Homeಕರ್ನಾಟಕಡ್ರಗ್ಸ್ ಮಟ್ಟ ಹಾಕುವ ನಿಟ್ಟಿನಲ್ಲಿ ಗೃಹ ಇಲಾಖೆ ಯುದ್ಧವನ್ನೇ ಸಾರಿದೆ: ಸಚಿವ ಜಿ.ಪರಮೇಶ್ವರ್‌

ಡ್ರಗ್ಸ್ ಮಟ್ಟ ಹಾಕುವ ನಿಟ್ಟಿನಲ್ಲಿ ಗೃಹ ಇಲಾಖೆ ಯುದ್ಧವನ್ನೇ ಸಾರಿದೆ: ಸಚಿವ ಜಿ.ಪರಮೇಶ್ವರ್‌

₹40 ಕೋಟಿ ಮೌಲ್ಯದ ಡ್ರಗ್ಸ್ ನಾಶಪಡಿಸಲಾಗಿದ್ದು, 10 ಟನ್ ಗಾಂಜಾ ಸುಟ್ಟು ಹಾಕಲಾಗಿದೆ. ಇಷ್ಟೊಂದು ಪ್ರಮಾಣದ ಡ್ರಗ್ಸ್ ಯುವಕರ ಕೈಸೇರಿದ್ದರೆ ಎಷ್ಟು ಕುಟುಂಬಗಳು ಹಾಳಾಗುತ್ತಿದ್ದವೋ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ಆತಂಕ ವ್ಯಕ್ತಪಡಿಸಿದರು‌.

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯ ಪೊಲೀಸ್ ಇಲಾಖೆಯು ವಿವಿಧ ಶಿಕ್ಷಣ ಸಂಸ್ಥೆಗಳೊಂದಿಗೆ ಜಂಟಿಯಾಗಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತು ವ್ಯಸನ ಮತ್ತು ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನದ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

“ರಾಜ್ಯ ಸರ್ಕಾರವು ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣದ ಘೋಷಣೆ ಮಾಡಿದೆ. ಸಂಪೂರ್ಣವಾಗಿ ಡ್ರಗ್ಸ್ ಮಟ್ಟ ಹಾಕುವ ನಿಟ್ಟಿನಲ್ಲಿ ಇಲಾಖೆಯು ಯುದ್ಧವನ್ನೆ ಸಾರಿದೆ” ಎಂದರು.

“ವಿಶ್ವದೆಲ್ಲೆಡೆ ಮಾದಕ ದ್ರವ್ಯ ಆಧುನಿಕ ಪಿಡುಗು ಆಗಿದ್ದು, ಯುವ ಸಮುದಾಯವನ್ನೇ ಹಾಳು ಮಾಡುತ್ತಿದೆ. ಮಾದಕ ವಸ್ತುಗಳ ವ್ಯಸನದ ಸಮಸ್ಯೆಯನ್ನು ಅರ್ಥೈಸಿಕೊಂಡ ವಿಶ್ವಸಂಸ್ಥೆಯು 1987ರಲ್ಲಿ ಮಾದಕ ವಸ್ತು ವಿರೋಧಿ ದಿನವನ್ನು ಜೂನ್ 26ರಂದು ಆಚರಿಸಲು ನಿರ್ಣಯಿಸಿತು. ಸಮಾಜಕ್ಕೆ ದೊಡ್ಡ ರೋಗವಾಗಿ ಅಂಟಿಕೊಳ್ಳುತ್ತಿದ್ದು, ಯುವ ಪೀಳಿಗೆ ಸಂಕಷ್ಟಕ್ಕೆ ಸಿಲುಕದಂತೆ ಜಾಗೃತಿ ಮೂಡಿಸಬೇಕಿದೆ” ಎಂದು ಹೇಳಿದರು.

“ಭಾರತವು ಮಾದಕ ವಸ್ತುಗಳ ಸಮಸ್ಯೆಯಲ್ಲಿ ಸಿಲುಕುತ್ತಿದೆ. 5 ಕೋಟಿ ಜನ ಮಾದಕ ವ್ಯಸನಕ್ಕೆ ಅಂಟಿಕೊಂಡಿದ್ದಾರೆ. ಯುವಕರು ಹಾಳಾದರೆ, ದೇಶ ಸಂಕಷ್ಟಕ್ಕೆ ಸಿಲುಕಿದಂತಾಗುತ್ತದೆ. ಭಾರತ ಅತಿ ಹೆಚ್ಚು ಯುವಕರನ್ನು ಹೊಂದಿರುವ ದೇಶ. ಬಹಳ ಎಚ್ಚರಿಕೆಯಿಂದ ದೇಶದ ಮುಂದಿನ ಭವಿಷ್ಯವನ್ನು ನೋಡಿಕೊಳ್ಳಬೇಕಿದೆ” ಎಂದರು.

“ಕೊಲೆ ಪ್ರಕರಣಗಳನ್ನು ಪತ್ತೆ ಹಚ್ಚುವಾಗ 17 ರಿಂದ 20 ವರ್ಷದೊಳಗಿನವರೆ ಭಾಗಿಯಾಗುತ್ತಿರುವುದು ಬೆಳಕಿಗೆ ಬರುತ್ತಿದೆ. ತಪ್ಪಿತಸ್ಥರನ್ನು ತಪಾಸಣೆಗೆ ಒಳಪಡಿಸಿದಾಗ ಮಾದಕ ವ್ಯಸನಿಯಾಗಿದ್ದರು ಎಂಬುದು ಗೊತ್ತಾಗುತ್ತಿದೆ. ಮಾದಕ ವ್ಯಸನದಿಂದ ಸಮಾಜಕ್ಕೆ ಅಪಾಯವಿದ್ದು, ಪಾಲಕರು ತಮ್ಮ ಮಕ್ಕಳ ಚಟುವಟಿಕೆಗಳ ಮೇಲೆ ನಿಗಾವಹಿಸಬೇಕು. ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ಹೆಚ್ಚು ಜಾಗೃತಿ ಮೂಡಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ” ಎಂದು ತಿಳಿಸಿದರು.

“ಪ್ರತಿಯೊಬ್ಬರು ಡ್ರಗ್ಸ್‌ನಿಂದ ದೂರ ಇರುತ್ತೇವೆ ಎಂದು ಪ್ರತಿಯೊಬ್ಬರು ಸಂಕಲ್ಪ ಮಾಡಿಕೊಳ್ಳಬೇಕು. ಐಟಿ‌ ಕಂಪನಿಗಳು ಕೈಗಾರಿಕೆಗಳು ಡ್ರಗ್ಸ್ ನಿಯಂತ್ರಣಕ್ಕೆ ಸಹಕರಿಸಬೇಕು” ಎಂದು ಮನವಿ ಮಾಡಿದರು.

ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಡಾ. ಕೆ.ಗೋವಿಂದರಾಜ್, ಶಾಸಕ ರಿಜ್ವಾನ್ ಅರ್ಷದ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಸಿಐಡಿ ವಿಭಾಗದ ಡಿಜಿಪಿ ಡಾ. ಎಂ.ಎ.ಸಲೀಂ, ಎಡಿಜಿಪಿ ಪ್ರಣಬ್ ಮೋಹಾಂತಿ, ಆದರ್ಶ ಡೆವಲೆಪರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಜಯಶಂಕರ್ ಅವರು ಕಾರ್ಯಕ್ರಮದಲ್ಲಿ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments