Homeಕರ್ನಾಟಕಟೆಸ್ಕೋದಿಂದ 15 ಸಾವಿರ ಉದ್ಯೋಗ ಸೃಷ್ಟಿ: ಸಚಿವ ಎಂ ಬಿ ಪಾಟೀಲ್

ಟೆಸ್ಕೋದಿಂದ 15 ಸಾವಿರ ಉದ್ಯೋಗ ಸೃಷ್ಟಿ: ಸಚಿವ ಎಂ ಬಿ ಪಾಟೀಲ್

ಬ್ರಿಟನ್‌ ಮೂಲದ ಟೆಸ್ಕೋ ಕಂಪನಿಯು ರಾಜ್ಯದಲ್ಲಿ ತನ್ನ ನೂತನ ವಿತರಣಾ ಕೇಂದ್ರ ಸ್ಥಾಪಿಸಲು ಮುಂದಾಗಿದ್ದು, ಇದರಿಂದ 15 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ. ಇದರ ಜತೆಗೆ ರೋಲ್ಸ್‌-ರಾಯ್ಸ್‌ ಕಂಪನಿ ಕೂಡ ರಾಜ್ಯದಲ್ಲಿ ಬಂಡವಾಳ ಹೂಡಿಕೆಯ ಹೊಸ ಅವಕಾಶಗಳನ್ನು ಅರಸುತ್ತಿದೆ. ಇದಕ್ಕೆ ಪೂರಕವಾಗಿ ಸರಕಾರವು ಅಗತ್ಯ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರೈಸಲಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.

ಭಾರತ ಮತ್ತು ಬ್ರಿಟನ್‌ ಮಧ್ಯೆ ಇತ್ತೀಚೆಗೆ ಮುಕ್ತ ವ್ಯಾಪಾರ ಒಪ್ಪಂದ ಏರ್ಪಟ್ಟ ಹಿನ್ನೆಲೆಯಲ್ಲಿ ಇಲ್ಲಿನ ಬ್ರಿಟಿಷ್‌ ಡೆಪ್ಯುಟಿ ಹೈಕಮಿಷನರ್‌ ಏರ್ಪಡಿಸಿದ್ದ ಸಂತೋಷಕೂಟ ಸಮಾರಂಭದಲ್ಲಿ ಅವರು ಮಂಗಳವಾರ ಮಾತನಾಡಿದರು.

ಎರಡೂ ದೇಶಗಳ ನಡುವಿನ ಮುಕ್ತ ವ್ಯಾಪಾರ ಒಪ್ಪಂದದಿಂದ ಸದ್ಯಕ್ಕೆ ವಾರ್ಷಿಕ 25 ಬಿಲಿಯನ್‌ ಪೌಂಡ್‌ ಮೊತ್ತದ ವಹಿವಾಟು ನಡೆಯಲಿದೆ. ಇದು ಮುಂದಿನ ಐದು ವರ್ಷಗಳಲ್ಲಿ 90 ಬಿಲಿಯನ್‌ ಪೌಂಡ್‌ಗೆ ಹೆಚ್ಚಲಿದೆ. ಮುಖ್ಯವಾಗಿ ಭಾರತದಿಂದ ಬ್ರಿಟನ್‌ಗೆ ರಫ್ತಾಗುವ ಸರಕುಗಳ ಪೈಕಿ ಶೇಕಡ 99ರಷ್ಟು ಉತ್ಪನ್ನಗಳಿಗೆ ಮತ್ತು ಅಲ್ಲಿಂದ ಇಲ್ಲಿಗೆ ಬರುವ ಶೇಕಡ 90ರಷ್ಟು ಉತ್ಪನ್ನಗಳಿಗೆ ಸುಂಕ ಇರುವುದಿಲ್ಲ. ಈ ಒಪ್ಪಂದವು ದ್ವಿಪಕ್ಷೀಯ ವಾಣಿಜ್ಯ ವಹಿವಾಟನ್ನು ವೃದ್ಧಿಸಲಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಬ್ರಿಟಿಷ್‌ ಮೂಲದ ಬಿಎಇ ಸಿಸ್ಟಮ್ಸ್‌, ಎಆರ್‌ಎಂ, ಎಚ್‌ಎಸ್‌ಬಿಸಿ, ಅವಿವಾ ಮುಂತಾದ ಕಂಪನಿಗಳಿದ್ದು, 30 ಸಾವಿರ ಉದ್ಯೋಗಿಗಳು ಇಲ್ಲಿ ಕಾರ್ಯನಿರತರಾಗಿದ್ದಾರೆ. ಮುಕ್ತ ವ್ಯಾಪಾರ ಒಪ್ಪಂದದಿಂದ ಬ್ರಿಟನ್ನಿನ ಕಂಪನಿಗಳು ರಾಜ್ಯದಲ್ಲಿ ಇನ್ನೂ ಹೆಚ್ಚು ಪ್ರಮಾಣದಲ್ಲಿ ಬಂಡವಾಳ ತೊಡಗಿಸಲು ಸಾಧ್ಯವಾಗಲಿದೆ. ನಮ್ಮಲ್ಲಿರುವ ತಂತ್ರಜ್ಞಾನ, ಮೂಲಸೌಕರ್ಯ, ಕೈಗಾರಿಕಾಸ್ನೇಹಿ ವಾತಾವರಣ ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ರಾಜ್ಯ ಸರಕಾರ ಕೂಡ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಟ್ರೇಡ್ ಕಮಿಷನರ್ ಹರಿಜಿಂದರ್ ಕಂಗ್, ಬ್ರಿಟಿಷ್‌ ಡೆಪ್ಯುಟಿ ಹೈಕಮಿಷನರ್ ಚಂದ್ರು ಅಯ್ಯರ್ ಸೇರಿದಂತೆ ಇತರರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments