- ಹೆಸರು ಬದಲಾಯಿಸುವುದಕ್ಕೇ ಕೆಲವರನ್ನು ಅವರು ಇಟ್ಟುಕೊಂಡಿದ್ದಾರೆ
- “ನರೇಗ ಉದ್ಯೋಗ ಸಂಜೀವಿನಿ” ಎಂದು ಕರೆದಿದ್ದ ಕುಮಾರಸ್ವಾಮಿಯಿಂದ ಈಗ ವಿರೋಧ
ನಾವು ರಾಜ್ಯಪಾಲರ ವಿರುದ್ಧವಿಲ್ಲ. ಕೇಂದ್ರ ಸರ್ಕಾರದ ವಿರುದ್ಧ ಇದ್ದೇವೆ. ಮನರೇಗಾ ಬದಲಾಯಿಸಿ “ವಿಬಿ ಜಿ ರಾಮ್ ಜಿ” ಎಂದು ಮಾಡಿದ್ದಾರೆ. ಇದರಲ್ಲಿರುವ ರಾಮ, ಧಶರಥ ರಾಮನೂ ಅಲ್ಲ. ಅಯೋಧ್ಯೆ ರಾಮನೂ ಅಲ್ಲ. ಹೆಸರು ಬದಲಾಯಿಸುವುದಕ್ಕೇ ಕೆಲವರನ್ನು ಅವರು ಇಟ್ಟುಕೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕಟುವಾಗಿ ಹೇಳಿದರು.
ರಾಜ್ಯಪಾಲರ ಭಾಷಣದ ಮೇಲೆ ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಮುಖ್ಯಮಂತ್ರಿ ಅವರು ಸೋಮವಾರ ಉತ್ತರಿಸಿ, “ರಾಜ್ಯಪಾಲರು ಪೂರ್ತಿ ಭಾಷಣ ಓದದೆ ತರಾತುರಿಯಲ್ಲಿ ಹೋದರು. ಭಾಷಣದಲ್ಲಿದ್ದ “ಜೈ ಸಂವಿಧಾನ” ಎನ್ನುವುದನ್ನೂ ಉಲ್ಲೇಖಿಸದೆ, ಓದದೆ ಹೋದರು. ರಾಷ್ಟ್ರಗೀತೆ ಮುಗಿಯುವವರೆಗೂ ಕಾಯದೆ ಹೋಗಿಬಿಟ್ಟರು. ಇದು ಸರಿಯಲ್ಲ” ಎಂದರು.
“ಸಂವಿಧಾನದ ಆರ್ಟಿಕಲ್ 176 ಓದಿದ್ದರೆ ಚನ್ನಾಗಿರುತ್ತಿತ್ತು. ಸಂವಿಧಾನ ಜಾರಿಯಾದ ದಿನದಿಂದ ಇವತ್ತಿವರೆಗೆ ಜಂಟಿ ಅಧಿವೇಶನಗಳು ನಡೆದುಕೊಂಡು ಬಂದಿವೆ. ಇದು ಸಂವಿಧಾನದ ಪ್ರಕಾರ ನಡೆದುಕೊಂಡು ಬರುತ್ತಿರುವ ಪದ್ಧತಿ. ಬಿಜೆಪಿ ಅಧಿಕಾರದಲ್ಲಿದ್ದಾಗ ರಾಜ್ಯಪಾಲರಾಗಿದ್ದ ಹಂಸರಾಜ್ ಭಾರದ್ವಜ್ ಅವರ ಬಾಯಲ್ಲೂ ಹೇಳಿಸಿದ್ದೀರಿ. ಎಚ್ ಡಿ ಕುಮಾರಸ್ವಾಮಿ ಅವರು ಸಿಎಂ “ನರೇಗ ಉದ್ಯೋಗ ಸಂಜೀವಿನಿ” ಎಂದು ಕರೆದಿದ್ದರು. ಈಗ ಬಿಜೆಪಿ ಜೊತೆ ಸೇರಿ ನರೇಗಾ ವಿರೋಧಿಸುತ್ತಿದ್ದಾರೆ” ಎಂದು ಕುಟುಕಿದರು.
