ಟೀಮ್ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಪುಣೆಯಲ್ಲಿ ನಡೆಯುತ್ತಿರುವ ನ್ಯೂಝಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಎರಡು ವಿಕೆಟ್ ಕಬಳಿಸುವುದರೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ಬೌಲರ್ ಎನಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಈ ದಾಖಲೆ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಸ್ಪಿನ್ನರ್ ನಾಥನ್ ಲಿಯಾನ್ ಅಗ್ರಸ್ಥಾನದಲ್ಲಿದ್ದರು. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ 78 ಇನಿಂಗ್ಸ್ಗಳಲ್ಲಿ ಲಿಯಾನ್ ಒಟ್ಟು 187 ವಿಕೆಟ್ ಕಬಳಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಲಿಯಾನ್ ಅವರನ್ನು ಹಿಂದಿಕ್ಕಿ ಅಶ್ವಿನ್ ಅಗ್ರಸ್ಥಾನಕ್ಕೇರಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಟೆಸ್ಟ್ ಸರಣಿಯಲ್ಲಿ ಒಟ್ಟು 74 ಇನಿಂಗ್ಸ್ ಆಡಿರುವ ಅಶ್ವಿನ್ 1390 ಓವರ್ಗಳಲ್ಲಿ ಎಸೆದಿದ್ದಾರೆ. ಈ ವೇಳೆ ಒಟ್ಟು 188 ವಿಕೆಟ್ಗಳನ್ನು ಪಡೆದು ಹೊಸ ಇತಿಹಾಸ ನಿರ್ಮಿಸಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿರುವ ನ್ಯೂಜಿಲೆಂಡ್ ತಂಡಕ್ಕೆ ಭಾರತೀಯ ಬೌಲರ್ ಗಳು ಆರಂಭಿಕ ಆಘಾತ ನೀಡಿದ್ದಾರೆ.
ಮೊದಲ ಟೆಸ್ಟ್ ಗೆದ್ದು 2ನೇ ಟೆಸ್ಟ್ ಅನ್ನು ವಿಶ್ವಾಸದಿಂದ ಆರಂಭಿಸಿದ್ದ ನ್ಯೂಜಿಲೆಂಡ್ ದಾಂಡಿಗರಿಗೆ ಭಾರತದ ರವಿಚಂದ್ರನ್ ಅಶ್ವಿನ್ ಡಬಲ್ ಆಘಾತ ನೀಡಿದ್ದು, ಕಿವೀಸ್ ಪಡೆಯ 2 ಪ್ರಮುಖ ವಿಕೆಟ್ ಕಬಳಿಸಿದ್ದಾರೆ.
ಆರಂಭಿಕ ಆಟಗಾರ ಹಾಗೂ ನಾಯಕ ಟಾಮ್ ಲಾಥಮ್ (15 ರನ್) ಎಲ್ ಬಿ ಬಲೆಗೆ ಕೆಡವಿದ ಅಶ್ವಿನ್ ಬಳಿಕ ವಿಲ್ ಯಂಗ್ (18 ರನ್) ರ ವಿಕೆಟ್ ಪಡೆಯುವಲ್ಲೂ ಯಶಸ್ವಿಯಾದರು.