ದುಷ್ಟ ಶಕ್ತಿಗಳು ಯಾರು ಎಂಬುದನ್ನು ಸರ್ಕಾರ ತೀರ್ಮಾನ ಮಾಡಲ್ಲ, ಜನರು ತೀರ್ಮಾನ ಮಾಡುತ್ತಾರೆ. ಯಾರು ಸರ್ಕಾರದ ಹಣ, ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ ಎಂಬುದು ಜನರಿಗೆ ಗೊತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು.
‘ದುಷ್ಟ ಶಕ್ತಿಗಳ ಎದುರು ಸತ್ಯದ ಜಯ’ ಎಂಬ ಸರ್ಕಾರದ ಪತ್ರಿಕಾ ಜಾಹೀರಾತು ವಿಚಾರವಾಗಿ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಅವರು, “ಯಾರು ಭಷ್ಟಾಚಾರವನ್ನೇ ಉದ್ಯಮ ಮಾಡಿಕೊಂಡಿದ್ದಾರೆ? ವರ್ಗಾವಣೆಗೂ ದುಡ್ಡು, ಕೆಲಸ ಕೊಡಿಸಲಿಕ್ಕೂ ದುಡ್ಡು. ಎಲ್ಲದರಲ್ಲೂ ದುಡ್ಡು ತೆಗೆದುಕೊಳ್ಳುತ್ತಾರೆ. ಅಂತವರು ಯಾವ ದೃಷ್ಟರ ಬಗ್ಗೆ ಮಾತನಾಡುತ್ತಾರೆ” ಎಂದು ಕಿಡಿಕಾರಿದರು.
“ಇಂತಹ ಜಾಹೀರಾತಿಗೆ ಸರ್ಕಾರದ ಹಣ ಬಳಕೆ ಮಾಡಿಕೊಂಡು ಅವರ ಮುಖಕ್ಕೆ ಅವರೇ ಮಸಿ ಬಳಿದುಕೊಳ್ಳುವ ಕೆಲಸ ಮಾಡಿದ್ದಾರೆ. ಅವರೇನು ಬೇಕಿದ್ದರೂ ಜಾಹೀರಾತು ನೀಡಬಹುದು. ಏನು ಬೇಕಾದರೂ ಭಾಷಣ ಮಾಡಬಹುದು. ಸರ್ಕಾರ ಅವರ ಕೈಯಲ್ಲಿದೆ. ಯಾರು ದುಷ್ಟರು, ಯಾರೂ ಶಿಷ್ಟರು ಎಂಬುದನ್ನು ಜನರು ಗಮನಿಸುತ್ತಿದ್ದಾರೆ” ಎಂದರು.
“ಮೈಸೂರಿನ ಮುಡಾ ಹಗರಣದಲ್ಲಿ ಸ್ವತಃ ಸಿಎಂ ಧರ್ಮಪತ್ನಿ ಸೈಟ್ ವಾಪಸ್ ಮಾಡಿದರು. ಯಾಕೆ ವಾಪಸ್ ಮಾಡಿದರು? ತಪ್ಪು ಮಾಡಿದ್ದಾರೆ ಅದಕ್ಕೆ ವಾಪಾಸ್ ನೀಡಿದ್ದಾರೆ. ವಾಲ್ಮೀಕಿ ನಿಗಮದಲ್ಲಿ ಹಗರಣ ಆಗಿರೋದರ ಬಗ್ಗೆ ಇ.ಡಿ ವರದಿ ನೀಡಿದೆ. ಪರಿಶಿಷ್ಟ ಪಂಗಡದ ಹಣವನ್ನು ಆಂಧ್ರ ಪ್ರದೇಶ, ಬಳ್ಳಾರಿ ಚುನಾವಣೆಗೆ ನೀಡಿರುವುದರ ಬಗ್ಗೆ ವರದಿಯಲ್ಲಿ ಉಲ್ಲೇಖವಿದೆ” ಎಂದು ಹೇಳಿದರು.
ಜಾತಿ ಗಣತಿ ಬಗ್ಗೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ನೀಡಿ, “ಜಾತಿ ಗಣತಿ ಒಡೆದು ಆಳುವ ನೀತಿ. ಹಿಂದೆ ಬ್ರಿಟಿಷರು ಮಾಡಿದ ಕೆಲಸವನ್ನು ಇವರು ಮಾಡುತ್ತಿದ್ದಾರೆ. ರಾಜ್ಯದ ಬಹು ಸಂಖ್ಯಾತರು ಜಾತಿಗಣತಿ ವರದಿಯನ್ನು ವಿರೋಧ ಮಾಡಿದ್ದಾರೆ. ಬಹುಸಂಖ್ಯಾತರಿಗೆ ಅಪಮಾನ ಮಾಡಲು, ಜಾತಿ ಜಾತಿ ನಡುವೆ ಬೆಂಕಿ ಹಚ್ಚಲು, ಬಹು ಸಂಖ್ಯಾತರನ್ನು ಒಡೆದು ಹಾಕಲು ಯೋಚನೆ ಮಾಡುತ್ತಿದ್ದಾರೆ. ಇದನ್ನು ನಾವು ಒಪ್ಪಲು ಸಾಧ್ಯವಿಲ್ಲ. ಇದು ಜಾರಿಯಾದರೆ ಸಿದ್ದರಾಮಯ್ಯರಿಗೆ ತಿರುಗುಬಾಣವಾಗುತ್ತದೆ” ಎಂದು ಎಚ್ಚರಿಸಿದರು.
ದಸರಾ ಗಜಪಡೆಯ ಮಾವುತರ ಕುಟುಂಬಕ್ಕೆ ಉಪಹಾರ ಕೂಟದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭಾಗಿಯಾದರು. ಪ್ರತಿ ವರ್ಷ ಗಜಪಡೆಯ ಕಾವಾಡಿಗಳು, ಮಾವುತರ ಕುಟುಂಬಸ್ಥರಿಗೆ ಸಚಿವೆ ಶೋಭಾಕರಂದ್ಲಾಜೆ ಉಪಹಾರ ಕೂಟ ಏರ್ಪಡಿಸುತ್ತಾ ಬಂದಿದ್ದಾರೆ.