“ರಾಜ್ಯಪಾಲರು ಅವರು ಪೂರ್ಣ ಭಾಷಣವನ್ನು ಓದದೇ, ಮೊದಲನೇ ಹಾಗೂ ಕಡೆಯ ಜೈಹಿಂದ್ ಜೈಕರ್ನಾಟಕ ಎಂದು ಓದಿದರು, ಭಾಷಣದಲ್ಲಿ ಬರೆದುಕೊಡಲಾಗಿದ್ದ ‘ಜೈಸಂವಿಧಾನ’ವನ್ನು ಹೇಳಲಿಲ್ಲ. ರಾಷ್ಟ್ರಗೀತೆ ಮುಗಿಯುವವರೆಗೂ ರಾಜ್ಯಪಾಲರು ತೆರಳಬಹುದಿತ್ತು. ಈ ಬಗ್ಗೆ ಸಂವಿಧಾನದ ಕಲಂ 176 , 163 ಬಗ್ಗೆ ಈಗಾಗಲೇ ಚರ್ಚೆ ಮಾಡಲಾಗಿದೆ. ಶಾಸಕ ಸುನಿಲ್ ಕುಮಾರ್ ಅವರು ‘ಸರ್ಕಾರ ಆಡಳಿತ ಹದಗೆಟ್ಟಿದೆ ಮತ್ತು ಸಂವಿಧಾನರಹಿತ ಸರ್ಕಾರ’, ‘ಅಸಹಾಯಕ ಮುಖ್ಯಮಂತ್ರಿ’ ಎಂದಿದ್ದಾರೆ. ಕೆಲವೊಮ್ಮ ಅಸತ್ಯದ ಎದುರು ಸತ್ಯ ಅಸಹಾಯಕವಾಗುತ್ತದೆ” ಎಂದು ಹೇಳಿದರು.
“ಜನರು ನಮ್ಮನ್ನು ಅವರ ಪ್ರತಿನಿಧಿಯಾಗಿ ಆಯ್ಕೆ ಮಾಡುತ್ತಾರೆ. ವಿರೋಧಪಕ್ಷದವರ ಮತ್ತು ಸರ್ಕಾರದವರ ಸಿದ್ಧಾಂತಗಳು ವಿಭಿನ್ನವಾಗಿರುತ್ತವೆ. ನಾವಿಬ್ಬರೂ ಪರಸ್ಪರ ಒಪ್ಪಲೇಬೇಕೆಂಬ ಷರತ್ತಿಲ್ಲ. ಆದರೆ ನಾವೆಲ್ಲರೂ ಸಂವಿಧಾನ ಒಪ್ಪಲೇಬೇಕು. ಸಂವಿಧಾನಬದ್ಧವಾಗಿ ಸರ್ಕಾರ, ಆಡಳಿತ ನಡೆಯಲೇಬೇಕು. ಸಂವಿಧಾನವನ್ನು ಯಾವುದೇ ಕಾರಣಕ್ಕೂ ವಿರೋಧಿಸಬಾರದು. ರಾಜ್ಯಪಾಲರು ಮೂಲತ: ಉತ್ತಮ ವ್ಯಕ್ತಿಯೇ. ನಾವು ರಾಜ್ಯಪಾಲರ ವಿರುದ್ಧವಿಲ್ಲ. ಆದರೆ ಕೇಂದ್ರ ಸರ್ಕಾರದ ನಮ್ಮ ವಿರೋಧವಿದೆ” ಎಂದರು.
“ಭಾಷಣದಲ್ಲಿ ಮನರೇಗಾ ರದ್ದುಪಡಿಸಿ ವಿಬಿಜಿರಾಮ್ ಜಿ (ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಜಿವಿಕ ಮಿಷನ್ ಗ್ರಾಮೀಣ)ವನ್ನು ಕೇಂದ್ರ ಜಾರಿಗೊಳಿಸಿದೆ. ಅದರಲ್ಲಿ ‘ಗ್ರಾಮ’ ಎನ್ನುವ ಪದವೂ ಇಲ್ಲ. ಈ ಕಾಯ್ದೆ ಜಾರಿಗೆ ಮುನ್ನ 176 ಕಲಂರನ್ನು ಕೇಂದ್ರ ವಿಶ್ಲೇಷಣೆ ಮಾಡಬೇಕಿತ್ತು. ಸಂವಿಧಾನ 1950ರಲ್ಲಿ ಜಾರಿಯಾಗಿ, ಇಂದಿನವರೆಗೂ ಹೊಸವರ್ಷದಲ್ಲಿ , ಹೊಸ ಸರ್ಕಾರ ಬಂದಾಗ, ಜಂಟಿ ಅಧಿವೇಶನ ನಡೆಯುತ್ತಲೇ ಬಂದಿದೆ” ಎಂದು ತಿಳಿಸಿದರು.
ಸಿದ್ದರಾಮಯ್ಯ ಭಾಷಣದ ಪೂರ್ಣ ವಿವರ ಇಲ್ಲಿದೆ
- 2022 ರಿಂದ ಪ್ರತಿ ವರ್ಷ ರಾಜ್ಯಕ್ಕೆ 18 ರಿಂದ 20 ಸಾವಿರ ಕೋಟಿ ರೂಗಳಷ್ಟು ಜಿಎಸ್ ಟಿ ಪರಿಹಾರ ನಷ್ಟವಾಗಿದೆ. 4 ವರ್ಷಗಳಲ್ಲಿ 75 ರಿಂದ 80000 ಕೋಟಿ ಇದೊಂದೇ ಬಾಬತ್ತಿನಲ್ಲಿ ನಷ್ಟವಾಗಿದೆ. 2020 ರಿಂದ 2025 ರವರೆಗೆ 200000 ಕೋಟಿ ರೂಗಳಷ್ಟು ರಾಜ್ಯಕ್ಕೆ ನಷ್ಟವಾಗಿದೆ. ಜಿಎಸ್ ಟಿ ಪರಿಹಾರದ ಸೆಸ್ಸನ್ನು ಕೇಂದ್ರದವರು ಜನರಿಂದ ಸಂಗ್ರಹಿಸುವುದನ್ನು ನಿಲ್ಲಿಸಿದ್ದರೆ ಒಪ್ಪುತ್ತಿದ್ದೆ. ಬೆಲ್ಲದ್ ಅವರೆ 2025-26 ರಲ್ಲಿ 167000 ಕೋಟಿ ರೂಗಳಷ್ಟು ಸೆಸ್ಸನ್ನು ಸಂಗ್ರಹಿಸಿದ್ದಾರೆ [ ಈ ವರ್ಷ ಎಲ್ಲಾ ಸೆಸ್, ಸರ್ ಛಾರ್ಜ್ ಮುಂತಾದವು ಸೇರಿ 6 ಲಕ್ಷ ಕೋಟಿ ಸಂಗ್ರಹಿಸುತ್ತಿದ್ದಾರೆ].
- 16ನೇ ಹಣಕಾಸು ಆಯೋಗದ ಶಿಫಾರಸ್ಸುಗಳನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಆದರೆ ಆಯೋಗದ ಶಿಫಾರಸ್ಸುಗಳಿಂದಲೂ ನಮಗೆ ಸಿಗಬೇಕಾದ ನ್ಯಾಯ ಸಿಕ್ಕಿಲ್ಲ. 14 ನೇ ಹಣಕಾಸು ಆಯೋಗವು ನಮಗೆ ಶೇ.4.71 ರಷ್ಟು ತೆರಿಗೆ ಹಂಚಿಕೆ ಮಾಡಿತ್ತು. ಅದಕ್ಕಿಂತ ಹೆಚ್ಚಿನ ಅನುದಾನ ಸಿಕ್ಕರೆ ಮಾತ್ರ ನಮಗೆ ನ್ಯಾಯ ದೊರೆಯುತ್ತದೆಂದು ಹೇಳಿದ್ದೆವು. ಆದರೆ 16 ನೇ ಹಣಕಾಸು ಆಯೋಗವು ಶೇ.4.131 ರಷ್ಟನ್ನು ಮಾತ್ರ ಶಿಫಾರಸ್ಸು ಮಾಡಿದೆ. ತೆರಿಗೆ ಪಾಲನ್ನು ಶೇ. 50 ಕ್ಕೆ ಏರಿಸಿ ಎಂದು ಕೇಳಿದ್ದೆವು. ಆದರೆ ಶೇ. 41 ರಷ್ಟೆ ಕೊಟ್ಟಿದೆ. ಇದರಿಂದಲೂ ನಮಗೆ 14 ನೇ ಹಣಕಾಸು ಆಯೋಗದ ಶಿಫಾರಸ್ಸಿಗೆ ಹೋಲಿಸಿದರೆ ಶೇ.14.1 ರಷ್ಟು ಕಡಿಮೆಯಾಗುತ್ತದೆ. ಕರ್ನಾಟಕದ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ 5 ವರ್ಷಗಳಲ್ಲಿ 37,372 ಕೋಟಿ ರೂ ಸಿಕ್ಕರೆ ಉತ್ತರ ಪ್ರದೇಶಕ್ಕೆ 1.17 ಲಕ್ಷ ಕೋಟಿ, ಮಹಾರಾಷ್ಟ್ರಕ್ಕೆ 79.6 ಸಾವಿರ ಕೋಟಿ, ಮಧ್ಯಪ್ರದೇಶಕ್ಕೆ 48 ಸಾವಿರ ಕೋಟಿ ದೊರೆಯಲಿದೆ. ಹಾಗೆಯೇ ಪ್ರಕೃತಿ ವಿಕೋಪ ನಿಧಿಯಲ್ಲೂ ರಾಜ್ಯಕ್ಕೆ ಭಾರೀ ಅನ್ಯಾಯ ಮಾಡಲಾಗಿದೆ. ನಮಗೆ 5135 ಕೋಟಿ ರೂ, ಮಹಾರಾಷ್ಟ್ರಕ್ಕೆ 31,597 ಕೋಟಿ, ಗುಜರಾತಿಗೆ 6766 ಕೋಟಿ ಸಿಗಲಿದೆ.
