ಪಿಎಸ್ಐ 545 ಹುದ್ದೆಗಳ ಜೊತೆಗೆ ಇನ್ನೂ 400 ಪಿಎಸ್ಐ ಹುದ್ದೆಗಳು ಖಾಲಿಯಿವೆ. ಎರಡನ್ನೂ ಒಟ್ಟಿಗೆ ಮಾಡಬೇಕಾ ಅಥವಾ ಪ್ರತ್ಯೇಕವಾಗಿ ನಡೆಸಬೇಕೆಂದು ಚರ್ಚೆ ನಡೆಸುತ್ತಿದ್ದೇವೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಹೈಕೋರ್ಟ್ ತೀರ್ಪು ಇಲಾಖೆಯಗೆ ಒಳ್ಳೆಯದಾಗಿದೆ. ಪೊಲೀಸ್ ಸಬ್ ಇನ್ಸಪೆಕ್ಟರ್ (ಪಿಎಸ್ಐ) ಮರು ಪರೀಕ್ಷೆ ನಡೆಸುವಂತೆ ಹೈಕೋರ್ಟ್ ಆದೇಶ ನನ್ನ ಕೈಗೆ ಸಿಕ್ಕಿಲ್ಲ. ಮುಂದಿನ ಸೋಮವಾರ ಅಥವಾ ಮಂಗಳವಾರ ಆದೇಶ ಪ್ರತಿ ಕೈ ಸೇರಲಿದೆ. ತದನಂತರ ಕ್ರಮ ತೆಗೆದುಕೊಳ್ಳುತ್ತೇವೆ” ಎಂದರು.
“ಪಿಎಸ್ಐ ಪರೀಕ್ಷಾರ್ಥಿಗಳು ಓದಲು ಸಮಯ ಕೊಡಿ ಅಂತಿದ್ದಾರೆ. ಅದನ್ನು ಪರಿಗಣಿಸಿ ನಿರ್ಧಾರ ತಗೆದುಕೊಳ್ಳುತ್ತೇವೆ . ಸ್ವತಂತ್ರ ಸಂಸ್ಥೆಯಿಂದ ಬೇಗ ಮರು ಪರೀಕ್ಷೆ ನಡೆಸಲು ಕೋರ್ಟ್ ಹೇಳಿದೆ. ನೇಮಕಾತಿ ಬಳಿಕ ಅವರಿಗೆ ತರಬೇತಿ ನೀಡಲು 1 ವರ್ಷ ಆಗಲಿದೆ. ರೂಲ್ 32ರಲ್ಲಿ 500 ರಿಂದ 600 ಎಎಸ್ಐಗಳಿಗೆ ಬಡ್ತಿ ನೀಡಿದ್ದೇವೆ. ಹೀಗಾಗಿ 400 ಹುದ್ದೆ ಸೇರಿಸಿ ಪರೀಕ್ಷೆ ನಡೆಸುವ ಬಗ್ಗೆ ಯೋಚಿಸಲಾಗುತ್ತಿದೆ” ಎಂದು ವಿವರಿಸಿದರು.