ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಹೆಚ್ ಸಿ ಮಹದೇವಪ್ಪ ಅವರು ತಮ್ಮ ಇಲಾಖೆಯಡಿ ಬರುವ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಶುಕ್ರವಾರ ವಿಧಾನಸಭೆಯ ಸಭಾಂಗಣದಲ್ಲಿ ನೋಡಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಸರ್ಕಾರದ ಎಲ್ಲಾ ಇಲಾಖೆಗಳಿಗೆ 2023-24 ನೇ ಸಾಲಿನಲ್ಲಿ ಹಂಚಿಕೆಯಾದ ಅನುದಾನದ ಪ್ರಗತಿ ಮತ್ತು 2024-25 ನೇ ಸಾಲಿನ ಅನುದಾನ ಹಂಚಿಕೆಗೆ ಸಂಬಂಧಿಸಿದಂತೆ ವಿಸ್ತೃತವಾದ ಚರ್ಚೆಯನ್ನು ಸಚಿವರು ಸಭೆಯಲ್ಲಿ ನಡೆಸಿದರು.
ಪ್ರವಾಸೋದ್ಯಮ ಇಲಾಖೆ ಸಂಬಂಧ ಮಾತನಾಡಿ, “ಸಿಬ್ಬಂದಿಗಳಿಗೆ ಸೂಕ್ತ ರೀತಿಯ ತರಬೇತಿ ನೀಡಬೇಕು. ಕ್ಯಾಂಟಿನ್ ಹಾಗೂ ಇತರೆ ವ್ಯಾಪಾರಿ ಪರವಾನಿಗೆ ನೀಡುವ ಕ್ರಮ ವಹಿಸಬೇಕು” ಎಂದು ಸೂಚನೆ ನೀಡಿದರು.
“ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ಸ್ಥಳೀಯ ಕಲೆಗಳಿಗೆ ಹೆಚ್ಚಿನ ಅನುದಾನ ನೀಡಿ ಉತ್ತೇಜನ ನೀಡಬೇಕು. ಪಶುಸಂಗೋಪನೆ ಇಲಾಖೆಯಡಿ ಕೋಳಿ ಮರಿ ಹಾಗೂ ಮೇಕೆಗಳನ್ನು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡುವ ಮೂಲಕ ಅವರ ಜೀವನೋಪಯಕ್ಕೆ ನೆರವಾಗಬೇಕು” ಎಂದು ಸಲಹೆ ನೀಡಿದರು.
“ವಸತಿ ಯೋಜನೆಯಡಿ ಅಗತ್ಯ ಹಣಕಾಸು ಸೌಲಭ್ಯವನ್ನು ನೀಡಿದ್ದರೂ ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಯೋಜನೆಯಡಿ ವಸತಿ ಸೌಲಭ್ಯವನ್ನು ಕಲ್ಪಿಸಲು ಸಾಧ್ಯವಾಗದ್ದಕ್ಕೆ ಅಧಿಕಾರಿಗಳಿಗೆ ಕಾರ್ಯೋನ್ಮುಖರಾಗಬೇಕು” ಎಂದು ಸೂಚನೆ ನೀಡಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವಾರ್ಷಿಕ ಪರೀಕ್ಷೆಯಲ್ಲಿ ನಕಲು ಮಾಡುವುದನ್ನು ತಡೆಗಟ್ಟಲು ಸಿಸಿ ಕ್ಯಾಮೆರಾವನ್ನು ಪರೀಕ್ಷಾ ಕೇಂದ್ರಗಳಲ್ಲಿ ಪರಿಣಾಮಾಕಾರಿಯಾಗಿ ಅಳವಡಿಸಬೇಕು. ಸಣ್ಣ ಸಣ್ಣ ಗ್ರಂಥಾಲಯಗಳ ನಿರ್ಮಾಣಕ್ಕೆ ಚಿಂತನೆ ಇದ್ದು, ಇದಕ್ಕಾಗಿ ಎಸ್‌ಸಿಎಸ್‌ಪಿ ಅನುದಾನದ ನೀಡಬೇಕೆಂಬ ಕೋರಿಕೆಯ ಕುರಿತು ಚಿಂತನೆ ನಡೆಸಿದರು.
ಸಣ್ಣ ಕೈಗಾರಿಕಾ ಇಲಾಖೆಯ KAIDB ಭೂಮಿಯನ್ನು ಮುಖ್ಯ ಸ್ಥಳದಲ್ಲಿ ನೀಡಬೇಕು ಮತ್ತು ಆಯ್ಕೆ ಮಾಡುವ ವೇಳೆ ಮೂಲ ಇಲಾಖೆಯನ್ನು ಪರಿಗಣಿಸಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ.ಮಣಿವಣ್ಣನ್, ಆಯುಕ್ತರಾದ ರಾಕೇಶ್ ಕುಮಾರ್ ಸೇರಿದಂತೆ ಇಲಾಖೆಯ ಸಲಹೆಗಾರರು ಹಾಜರಿದ್ದರು.