ಕೊಪ್ಪಳ ಜಿಲ್ಲೆಯ ಮರಕುಂಬಿ ಗ್ರಾಮದ ದಲಿತರ ಮೇಲೆ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಕೊಪ್ಪಳ ಜಿಲ್ಲಾ ಕೋರ್ಟ್ ನೀಡಿದ್ದ ಜೀವಾವಧಿ ಶಿಕ್ಷೆಗೆ ಧಾರವಾಡ ಹೈಕೋರ್ಟ ಪೀಠ ತಡೆಯಾಜ್ಞೆ ನೀಡಿದೆ. ಅಲ್ಲದೇ 98 ಜನ ಅಪರಾಧಿಗಳಲ್ಲಿ 97 ಮಂದಿಗೆ ಜಾಮೀನು ನೀಡಿದೆ.
ಪ್ರಕರಣದ ಎ1 ಮಂಜುನಾಥ ಜಾಮೀನಿಗೆ ಅರ್ಜಿ ಹಾಕದ ಹಿನ್ನೆಲೆಯಲ್ಲಿ ಆತನಿಗೆ ಬೇಲ್ ಸಿಕ್ಕಿಲ್ಲ. ಪ್ರತಿಯೊಬ್ಬರಿಂದ 50 ಸಾವಿರ ರೂ. ಬೆಲೆಯ ಬಾಂಡ್ ಹಾಗೂ ಒಬ್ಬ ಶ್ಯೂರಿಟಿ ಪಡೆದು ನ್ಯಾಯಾಲಯ ಜಾಮೀನು ನೀಡಿದೆ. ಹಾಗೆಯೇ ಇದೇ ಪ್ರಕರಣದಲ್ಲಿ ಐದು ವರ್ಷ ಶಿಕ್ಷೆಗೆ ಗುರಿಯಾಗಿದ್ದ ಇಬ್ಬರು ಆರೋಪಿಗಳಿಗೂ ಸಹ ಜಾಮೀನು ಮಂಜೂರಾಗಿದೆ.
2014ರ ಆಗಸ್ಟ್ 28 ರಂದು ದಲಿತರು ಹಾಗೂ ಸವರ್ಣಿಯರ ನಡುವೆ ಗಲಾಟೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 28 ರಂದು ಕೊಪ್ಪಳ ಜಿಲ್ಲಾ ನ್ಯಾಯಾಲಯದಲ್ಲಿ ಜೀವಾವಧಿ ಶಿಕ್ಷೆ ಘೋಷಣೆ ಮಾಡಿತ್ತು.
ಜೀವಾವದಿ ಶಿಕ್ಷೆಯ ತೀರ್ಪು ಪ್ರಶ್ನಿಸಿ ಅಪರಾಧಿಗಳು ಧಾರವಾಡ ಹೈಕೋರ್ಟ ಮೊರೆ ಹೋಗಿದ್ದರು. ಇಂದು (ನ.13) ಹೈಕೋರ್ಟ್ ದ್ವಿಸದಸ್ಯ ಪೀಠ ಅರ್ಜಿ ವಿಚಾರಣೆ ನಡೆಸಿ ಜಾಮೀನು ನೀಡಿದೆ.
ಘಟನೆ ಹಿನ್ನೆಲೆ
2014ರ ಆಗಸ್ಟ್ 28 ರಂದು ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದ ಮಂಜುನಾಥ ಮತ್ತು ಸ್ನೇಹಿತರು ಎಂಬುವರು ಪವರ್ ಸಿನಿಮಾ ನೋಡಲು ಗಂಗಾವತಿ ನಗರದಲ್ಲಿರುವ ಶಿವ ಚಿತ್ರಮಂದಿರಕ್ಕೆ ಹೋಗಿದ್ದರು. ಈ ಸಮಯದಲ್ಲಿ ಟಿಕೆಟ್ ತೆಗೆದುಕೊಳ್ಳುವ ವಿಚಾರಕ್ಕೆ ಜಗಳ ಆರಂಭವಾಗಿತ್ತು. ಬಳಿಕ, ಮಂಜುನಾಥ್ ಮತ್ತು ಆತನ ಸ್ನೇಹಿತರು, ನಮ್ಮೂರಿನ ದಲಿತರು ನಮ್ಮ ಮೇಲೆ ಹಲ್ಲೆ ಮಾಡಿಸಿದ್ದಾರೆ ಅಂತ ಗ್ರಾಮದಲ್ಲಿ ಹೇಳಿದ್ದರು. ಇದು ಸವರ್ಣೀಯ ಕುಟುಂಬಗಳ ಆಕ್ರೋಶಕ್ಕೆ ಕಾರಣವಾಗಿತ್ತು.
ಹೀಗಾಗಿ ಅಂದು ಸಂಜೆ ಗ್ರಾಮದ ಸವರ್ಣೀಯರು, ದಲಿತರ ಕೇರಿ ಮೇಲೆ ದಾಳಿ ಮಾಡಿದ್ದರು. ದಲಿತರಿಗೆ ಸೇರಿದ್ದ ನಾಲ್ಕು ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದರು. ಅನೇಕರ ಮೇಲೆ ಸಿಕ್ಕಸಿಕ್ಕ ವಸ್ತುಗಳಿಂದ ಹಲ್ಲೆ ಮಾಡಿದ್ದರು. ಬೆಂಕಿ ಅವಘಡದಲ್ಲಿ ಗುಡಿಸಲುಗಳು ಸುಟ್ಟು ಭಸ್ಮವಾಗಿದ್ದವು. ಅದೃಷ್ಟವೆನ್ನುವಂತೆ ಗುಡಿಸಲುಗಳಲ್ಲಿ ಯಾರು ಇಲ್ಲದೇ ಇದ್ದಿದ್ದರಿಂದ ಅಂದು ಯಾವುದೇ ಪ್ರಾಣಾಪಾಯವಾಗಿರಲಿಲ್ಲ.