- ನಾವು ಬೆಂಗಳೂರಿನ ಅಭಿವೃದ್ಧಿಗೆ, ಕಲ್ಯಾಣ ಕರ್ನಾಟಕ, ಮಲೆನಾಡು, ಕರಾವಳಿ, ಉತ್ತರ ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು, ಅನುದಾನಗಳನ್ನು ಕೇಳಿದ್ದೆವು. ನಯಾಪೈಸೆ ಕೊಡಲಿಲ್ಲ. ಯತ್ನಾಳ್ ಮತ್ತು ಬಿಜೆಪಿ ಸದಸ್ಯರು ಮನಮೋಹನ್ ಸಿಂಗ್ ಅವರ ಅವಧಿ ಮತ್ತು ಮೋದಿಯವರ ಅವಧಿಯಲ್ಲಿ ಎಷ್ಟು ಅನುದಾನ ಬಂದವು ಎಂದು ಮಾತನಾಡಿದ್ದಾರೆ. ಕಳೆದ 3-4 ವರ್ಷಗಳಿಂದ ಈ ಮಾತನ್ನು ಹೇಳುತ್ತಲೇ ಇದ್ದಾರೆ.
- ಹಿಂದೆ ಕುಮಾರಸ್ವಾಮಿಯವರು ಸಿಎಂ ಆಗಿದ್ದಾಗ ‘ಗ್ರಾಮೀಣಾಭಿವೃದ್ಧಿಗೆ ಮನರೆಗಾ ಸಂಜೀವಿನಿ ’ ಎಂದಿದ್ದರು. ಆದರೆ ಅಂದು ಬೆಂಬಲಿಸಿದವರು ಇಂದು ಬಿಜೆಪಿಯವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಈಗ ವಿರೋಧಿಸುತ್ತಿದ್ದಾರೆ.
- ಜನವರಿ 22 ರಂದು ರಾಜ್ಯಪಾಲರ ಭಾಷಣ ಮಾಡಿದರು. ನಂತರ ಜನವರಿ 23 ರಂದು ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ರಾಜ್ಯಪಾಲರ ಭಾಷಣದ ಓದದೇ ಇರಲು ಸಂವಿಧಾನದಲ್ಲಿ ಆಯ್ಕೆಯಿಲ್ಲ. ರಾಜ್ಯಪಾಲರ ನಡವಳಿಕೆ ಅವರ ಘನತೆಗೆ ತಕ್ಕುದಾದುದಲ್ಲ. ಅಧಿವೇಶನ ಐತಿಹಾಸಿಕ ಕಳಂಕಕ್ಕೆ ಸಾಕ್ಷಿಯಾಯಿತು, ರಾಜ್ಯಪಾಲರು ರಾಜಕೀಯ ಏಜೆಂಟ್ ರಂತೆ ವರ್ತಿಸುತ್ತಿರುವುದೇ ಇದಕ್ಕೆ ಕಾರಣ, ಎಂಬಿತ್ಯಾದಿ ಸಂಪಾದಕೀಯಗಳು ಪ್ರಕಟವಾಗಿದ್ದವು.
- ಕೇಂದ್ರ ವಿತ್ತ ಸಚಿವರು ಕೃಷ್ಣಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡುವುದಾಗಿ ಘೋಷಿಸಿ , ನಂತರದ ರಾಜ್ಯ ಸರ್ಕಾರವೂ ಇದನ್ನು ರಾಷ್ಟ್ರೀಯ ಯೋಜನೆ ಘೋಷಿಸಲಾಗುವುದು ಎಂದೂ ತಿಳಿಸಿದ್ದರು. ಆದರೆ ಅನುದಾನವಾಗಲಿ, ರಾಷ್ಟ್ರೀಯ ಯೋಜನೆ ಎಂದಾಗಲಿ ಘೋಷಣೆಯಾಗಿಲ್ಲ. ಇದು ಸತ್ಯವಲ್ಲವೇ?
