Homeಕರ್ನಾಟಕನೇಕಾರರಿಗೆ ಉದ್ಯೋಗ ಒದಗಿಸಲು ಕ್ರಮ: ಜವಳಿ ಸಚಿವ ಶಿವಾನಂದ ಪಾಟೀಲ

ನೇಕಾರರಿಗೆ ಉದ್ಯೋಗ ಒದಗಿಸಲು ಕ್ರಮ: ಜವಳಿ ಸಚಿವ ಶಿವಾನಂದ ಪಾಟೀಲ

ನೇಕಾರರಿಗೆ ಉದ್ಯೋಗ ನೀಡಲು ರಾಜ್ಯ ಸರ್ಕಾರ ಹಲವು ಉಪಕ್ರಮಗಳನ್ನು ಕೈಗೊಂಡಿದ್ದು, ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳು, ಆರೋಗ್ಯ ಕೇಂದ್ರಗಳಿಗೆ ಬೆಡ್‌ಶೀಟ್‌ ಹಾಗೂ ಟವೆಲ್‌ಗಳನ್ನು ಪೂರೈಕೆ ಮಾಡಲು ಬೇಡಿಕೆ ಪಡೆಯಲಾಗುತ್ತಿದೆ ಎಂದು ಜವಳಿ ಸಚಿವ ಶಿವಾನಂದ ಪಾಟೀಲ ವಿಧಾನಸಭೆಗೆ ತಿಳಿಸಿದ್ದಾರೆ.

ಸಿದ್ದು ಸವದಿ ಅವರ ಗಮನ ಸೆಳೆಯುವ ಸೂಚನೆ ನಿಯಮ 73ರ ವಿಷಯಕ್ಕೆ ಉತ್ತರಿಸಿದ ಸಚಿವರು, ನೇಕಾರರಿಗೆ ನೆರವಾಗಲು ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. 2025-26ನೇ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಣ ಇಲಾಖೆಯ ಸಮವಸ್ತ್ರಕ್ಕೆ ಅಗತ್ಯವಾದ 21.15 ಲಕ್ಷ ಮೀಟರ್ ಬಟ್ಟೆಯನ್ನು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ 3,567 ನೋಂದಾಯಿತ ನೇಕಾರರಿಂದ ತಯಾರಿಸಿ ಪೂರೈಕೆ ಮಾಡಲಾಗುವುದು” ಎಂದು ಹೇಳಿದರು.

“ವಿದ್ಯಾವಿಕಾಸ ಸಮವಸ್ತ್ರ ಸರಬರಾಜಿಗೆ ಅಗತ್ಯ ಒಟ್ಟು ಬಟ್ಟೆಯ ಪ್ರಮಾಣಕ್ಕೆ ಅನುಗುಣವಾಗಿ ಅಲ್ಲಿನ ಉಪಕೇಂದ್ರಗಳಲ್ಲಿ ಎಲ್ಲ ನೇಕಾರರಿಗೆ ನಿರಂತರ ನೂಲು ಸರಬರಾಜು ಮಾಡುತ್ತಿದ್ದು, ನೇಕಾರರು ನೇಯುವ ಬಟ್ಟೆಗೆ ನಿಗದಿತ ಪರಿವರ್ತನಾ ಶುಲ್ಕ ಪಾವತಿ ಮಾಡಲಾಗುವುದು. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮವು ಬಾಗಲಕೋಟ ಜಿಲ್ಲೆಯ ತೇರದಾಳ ವ್ಯಾಪ್ತಿಯ ರಬಕವಿ, ಬನಹಟ್ಟಿ, ತೇರದಾಳ, ಚಿಮ್ಮಡ, ಕೆಂಗೇರಿಮಡಿ, ಮಹಾಲಿಂಗಪುರ, ಹೊಸೂರು ಮತ್ತು ನಾವಲಗಿಯಲ್ಲಿ ಉಪಕೇಂದ್ರಗಳನ್ನು ಹೊಂದಿದ್ದು, ಈ ಕೇಂದ್ರಗಳಲ್ಲಿ ವಿದ್ಯಾ ವಿಕಾಸ ಯೋಜನೆಯ ಸಮವಸ್ತ್ರ ಬಟ್ಟೆ ತಯಾರಿಸಲಾಗುತ್ತಿದೆ” ಎಂದರು.

“2024-25ನೇ ಸಾಲಿನಲ್ಲಿ 21 ಸಹಕಾರ ಸಂಘ ಹಾಗೂ ಸಹಕಾರ ಬ್ಯಾಂಕುಗಳ ಮೂಲಕ 752 ನೇಕಾರರಿಗೆ ಒಟ್ಟು 59.31 ಲಕ್ಷ ರೂ. ಬಡ್ಡಿ ಸಹಾಯಧನ ಬಿಡುಗಡೆ ಮಾಡಲಾಗಿದೆ. ನೇಕಾರ ಸಮ್ಮಾನ್ ಯೋಜನೆಯಡಿ ಕೈಮಗ್ಗ ಹಾಗೂ ವಿದ್ಯುತ್ ಮಗ್ಗ ನೇಕಾರರಿಗೆ ವಾರ್ಷೀಕ ಐದು ಸಾವಿರ ರೂ.ಗಳನ್ನು ಡಿಬಿಟಿ ಮೂಲಕ ಪಾವತಿಸಲಾಗುತ್ತಿದೆ. ಕೈಮಗ್ಗ ವಿಕಾಸ ಯೋಜನೆಯಡಿ ಕೈಮಗ್ಗ ಮತ್ತು ಅಗತ್ಯ ಸಲಕರಣೆಗಳನ್ನು ಖರೀದಿಸಲು ಘಟಕ ವೆಚ್ಚದ ಪ್ರತಿಶತ 50ರಷ್ಟು ಸಹಾಯಧನ ಒದಗಿಸಲಾಗುತ್ತಿದೆ” ಎಂದು ಹೇಳಿದರು.

“ಕಚ್ಚಾ ಮಾಲ್ ಖರೀದಿ ಮೇಲೆ ಕೈಮಗ್ಗ ಸಹಕಾರ ಸಂಘಗಳಿಗೆ ಪ್ರತಿ ಕೆಜಿಗೆ 15‌ ರೂ. ಸಹಾಯಧನ ನೀಡಲಾಗುವುದು. ನೇಕಾರಿಕೆಗೆ ಸಹಕಾರ ಸಂಘ ಮತ್ತು ಸಹಕಾರ ಬ್ಯಾಂಕುಗಳಿಂದ ಪಡೆಯುವ ಸಾಲಕ್ಕೆ ಶೂನ್ಯ ಹಾಗೂ ಪ್ರತಿಶತ ಒಂದರ ಬಡ್ಡಿ ದರದಲ್ಲಿ 2 ಲಕ್ಷ ಹಾಗೂ ಪ್ರತಿಶತ 3 ರ ಬಡ್ಡಿ ದರದಲ್ಲಿ 2 ರಿಂದ 5 ಲಕ್ಷದವರೆಗೆ ಸಾಲ ನೀಡಲಾಗುವುದು” ಎಂದು ವಿವರಿಸಿದರು.

“ಕೈಮಗ್ಗ ಉತ್ಪನ್ನಗಳ ಮಾರಾಟಕ್ಕಾಗಿ ರಾಷ್ಟ್ರೀಯ ಹಾಗೂ ರಾಜ್ಯ ಕೈಮಗ್ಗ ಮೇಳ ಆಯೋಜಿಸಲಾಗುತ್ತಿದೆ. ಇಲಕಲ್ ಸೀರೆ, ಗುಳೇದಗುಡ್ಡ ಖಣ, ಮೊಳಕಾಲ್ಮುರು ರೇಷ್ಮೆ ಸೀರೆ ಮತ್ತು ಉಡುಪಿಯ ಕಾಟನ್ ಸೀರೆಗಳನ್ನು ಜಿಯಾಗ್ರಫಿಕಲ್ ಇಂಡಿಕೇಷನ್ ಕಾಯ್ದೆ ಅಡಿಯಲ್ಲಿ ನೋಂದಾಯಿಸಲಾಗಿದೆ” ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments