ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಸಮಾವೇಶದ (ಯುಎನ್‌ಸಿಆರ್‌ಸಿ) ನಿರ್ಣಯಗಳನ್ನು ಪರಿಗಣಿಸುವ ಅಗತ್ಯತೆಯ ಬಗ್ಗೆ ಉಲ್ಲೇಖಿಸಿರುವ ಹೈಕೋರ್ಟ್, ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಬಳಿ ಗುಹೆಯೊಂದರಲ್ಲಿ ಕಂಡು ಬಂದ ರಷ್ಯಾದ ಮಹಿಳೆಯ ಮಕ್ಕಳ ಗಡೀಪಾರು ಪ್ರಕ್ರಿಯೆಗೆ ತಾತ್ಕಾಲಿಕ ತಡೆ ನೀಡಿದೆ.
ಮಕ್ಕಳನ್ನು ಗಡಿಪಾರು ಮಾಡುವಂತೆ ಹೊರಡಿಸಿದ್ದ ಆದೇಶ ಪ್ರಶ್ನಿಸಿ, ಸಲ್ಲಿಕೆಯಾದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಅವರಿದ್ದ ಪೀಠವು ಈ ಆದೇಶ ಮಾಡಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲೆ ಬೀನಾ ಪಿಳ್ಳೈ, ”ಗಡೀಪಾರು ಪ್ರಕ್ರಿಯೆಯಿಂದ ಮಕ್ಕಳ ಯೋಗಕ್ಷೇಮವನ್ನು ಕಡೆಗಣಿಸಿದಂತಾಗುತ್ತದೆ. ಅಲ್ಲದೇ, ಯುಎನ್‌ಸಿಆರ್‌ಸಿ ತತ್ವಗಳ ಉಲ್ಲಂಘನೆ ಮಾಡಿದಂತಾಗಲಿದೆ” ಎಂದು ಪೀಠಕ್ಕೆ ತಿಳಿಸಿದರು.
ಭಾರತ ಒಕ್ಕೂಟದ ಪರವಾಗಿ ಹಾಜರಾಗಿದ್ದ ಸಹಾಯಕ ಸಾಲಿಸಿಟರ್ ಜನರಲ್ (ಎಎಸ್‌ಜಿ), ”ಮಕ್ಕಳಿಗೆ ಪ್ರಸ್ತುತ ಅಧಿಕೃತ ಪ್ರಯಾಣ ಅಥವಾ ಗುರುತಿನ ದಾಖಲೆಗಳಿಲ್ಲ” ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್,”ಈ ವಿಚಾರವನ್ನು ಆಧರಿಸಿ, ತಕ್ಷಣ ಗಡೀಪಾರು ಮಾಡುವುದು ಸಮಂಜಸವಲ್ಲ” ಎಂದು ಹೇಳಿತು.
ಅಲ್ಲದೇ ಪ್ರಕರಣದ ಕೂಲಂಕಷ ಪರಿಶೀಲನೆಗೆ ಸಮಗ್ರ ವಿಚಾರಣೆಯ ಅಗತ್ಯವಿದೆ. ಪ್ರತಿವಾದಿಗಳು ಮಕ್ಕಳ ಬಗ್ಗೆ ಸಮರ್ಪಕ ದಾಖಲೆಗಳು ಲಭ್ಯವಿಲ್ಲದಿರುವ ಬಗ್ಗೆ ದೃಢೀಕರಿಸುವ ಲಿಖಿತ ಅಫಿಡವಿಟ್ ಸಲ್ಲಿಸಬೇಕು. ಜೊತೆಗೆ, ಎರಡು ವಾರಗಳಲ್ಲಿ ತಮ್ಮ ಆಕ್ಷೇಪಣೆ ಸಲ್ಲಿಸಬೇಕು ಎಂದು ಪೀಠವು ನಿರ್ದೇಶಿಸಿದೆ.