- 15 ನೇ ಹಣಕಾಸು ಆಯೋಗದಲ್ಲಿ ಶಿಫಾರಸ್ಸು ಮಾಡಲಾಗಿದ್ದ 11495 ಕೋಟಿ ರೂ.ಗಳು ರಾಜ್ಯಕ್ಕೆ ನೀಡಲಿಲ್ಲ. 14 ನೇ ಆಯೋಗದಲ್ಲಿ 4.71 % ರಾಜ್ಯಕ್ಕೆ ಕೊಡಲಾಗಿತ್ತು. 15 ನೇ ಆಯೋಗದಲ್ಲಿ 3.64% ಕ್ಕೆ ಇಳಿಸಿದರು. ಇದರಿಂದ ಐದು ವರ್ಷಗಳಲ್ಲಿ ರಾಜ್ಯಕ್ಕೆ 1,25,000 ಕೋಟಿ ಕಡಿಮೆಯಾಯಿತು.
- ಈ ಅನುದಾನದ ಕಡಿತದ ಬಗ್ಗೆ ಪ್ರಶ್ನಿಸುವುದು ರಾಜ್ಯದ ಎಲ್ಲ ಜನಪ್ರತಿನಿಧಿಗಳ ಜವಾಬ್ದಾರಿ. ರಾಜ್ಯದಿಂದ 4.50 ಲಕ್ಷ ಕೋಟಿ ತೆರಿಗೆ ಕೊಟ್ಟರೆ, ನಮಗೆ ಕೇವಲ 55 ರಿಂದ 60 ಸಾವಿರ ಕೋಟಿ ರಾಜ್ಯಕ್ಕೆ ಬರುತ್ತದೆ.
- ಎಂಟು ವರ್ಷದಿಂದ ಹೆಚ್ಚು ಜಿಎಸ್ ಟಿ ತೆರಿಗೆ ಪಡೆದು, ಈಗ ಕೇಂದ್ರ ಸರ್ಕಾರ ಹಠಾತ್ತಾಗಿ ಜಿಎಸ್ ಟಿ ಯನ್ನು ಕಡಿತಗೊಳಿಸಿತು. ರಾಜ್ಯಕ್ಕೆ ಜಿಎಸ್ ಟಿ ಯಿಂದ 12-15 ಸಾವಿರ ಕೋಟಿ ನಷ್ಟವಾಗುತ್ತದೆ. ಇದು ಏಳು ಕೋಟಿ ಕನ್ನಡಿಗರಿಗೆ ಆದ ನಷ್ಟ.
- ಕೇಂದ್ರಸರ್ಕಾರ ಸೆಸ್ ಮತ್ತು ಸರ್ಜಾಜ್ ನ್ನು ಸುಮಾರು 6 ಲಕ್ಷ ಕೋಟಿ ವಸೂಲಿ ಯಾಗುತ್ತಿದ್ದು, ಇದರಲ್ಲಿ ರಾಜ್ಯಗಳಿಗೆ ಒಂದು ಪೈಸೆಯೂ ಬರುವುದಿಲ್ಲ. ಈ ಬಗ್ಗೆ ಧ್ವನಿಎತ್ತಿ ರಾಜ್ಯಗಳಿಗೂ ಪಾಲು ನೀಡಿ ಎಂದು ನಮ್ಮ ಸರ್ಕಾರ ಒತ್ತಾಯಿಸಿದ್ದರೂ, ಇದು ಜಾರಿಯಾಗಿಲ್ಲ. ಈ ಎಲ್ಲ ಅಂಶಗಳು ವಾಸ್ತವಾಂಶವಾಗಿದೆ.
- ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನುದಾನ ಕಡಿತದ ಬಗ್ಗೆ ನಾನೆ ಹಲವು ಬಾರಿ ಸಂಬಂಧಿಸಿದವರಿಗೆ ಪತ್ರ ಬರೆದಿದ್ದೇನೆ. ಕೇಂದ್ರ ವಿತ್ತ ಸಚಿವರನ್ನು ಈ ಸಂಬಂಧ ಭೇಟಿ ಮಾಡಲಾಗಿದೆ. ಜಿಎಸ್ ಟಿ ಸಮಿತಿಸಭೆಯಲ್ಲಿ ರಾಜ್ಯಸರ್ಕಾರ ತನ್ನ ನಿಲುವನ್ನು ಮಂಡಿಸಿದರೂ, ಅದನ್ನು ಪರಿಗಣಿಸಲಾಗಿಲ್ಲ.


