Homeಕರ್ನಾಟಕಕೇಂದ್ರ ಸರ್ಕಾರ ನೀಡಿರುವ ಬೆಳೆ ಪರಿಹಾರ ಹಣ ರೈತರ ಸಾಲಕ್ಕೆ ಜಮೆ ಆಗುತ್ತಿದೆ: ಕುಮಾರಸ್ವಾಮಿ‌ ಕಿಡಿ

ಕೇಂದ್ರ ಸರ್ಕಾರ ನೀಡಿರುವ ಬೆಳೆ ಪರಿಹಾರ ಹಣ ರೈತರ ಸಾಲಕ್ಕೆ ಜಮೆ ಆಗುತ್ತಿದೆ: ಕುಮಾರಸ್ವಾಮಿ‌ ಕಿಡಿ

ರಾಜ್ಯ ಸರ್ಕಾರ ವರ್ಷದ ಸಂಭ್ರಮದಲ್ಲಿದೆ. ಆದರೆ, ಕೇಂದ್ರ ಸರ್ಕಾರ ನೀಡಿರುವ ಬೆಳೆ ಪರಿಹಾರ ಹಣ ರೈತರ ಸಾಲಕ್ಕೆ ಜಮೆ ಆಗುತ್ತಿದೆ. ಇದು ಈ ಸರ್ಕಾರದ ವೈಖರಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಟೀಕಿಸಿದರು.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ರೈತರು ಬರದಿಂದ ಕಂಗೆಟ್ಟು ಸಂಕಷ್ಟದಲ್ಲಿದ್ದಾರೆ. ರೈತರಿಗೆ ಈ ಸರ್ಕಾರದ ಕೊಡುಗೆ ಏನೂ ಇಲ್ಲ. ರಾಜ್ಯದಲ್ಲಿ ರೈತರ ಆತ್ಮಹತ್ಯೆಗಳು ಆರಂಭ ಆಗಿವೆ. ಬರ ಪರಿಹಾರ ಹಣವನ್ನು ಸಾಲಕ್ಕೆ ವಜಾ ಮಾಡ್ತಿದ್ದಾರೆ. ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡಿಲ್ಲ. ಹಲವು ಇಲಾಖೆಗಳಲ್ಲಿ ವೇತನ ನೀಡಿಲ್ಲ” ಎಂದು ತರಾಟೆಗೆ ತೆಗೆದುಕೊಂಡರು.

“ಕಳೆದ ಒಂದು ವರ್ಷದಲ್ಲಿ ಎಷ್ಟು ಮಂತ್ರಿಗಳು ಜಿಲ್ಲೆಗಳಲ್ಲಿ ಸಭೆ ಮಾಡಿದ್ದಾರೆ. ಸಮಸ್ಯೆಗಳ ಬಗ್ಗೆ ಏನು ಸೂಚನೆಗಳನ್ನು ಕೊಟ್ಟಿದ್ದಾರೆ. ಜನರ ಕಷ್ಟಗಳನ್ನು ಬಗೆಹರಿಸಿದ್ದಾರೆಯೇ? ಮುಖ್ಯಮಂತ್ರಿಗಳು ಸಭೆ ನಡೆಸಿ ಅಧಿಕಾರಿಗಳ ಮೇಲೆ ವಾಗ್ದಾಳಿ ನಡೆಸಿದ್ದರು. ಆದರೆ, ಜನರ ಕೆಲಸಗಳು ಏನಾಗಿವೆ? ಅಭಿವೃದ್ಧಿ ಕೆಲಸಗಳು ಎಲ್ಲಾದರೂ ಆಗಿವೆಯೇ? ಕೇವಲ ಗ್ಯಾರಂಟಿಗಳ ಹೆಸರು ಹೇಳಿಕೊಂಡು ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆ” ಎಂದು ಟೀಕಾ ಪ್ರಹಾರ ನಡೆಸಿದರು.