ಇದಲ್ಲದೇ, ಯಾವುದೇ ಗಡೀಪಾರು ಪ್ರಕ್ರಿಯೆಯನ್ನು ಪೂರ್ವ ಸೂಚನೆಯಿಲ್ಲದೇ, ಕಾರ್ಯಗತಗೊಳಿಸಲಾಗುವುದಿಲ್ಲ ಎಂದು ನ್ಯಾಯಾಲಯವು ಸ್ಪಷ್ಟವಾಗಿ ಹೇಳಿತು. ಮುಂದಿನ ವಿಚಾರಣೆಯನ್ನು ಆಗಸ್ಟ್ 18ಕ್ಕೆ ಮುಂದೂಡಿರುವ ಕೋರ್ಟ್, ಅಲ್ಲಿಯವರೆಗೆ ಯಾವುದೇ ಏಕಪಕ್ಷೀಯ ಗಡೀಪಾರು ಕ್ರಮ ಕೈಗೊಳ್ಳದಂತೆ ತಡೆ ನೀಡಿತು.
ಜುಲೈ 11ರಂದು ಪೊಲೀಸ್ ಗಸ್ತು ತಿರುಗುತ್ತಿದ್ದ ವೇಳೆ ಗೋಕರ್ಣದ ರಾಮತೀರ್ಥ ಬೆಟ್ಟದ ಮೇಲಿರುವ ಗುಹೆಯಲ್ಲಿ ರಷ್ಯಾದ ಮಹಿಳೆ ನೀನಾ ಕುಟಿನಾ (40) ಮತ್ತು ಆಕೆಯ ಇಬ್ಬರು ಪುತ್ರಿಯರು ಕಂಡು ಬಂದಿದ್ದರು. ಅಧ್ಯಾತ್ಮ, ಧ್ಯಾನಕ್ಕಾಗಿ ಗೋವಾದಿಂದ ಗೋಕರ್ಣಕ್ಕೆ ಬಂದಿರುವುದಾಗಿ ಆಕೆ ತಿಳಿಸಿದ್ದರು. ಅಪಾಯಕಾರಿ ಪರಿಸ್ಥಿತಿಯಲ್ಲಿ ವಾಸಿಸುತ್ತಿದ್ದ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು.
ಬ್ಯುಸಿನೆಸ್ ವೀಸಾದಲ್ಲಿ ರಷ್ಯಾದಿಂದ ಭಾರತಕ್ಕೆ ಬಂದಿದ್ದ ನೀನಾ ಕುಟಿನಾ 2018ರಲ್ಲಿ ಗೋವಾದಲ್ಲಿದ್ದರು. ಹಿಂದೂ ಧರ್ಮ ಹಾಗೂ ಭಾರತೀಯ ಆಧ್ಯಾತ್ಮಿಕ ಸಂಪ್ರದಾಯಗಳಿಗೆ ಆಕರ್ಷಿತರಾಗಿದ್ದ, ಕುಟಿನಾ ಕರಾವಳಿ ನಗರವಾದ ಗೋಕರ್ಣಕ್ಕೆ ಬಂದು, ಇತ್ತೀಚೆಗಷ್ಟೇ ಮಕ್ಕಳೊಂದಿಗೆ ಈ ಕಾಡಿನ ಗುಹೆಯಲ್ಲಿ ಏಕಾಂತದಲ್ಲಿ ವಾಸಿಸುತ್ತಿದ್ದರು. ಇವರ ವಾಸ ಪೊಲೀಸರ ಕಣ್ಣಿಗೆ ಬಿದ್ದಿತ್ತು. ಕುಟಿನಾ ಅವರ ವೀಸಾ ಅವಧಿ ಮುಗಿದಿದ್ದರೂ ಸಹ ಅವರು ಇಲ್ಲಿಯೇ ಇದ್ದರು. ಸದ್ಯ ಅವರು ತಮ್ಮ ಮಕ್ಕಳೊಂದಿಗೆ ತುಮಕೂರು ತಾಲೂಕಿನ ಫಾರಿನ್ ಡಿಟೆನ್ಷನ್ ಸೆಂಟರ್‌ನಲ್ಲಿದ್ದಾರೆ.