ಚಲಿಸುತ್ತಿದ್ದ ಆ್ಯಂಬುಲೆನ್ಸ್ನಲ್ಲಿಯೇ ದುರುಳರು 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಮಧ್ಯಪ್ರದೇಶದ ಮೌಗಂಜ್ ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ನವೆಂಬರ್ 22ರಂದು ತುರ್ತು ಸೇವಾ ಆಂಬ್ಯುಲೆನ್ಸ್ 108ರಲ್ಲಿ ದುಷ್ಕೃತ್ಯ ಎಸಗಿದ ನಾಲ್ವರು ದುರುಳರ ಪೈಕಿ ಚಾಲಕ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ರೇವಾ ವ್ಯಾಪ್ತಿಯ ಪ್ರಧಾನ ಉಪ ಇನ್ಸ್‌ಪೆಕ್ಟರ್ ಸಾಕೇತ್ ಪಾಂಡೆ ಮಾಹಿತಿ ನೀಡಿದ್ದಾರೆ.
25ರಿಂದ 30 ವರ್ಷದ ಐವರ ಮೇಲೂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆರೋಪಿಗಳ ಮೇಲೆ ಪೋಕ್ಸೋ ಮತ್ತು ಭಾರತೀಯ ನ್ಯಾಯಸಂಹಿತೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನವೆಂಬರ್ 22ರಂದು ಶಾನಸಾನ್ ಎಂಬ ಹಳ್ಳಿಯ ಬಳಿ ಬಾಲಕಿ ಮತ್ತು ಆತನ ಸಂಬಂಧಿ ಬಾಲಕನನ್ನು 108 ಆ್ಯಂಬುಲೆನ್ಸ್‌ನಲ್ಲಿ ಆರೋಪಿಗಳ ಹತ್ತಿಸಿಕೊಂಡಿದ್ದರು. ಈ ವೇಳೆ ಬಾಲಕಿಯ ಸಂಬಂಧಿ ನೀರು ತರುವ ನೆಪದಲ್ಲಿ ಮಾರ್ಗಮಧ್ಯದಲ್ಲಿ ಇಳಿದು ಹೋಗಿದ್ದ. ನಂತರ ಆಂಬುಲೆನ್ಸ್ ಚಲಿಸುತ್ತಿರುವಾಗಲೇ ರಾಜೇಶ್ ಕೇವಾತ್ ಎನ್ನುವ ಯುವಕ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದಾದ ಬಳಿಕ ಬಾಲಕಿಯನ್ನು ರಾತ್ರಿಯಿಡೀ ತಮ್ಮ ವಶದಲ್ಲಿರಿಸಿಕೊಂಡಿದ್ದು, ಮರುದಿನ ಬೆಳಗ್ಗೆ ರಸ್ತೆ ಬದಿ ಎಸೆದು ಹೋಗಿದ್ದಾರೆ.
ಮನೆ ತಲುಪಿದ ಸಂತ್ರಸ್ತೆ ನಡೆದ ಘಟನೆಯನ್ನು ತಾಯಿಗೆ ವಿವರಿಸಿದ್ದಾರೆ. ಸಮಾಜದಲ್ಲಿ ಕುಟುಂಬದ ಗೌರವ ಏನಾಗುತ್ತದೋ ಎಂಬ ಆತಂಕದಿಂದ ಎರಡು ದಿನಗಳ ಕಾಲ ಅವರು ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ. ಬಳಿಕ ನವೆಂಬರ್ 25ರಂದು ಪ್ರಕರಣ ದಾಖಲಿಸಿದ್ದಾರೆ. ಇದಕ್ಕೆ ಬಾಲಕಿಯ ಸಂಬಂಧಿ ಹಾಗೂ ಚಾಲಕ ಸೇರಿದಂತೆ ಇತರ ಮೂವರು ಸಹಕಾರ ಕೊಟ್ಟಿದ್ದಾರೆ ಎಂದು ರೇವಾ ವಲಯದ ಡಿಐಜಿಪಿ ಸಾಕೇತ್ ಪಾಂಡೆ ತಿಳಿಸಿದ್ದಾರೆ.