“ರಾಜ್ಯದ ನೀರಾವರಿ ಯೋಜನೆಗಳ ಪರಿಸ್ಥಿತಿ ಏನಾಗಿದೆ? ರಸ್ತೆಯ ಪರಿಸ್ಥಿತಿ ಹೇಗಾಗಿದೆ? ಕಳೆದ ಒಂದು ವರ್ಷದಿಂದ ಬ್ರ್ಯಾಂಡ್ ಬೆಂಗಳೂರು ಏನಾಗಿದೆ? ಮಳೆ ಬಂದು ಬೆಂಗಳೂರಿನ ಪರಿಸ್ಥಿತಿ ಏನಾಗಿದೆ ಎನ್ನುವುದನ್ನು ಈಗ ಕಣ್ಣಾರೆ ನೋಡುತ್ತಿದ್ದೇವೆ. ಎರಡು ದಿನ ಸುರಿದ ಮಳೆಗೆ ಬೆಂಗಳೂರು ಜನರು ನರಕ ನೋಡುತ್ತಿದ್ದಾರೆ. ಮನೆಗಳಿಗೆ ಬೀಗ ಹಾಕಿ ಹೋಟೆಲ್‌ಗೆ ಹೋಗಿ ಜೀವನ ಮಾಡುತ್ತಿದ್ದಾರೆ” ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

35,471 ಕಡತಗಳು ವಿಲೇವಾರಿ ಬಾಕಿ

“ಸರ್ಕಾರ ಹೇಗೆ ಕೆಲಸ ಮಾಡುತ್ತಿದೆ ಎನ್ನುವುದಕ್ಕೆ ಇಲಾಖೆಗಳ ಕೆಲಸ ನೋಡಿದರೆ ಅರ್ಥ ಆಗುತ್ತದೆ. ಎಂಟು ಪ್ರಮುಖ ಇಲಾಖೆಗಳಲ್ಲಿ 35,471 ಕಡತಗಳು ವಿಲೇವಾರಿ ಆಗಿಲ್ಲ ಎಂಬ ವರದಿಯನ್ನು ಓದಿದೆ. ಇದು ಸರ್ಕಾರದ ಸಾಧನೆಯೇ?” ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ವರ್ಗಾವಣೆಗೆ CSR ಫಂಡ್ ಸಂಜ್ಞೆಯಾಗಿ ಬಳಕೆ

“ಚುನಾವಣೆ ನಂತರ ಓರ್ವ ಮಂತ್ರಿಯಾದರೂ ಜಿಲ್ಲೆಗಳಿಗೆ ಭೇಟಿ ನೀಡಿದ್ದೀರಾ? ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಕೆಲಸ ಮಾಡಿಸಿದ್ದಾರಾ? ಇಲ್ಲ. ರಾಜ್ಯದ ಅಭಿವೃದ್ಧಿ ಸಂಪೂರ್ಣ ಸ್ಥಗಿತವಾಗಿದೆ. ನಾಡಿನ ಅಭಿವೃದ್ಧಿಗೆ ಪೂರಕವಾದ ಕೆಲಸ ಆಗಿಲ್ಲ. ಸರ್ಕಾರದ ಐದು ವರ್ಷದ ಆಡಳಿತಾತ್ಮಕ ಮಂಜೂರಾತಿ ಮುಂದುವರಿಸಿದ್ದು ಬಿಟ್ಟರೆ ಏನೂ ಆಗಿಲ್ಲ. ವರ್ಗಾವಣೆ ದಂಧೆಯೂ ನಿಂತಿಲ್ಲ. ವರ್ಗಾವಣೆಗೆ ಸಿ ಎಸ್ ಆರ್ ಫಂಡ್ ಹೆಸರನ್ನು ಸಂಜ್ಞೆಯಾಗಿ ಬಳಕೆ ಮಾಡಲಾಗುತ್ತಿದೆ” ಎಂದು ಆರೋಪ ಮಾಡಿದರು.

ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪೂರ, ಸಾ.ರಾ.ಮಹೇಶ್, ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಉಪಸ್ಥಿರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments