ಇತ್ತೀಚೆಗೆ ಶರಣಾಗತರಾಗಿದ್ದ ಆರು ಮಂದಿ ನಕ್ಸಲರದ್ದು ಎನ್ನಲಾದ ಗನ್‌ಗಳು ಜಿಲ್ಲೆಯ ಕಾಡಿನಲ್ಲಿ ಪತ್ತೆಯಾಗಿವೆ. ಕಿತ್ತಲೇಗಂಡಿ ಕಾಡಿನಲ್ಲಿ ಈ ಶಸ್ತಾಸ್ತ್ರಗಳು ಪೊಲೀಸರಿಗೆ ಸಿಕ್ಕಿವೆ.
ಕೊಪ್ಪ ತಾಲೂಕಿನ ಜಯಪುರ ಠಾಣಾ ವ್ಯಾಪ್ತಿಯಲ್ಲಿ ಬರುವ ಜಯಪುರ ಸಮೀಪದ ಕಿತ್ತಲೇಗಂಡಿ ಕಾಡಿನಲ್ಲಿ 5 ಗನ್‌ಗಳು ಪತ್ತೆಯಾಗಿವೆ. ಇದರಲ್ಲಿ ಎಕೆ 47 ಹಾಗೂ 303 ಗನ್‌ಗಳು ಸೇರಿವೆ. ಈ ಗನ್‌ಗಳು ಯಾರದ್ದು ಎಂದು ತಿಳಿದು ಬಂದಿಲ್ಲ. ಆದರೆ ಇತ್ತೀಚೆಗೆ ಸರಕಾರಕ್ಕೆ ಶರಣಾಗಿರುವ ಆರು ಮಂದಿ ನಕ್ಸಲರದ್ದು ಇರಬಹುದು ಎಂದುಕೊಳ್ಳಲಾಗಿದೆ.
ಈ ಗನ್‌ಗಳು ನಿಜಕ್ಕೂ ಯಾರಿಗೆ ಸೇರಿದ್ದು ಎಂದು ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ. ಸದ್ಯಕ್ಕೆ ಪೊಲೀಸರು ಗನ್‌ಗಳು ಹಾಗೂ ಸಜೀವ ಗುಂಡು ಮೊದಲಾದ ಶಸ್ತ್ರಾಸ್ತ್ರಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಶುಕ್ರವಾರ ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, “ನಕ್ಸಲರ ಶಸ್ತ್ರಾಸ್ತ್ರಗಳು ಎಲ್ಲಿವೆ ಎಂಬುದು ಗೊತ್ತಿದೆ. ಮಹಜರು ಮಾಡಿ ಅವುಗಳನ್ನು ಪೊಲೀಸರು ತೆಗೆದುಕೊಂಡು ಬರುತ್ತಾರೆ,” ಎಂದು ಹೇಳಿದ್ದರು.
ಶರಣಾದ ನಕ್ಸಲರ ಶಸ್ತ್ರಾಸ್ತ್ರಗಳು ನಾಪತ್ತೆಯಾಗಿವೆ ಎಂಬ ವಿಚಾರಕ್ಕೆ ಮೈಸೂರಿನ ವಿಮಾನ ನಿಲ್ದಾಣದಲ್ಲಿ ಅವರು ಪ್ರತಿಕ್ರಿಯಿಸಿ, “ಅನ್ಯಾಯ, ಶೋಷಣೆಗಳ ವಿರುದ್ಧ ಪ್ರತಿಭಟನೆ ಮಾಡಲು ಎಲ್ಲರಿಗೂ ಹಕ್ಕಿದೆ. ಶೃಂಗೇರಿಯಲ್ಲಿ ಮತ್ತೊಬ್ಬ ನಕ್ಸಲ್ ಇದ್ದಾನೋ, ಇಲ್ಲವೋ ಗೊತ್ತಿಲ್ಲ. ಅವನಿಗೂ ಮುಖ್ಯವಾಹಿನಿಗೆ ಬರುವಂತೆ ಮನವಿ ಮಾಡುತ್ತೇನೆ,” ಎಂದು ತಿಳಿಸಿದ್ದರು.
“ಕಾಡಿನಲ್ಲಿ ಬಿಟ್ಟು ಬಂದಿರುವ ಶಸ್ತ್ರಾಸ್ತ್ರಗಳನ್ನು ಪತ್ತೆ ಹಚ್ಚಿ ವಶಪಡಿಸಿಕೊಳ್ಳಲಾಗುವುದು,” ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ತಿಳಿಸಿದ್ದರು. ‘ಶಸ್ತ್ರಾಸ್ತ್ರ ಹುಡುಕುವಲ್ಲಿ ಸರಕಾರ ಆಸಕ್ತಿ ತೋರುತ್ತಿಲ್ಲ’ ಎಂಬ ಬಿಜೆಪಿ ಆಪಾದನೆಗೆ ಪ್ರತಿಕ್ರಿಯಿಸಿದ್ದ ಅವರು, “ಶರಣಾದ ನಕ್ಸಲರು ಶಸ್ತ್ರಾಸ್ತ್ರಗಳನ್ನು ಕಾಡಿನಲ್ಲಿ ಎಲ್ಲಿ ಇಟ್ಟಿದ್ದಾರೆ ಎಂಬ ಬಗ್ಗೆ ಅವರ ನೆರವು ಪಡೆದು ಪೊಲೀಸರು ಹುಡುಕುತ್ತಾರೆ” ಎಂದಿದ್ದರು.