Homeಕರ್ನಾಟಕಹಾಲಿನ ಬೆಲೆ ಹೆಚ್ಚಿಸಿಲ್ಲ, ಹೆಚ್ಚುವರಿ ಹಾಲಿಗೆ 2 ರೂ. ನಿಗದಿ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಹಾಲಿನ ಬೆಲೆ ಹೆಚ್ಚಿಸಿಲ್ಲ, ಹೆಚ್ಚುವರಿ ಹಾಲಿಗೆ 2 ರೂ. ನಿಗದಿ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ನಂದಿನಿ ಹಾಲಿನ ಪ್ಯಾಕೇಟ್‌ಗಳಲ್ಲಿ ಹಾಲಿನ ಪ್ರಮಾಣವನ್ನು 50 ಎಂ.ಎಲ್‌ ಹೆಚ್ಚಳ ಮಾಡಿ, ಆ ಹೆಚ್ಚುವರಿ ಹಾಲಿಗೆ 2. ರೂ ದರ ನಿಗದಿಪಡಿಸಿ ಗ್ರಾಹಕರಿಂದ ಸಂಗ್ರಹಿಸಲಾಗುತ್ತಿದೆಯೇ ವಿನಃ ಹಾಲಿನ ಬೆಲೆಯಲ್ಲಿ ಏರಿಕೆ ಮಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

“ಅರ್ಧಲೀಟರ್‌ ಹಾಲಿನ ಪ್ಯಾಕೇಟ್‌ನಲ್ಲಿ ಮುಂದೆ 550 ಎಂಎಲ್‌ ಹಾಲು ಹಾಗೂ ಲೀಟರ್‌ ಪ್ಯಾಕೇಟ್‌ ನಲ್ಲಿ 1,050 ಎಂಎಲ್‌ ಹಾಲು ಸಿಗಲಿದೆ” ಎಂದು ಮಾಧ್ಯಮ ಪ್ರಕಟಣೆಯಲ್ಲಿ ಸಿಎಂ ತಿಳಿಸಿದ್ದಾರೆ.

“ಹಾಲು ಸಂಗ್ರಹಣಾ ಕೇಂದ್ರಗಳಲ್ಲಿ ಯಾವುದೇ ಕಾರಣಕ್ಕೂ ರೈತರು ಹೆಚ್ಚುವರಿಯಾಗಿ ತರುತ್ತಿರುವ ಹಾಲನ್ನು ನಿರಾಕರಿಸಬಾರದು ಎಂಬ ಸದುದ್ದೇಶದಿಂದ ಕೆಎಂಎಫ್‌ ಸಂಸ್ಥೆ ಪ್ಯಾಕೇಟ್‌ ಗಳಲ್ಲಿ ಹಾಲಿನ ಪ್ರಮಾಣ ಹೆಚ್ಚಳ ಮಾಡುವ ತೀರ್ಮಾನ ಮಾಡಲಾಗಿದೆ” ಎಂದಿದ್ದಾರೆ.

“ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಈ ಬಾರಿ ಹಾಲಿನ ಉತ್ಪಾದನೆ ಶೇ.15 ಹೆಚ್ಚಳವಾಗಿದೆ. ಹಿಂದಿನ ವರ್ಷಗಳಲ್ಲಿ ಈ ವೇಳೆಗೆ ನಿತ್ಯ ಸರಾಸರಿ 90 ಲಕ್ಷ ಲೀಟರ್‌ ಉತ್ಪಾದನೆಯಾಗುತ್ತಿದ್ದ ಹಾಲಿನ ಪ್ರಮಾಣ ಈ ಬಾರಿ ಸರಾಸರಿ 99 ಲಕ್ಷ ಲೀಟರ್‌ ಗೆ ಏರಿಕೆಯಾಗಿದೆ. ಹೀಗೆ ಹೆಚ್ಚುವರಿಯಾಗಿ ಉತ್ಪಾದನೆಯಾಗುತ್ತಿದೆ. ಯಾವುದೇ ಕಾರಣಕ್ಕೂ ರೈತರಿಂದ ಹಾಲು ಪಡೆಯಲು ನಿರಾಕರಿಸಬಾರದು ಎಂಬ ಸದುದ್ದೇಶದಿಂದ ಒಂದು ಲೀಟರ್‌ ಹಾಲಿನ ಪ್ಯಾಕೇಟಿಗೆ ಹೆಚ್ಚುವರಿಯಾಗಿ 50 ಮಿ.ಲೀ ಹಾಲನ್ನು ಸೇರಿಸಿ, ಈ ಹೆಚ್ಚುವರಿ ಹಾಲಿನ ಬೆಲೆ 2 ರೂಪಾಯಿಯನ್ನು ಮಾತ್ರ ಗ್ರಾಹಕರಿಂದ ಸಂಗ್ರಹಿಸಲಾಗುತ್ತಿದೆ. ಹಾಲಿನ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗಿರುವುದಿಲ್ಲ” ಎಂದು ವಿವರಿಸಿದ್ದಾರೆ.

“ಈ ವರೆಗೆ 1,000 ಮಿ.ಲೀ ಹಾಲಿಗೆ ರೂ.42 ಹಾಗೂ 500 ಮಿ.ಲೀ ಹಾಲಿಗೆ ರೂ.22 ದರವನ್ನು ನಿಗದಿಪಡಿಸಲಾಗಿತ್ತು, ಇನ್ನು ಮುಂದೆ 1,050 ಮಿ.ಲೀ ಹಾಗೂ 550 ಮಿ.ಲೀ ಹಾಲಿನ ಪ್ಯಾಕೇಟ್‌ ಗಳನ್ನು ಮಾರಾಟ ಮಾಡಲಾಗುತ್ತಿದ್ದು, ಅದಕ್ಕೆ ಕ್ರಮವಾಗಿ ರೂ.44 ಹಾಗೂ ರೂ.24 ದರ ನಿಗದಿಪಡಿಸಲಾಗುತ್ತದೆ. ಇದು ನಾಡಿನ ಲಕ್ಷಾಂತರ ಹೈನುಗಾರರ ಹಿತದೃಷ್ಟಿಯಿಂದ ಕೆ.ಎಂ.ಎಫ್‌ ಸಂಸ್ಥೆಯು ತೆಗೆದುಕೊಂಡ ನಿರ್ಣಯವಾಗಿದ್ದು, ಹೆಚ್ಚುವರಿಯಾಗಿ ಉದ್ಪಾದನೆಯಾಗುತ್ತಿರುವ ಹಾಲನ್ನು ಗ್ರಾಹಕರಿಗೆ ನೇರವಾಗಿ ತಲುಪಿಸುವ ಸದುದ್ದೇಶ ಹೊಂದಿದೆ” ಎಂದು ಹೇಳಿದ್ದಾರೆ.

“ಈಗಾಗಲೇ ಗರಿಷ್ಟ ಪ್ರಮಾಣದ ಹಾಲನ್ನು ಹಾಲಿನ ಪೌಡರ್‌ ತಯಾರಿಕೆ ಮಾಡುವ ಉದ್ದೇಶಕ್ಕೆ ಬಳಕೆ ಮಾಡಲಾಗುತ್ತಿದೆ. ನಿತ್ಯ ಸುಮಾರು 30 ಲಕ್ಷ ಲೀಟರ್‌ ಹಾಲು ಪೌಡರ್‌ ತಯಾರಿಕೆಗಾಗಿ ಬಳಸಲ್ಪಡುತ್ತಿದ್ದು, 250 ಮೆಟ್ರಿಕ್‌ ಟನ್‌ ಹಾಲಿನ ಪೌಡರ್‌ ತಯಾರಿಸಲಾಗುತ್ತಿದೆ. ಇದು ಹಾಲಿನ ಪೌಡರ್‌ಗೆ ಇರುವ ಬೇಡಿಕೆಗೆ ಅನುಗುಣವಾಗಿದೆ” ಎಂದು ತಿಳಿಸಿದ್ದಾರೆ.

“ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ವೇಳೆ ರಾಜ್ಯದಲ್ಲಿ ನಿತ್ಯ ಸರಾಸರಿ 72 ಲಕ್ಷ ಲೀಟರ್‌ ಗಳಷ್ಟು ಹಾಲು ಸಂಗ್ರಹವಾಗುತ್ತಿತ್ತು. ಈ ಹಿಂದೆ ಹಾಲಿನ ಬೆಲೆಯಲ್ಲಿ ರೂ.3 ಹೆಚ್ಚಳ ಮಾಡಿ ಆ ಹೆಚ್ಚುವರಿ ಹಣವನ್ನು ರೈತರಿಗೆ ನೇರವಾಗಿ ವರ್ಗಾಯಿಸುವ ಪ್ರೋತ್ಸಾಹದಾಯಕ ಕ್ರಮ ಕೈಗೊಂಡಿದ್ದರಿಂದ ಹೈನೋದ್ಯಮವು ಹಿಂದಿಗಿಂತ ಲಾಭ ತಂದುಕೊಡುವ ಉದ್ಯೋಗವಾಯಿತು ಜೊತೆಗೆ ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಜಾನುವಾರುಗಳಿಗೆ ಹಸಿರು ಮೇವು ಲಭ್ಯವಾಗುತ್ತಿದೆ. ಈ ಎರಡು ಕಾರಣಗಳಿಂದಾಗಿ ರಾಜ್ಯದಲ್ಲಿ ಹಾಲಿನ ಉತ್ಪಾದನೆ ಇಂದು ನಿತ್ಯ ಸರಿಸುಮಾರು 1 ಕೋಟಿ ಲೀಟರ್‌ ತಲುಪುವ ಹಂತಕ್ಕೆ ಬಂದಿದೆ” ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments