆ 24 ವರ್ಷ ವಯಸ್ಸು. ಯುವತಿ ಬೆಂಗಳೂರಿನ ವಿಜಯನಗರ ನಿವಾಸಿಯಾಗಿದ್ದಾಳೆ. ಒಂದೂವರೆ ವರ್ಷದ ಹಿಂದೆ ಸ್ನೇಹಿತರ ಮೂಲಕ ಪರಿಚಯವಾದ ಯುವತಿ ಬಳಿಕ ರಂಗನಾಥ್‌ಗೆ ಕ್ಲೋಸ್ ಆಗಿದ್ದಳು ಎನ್ನಲಾಗಿದೆ.
ಪ್ರೊ. ರಂಗನಾಥ್‌ಗೆ ಮದುವೆಯಾಗಿ ಮಕ್ಕಳಿದ್ದರೂ ಯುವತಿ ಜತೆ ಪ್ರೇಮದಲ್ಲಿ ಒಂದಾಗಿ, ಆಕೆಯನ್ನು ಮೈಸೂರಿನ ಖಾಸಗಿ ಹೋಟೆಲ್‌ಗೆ ಕರೆಸಿಕೊಂಡು ದೈಹಿಕ ಸಂಪರ್ಕ ಬೆಳೆಸಿದ್ದಾರೆ ಎನ್ನಲಾಗಿದೆ.
ಯುವತಿ ದೂರಿನ ವಿವರ
2022ರಲ್ಲಿ ಪಾರ್ಟಿಯೊಂದರಲ್ಲಿ ಪ್ರೊ. ರಂಗನಾಥ್ ಅವರು ಪರಿಚಯವಾಗಿದ್ದರು. ಬಳಿಕ ಆಗಾಗ ಕರೆ ಮಾಡುತ್ತಿದ್ದರು. ತಾನು ಮೈಸೂರಿನ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು ಮದುವೆಯಾದರೆ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದರು. 2023ರ ಜನವರಿ 13ರಂದು ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದ ಅವರು ಬೆಂಗಳೂರಿನ ಒಂದು ಹೋಟೆಲ್‌ಗೆ ಕರೆಸಿಕೊಂಡು ಬಳಿಕ ಮೈಸೂರಿಗೆ ಕರೆದುಕೊಂಡು ಹೋದರು. ಅಲ್ಲಿ ರಾತ್ರಿ ತನ್ನ ಜತೆಗೇ ಇದ್ದು ದೈಹಿಕ ಸಂಪರ್ಕ ಬೆಳೆಸಿದರು. ಮದುವೆಯಾಗುತ್ತೇನೆ ಎಂದು ನಂಬಿಸಿದ್ದ ಅವರು ಬಳಿಕ ನನ್ನ ಜತೆ ಸರಿಯಾಗಿ ಮಾತನಾಡುತ್ತಿಲ್ಲ. ಮದುವೆ ಮಾಡಿಕೊಳ್ಳದೆ ಮೋಸ ಮಾಡಿದ್ದಾರೆ. ಮದುವೆಯಾಗು ಎಂದರೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.
ರಂಗನಾಥ್ ವಿರುದ್ಧ ಬೆಂಗಳೂರಿನ ಬಸವನಗುಡಿ ಮಹಿಳಾ ಠಾಣೆಯಲ್ಲಿ ಐಪಿಸಿ ಸೆಕ್ಷನ್ 420, 417, 506 ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
ಫೋನ್ ಮಾಡಿದ ಯುವತಿ
ಈ ನಡುವೆ, ಯುವತಿ ಸಂಸದ ದೇವೇಂದ್ರ ಅವರಿಗೂ ಕರೆ ಮಾಡಿರುವ ಯುವತಿ ತನಗೆ ಅನ್ಯಾಯವಾಗಿದೆ, ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದಾಳೆ. ಆಗ ದೇವೇಂದ್ರ ಅವರು ನಿನಗೆ ವಯಸ್ಸೆಷ್ಟು ಎಂದು ಕೇಳಿದ್ದಾರೆ. ಆಕೆ ಹೇಳಿಲ್ಲ. ನೀವು ನಿಮ್ಮ ಪಾಡಿಗೆ ಎಲ್ಲವನ್ನೂ ಮಾಡಿಕೊಂಡಿದ್ದೀರಿ, ಇನ್ನು ನನ್ನನ್ನು ಕೇಳುವುದೇನಿದೆ ಎಂದು ದೇವೇಂದ್ರ ಹೇಳಿದ್ದಾರಂತೆ.
ದೇವೇಂದ್ರಪ್ಪ ಅವರು ಕಾನೂನು ಪ್ರಕಾರ ನೀನು ಏನು ಮಾಡುವುದಿದ್ದರೂ ಮಾಡಬಹುದು ಎಂದು ಹೇಳಿದ್ದಾರೆ. ನಿಮ್ಮ ಘನತೆ ಗೌರವಗಳಿಗೆ ತೊಂದರೆಯಾಗುತ್ತದೆ ಎಂದು ಯುವತಿ ಹೇಳಿದರೂ ದೇವೇಂದ್ರಪ್ಪ ಅವರು ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ.
ಹನಿಟ್ರಾಪ್ ಆರೋಪ
ಈ ನಡುವೆ ಪ್ರೊ. ರಂಗನಾಥ್ ಅವರು, ಮೂರು ದಿನಗಳ ಹಿಂದೆ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಯುವತಿಯೊಬ್ಬಳು ಹಣಕ್ಕಾಗಿ ಪೀಡಿಸುತ್ತಿದ್ದಾಳೆ, ಹನಿ ಟ್ರ್ಯಾಪ್‌ಗೆ ಪ್ರಯತ್ನಿಸುತ್ತಿದ್ದಾಳೆ ಸಂತ್ರಸ್ತ ಯುವತಿ ಮೇಲೆ ದೂರು ದಾಖಲಿಸಿದ್ದಾರೆ.
ಒಂದುವರೆ ವರ್ಷದ ಹಿಂದೆ ಸ್ನೇಹಿತರ ಮೂಲಕ ಯುವತಿಯ ಪರಿಚಯವಾಗಿತ್ತು. ಬಳಿಕ ಆಕೆ ನನ್ನನ್ನು ಪ್ರೀತಿಸುತ್ತಿರುವುದಾಗಿ ಹೇಳಿದಾಗ ವಿರೋಧಿಸಿದ್ದೆ. ಕಳೆದ ಅಕ್ಟೋಬರ್ ತಿಂಗಳ ಆರಂಭದಲ್ಲಿ ಯುವತಿ ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ನನ್ನನ್ನು ಭೇಟಿಯಾಗಿ ಅವಾಚ್ಯ ಶಬ್ದಗಳಿಂದ ಬೈದಿದ್ದಾಳೆ. ಮೇಲ್ಜಾತಿಯವಳಾದ ನಾನು ಪರಿಶಿಷ್ಟ ಜಾತಿಯ ವ್ಯಕ್ತಿಯಾಗಿರುವ ನಿನ್ನನ್ನು ಮದುವೆ ಮಾಡಿಕೊಳ್ಳುವಂತೆ ಕೇಳಿದರೂ ಆಗುವುದಿಲ್ಲವೇ ಎಂದು ಜಾತಿನಿಂದನೆಯನ್ನೂ ಮಾಡಿದ್ದಾಳೆ ಎಂದು ದೂರಿನಲ್ಲಿ ಪ್ರೊ. ರಂಗನಾಥ್ ಹೇಳಿದ್ದಾರೆ.