ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸೆ.22ರಿಂದ ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯನ್ನು ಪ್ರಾರಂಭಿಸಲಿದೆ. ವೈಜ್ಞಾನಿಕವಾಗಿ ಸಮೀಕ್ಷೆ ನಡೆಯಬೇಕು. ಯಾವುದೇ ಮನೆಗಳು ತಪ್ಪಿ ಹೋಗದಂತೆ ಯಶಸ್ವಿಯಾಗಿ ಸಮೀಕ್ಷೆ ಕೈಗೊಳ್ಳಲು ಜನರು ಸಹಕರಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಕರೆದು ಮಾತನಾಡಿ, “ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಮಧುಸೂದನ್ ಆರ್ ನಾಯ್ಕ್ ಅವರ ಸಮಿತಿ ವೈಜ್ಞಾನಿಕ ಮಾನದಂಡದಲ್ಲಿ ಸಮೀಕ್ಷೆ ನಡೆಸಿ ಡಿಸೆಂಬರ್ ಒಳಗೆ ವರದಿ ನೀಡಲಿದ್ದಾರೆ. ಎಲ್ಲ ಜಾತಿ-ಧರ್ಮದವರ ದತ್ತಾಂಶ ಅಂಗೈಯಲ್ಲಿದ್ದರೆ ಮಾತ್ರ ಸಾಮಾಜಿಕ ನ್ಯಾಯದ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯ. ನಾವು ಬಡತನ, ನಿರುದ್ಯೋಗ, ಅನಕ್ಷರತೆ ಹೋಗಲಾಡಿದಲು ಸಂವಿಧಾನದ ಕಲಂ 15(), 16(5) ಅಡಿಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ” ಎಂದು ತಿಳಿಸಿದರು.
“ಹೊಸದಾಗಿ 7 ಕೋಟಿ ಜನರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿ ಗತಿ ಅರಿಯಲು ಈ ಸಮೀಕ್ಷೆ ನಡೆಸಲಾಗುತ್ತಿದೆ. ಆದಷ್ಟೂ ಜಾಗ್ರತೆಯಿಂದ ಸಮೀಕ್ಷೆ ನಡೆಸಿ ವರದಿ ಕೊಡಲು ಸೂಚನೆ ನೀಡಿದ್ದೇವೆ. ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7 ರವರೊಳಗೆ ಸಮೀಕ್ಷೆ ಕಾರ್ಯ ನಡೆಯುತ್ತದೆ. 1,75,000 ಸರ್ಕಾರಿ ಶಾಲಾ ಶಿಕ್ಷಕರುಗಳನ್ನು ವಿಶೇಷ ಭತ್ಯೆ ನೀಡಿ ಸಮೀಕ್ಷೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದೇವೆ. ಶಿಕ್ಷಕರ ಭತ್ಯೆಯೇ 325 ಕೋಟಿ ರೂ. ಆಗಲಿದೆ. ಓರ್ವ ಶಿಕ್ಷಕರಿಗೆ 20 ಸಾವಿರವರೆಗೆ ಗೌರವ ಸಂಭಾವನೆ ನೀಡಲಾಗುವುದು. ಸದ್ಯ 425 ಕೋಟಿ ಹಣ ಕೊಡುವುದಾಗಿ ಹೇಳಿದ್ದೇವೆ. ಹೆಚ್ಚಿನ ಹಣದ ಅಗತ್ಯಬಿದ್ದರೆ ಕೊಡುತ್ತೇವೆ” ಎಂದು ಹೇಳಿದರು.
“ಮನೆ ಮನೆಗೂ ಕರೆಂಟ್ ಇದೆ. ಮೀಟರ್ ರೀಡರ್‌ಗಳು jio tag ಮಾಡುವ ಜೊತೆಗೆ 2 ಕೋಟಿ ಮನೆಗಳಿಗೆ ಪ್ರತ್ಯೇಕ ಗುರುತಿನ ನಂಬರ್ ನೀಡಿ ಸ್ಟಿಕ್ಕರ್ ಅಂಟಿಸುತ್ತಾರೆ. ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ಅನ್ನು ಮೊಬೈಲಿಗೆ ಲಿಂಕ್ ಮಾಡುವುದರ ಜೊತೆಗೆ ಮೊಬೈಲ್ ಇಲ್ಲದ ಮನೆಗಳಿಗೂ ಪರ್ಯಾಯ ಮಾರ್ಗ ಹುಡುಕಿಕೊಂಡಿದ್ದೇವೆ. ಒಟ್ಟು 60 ಪ್ರಶ್ನೆಗಳನ್ನು ಫೈನಲ್ ಮಾಡಲಾಗಿದ್ದು, ಈ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದು ಶಿಕ್ಷಕರು ಸಮೀಕ್ಷೆ ನಡೆಸಲಿದ್ದಾರೆ. ಪ್ರತಿ ಶಿಕ್ಷಕರಿಗೆ 120ರಿಂದ 150ಮನೆಗಳ ವ್ಯಾಪ್ತಿಯನ್ನು ನಿಗದಿಪಡಿಸಲಾಗಿದೆ. ಹಿಂದಿನ ಕಾಂತರಾಜ್ ಆಯೋಗವು 54 ಪ್ರಶ್ನೆಗಳನ್ನು ಕೇಳಿತ್ತು” ಎಂದರು.
“ರಾಜ್ಯದ ಜನತೆ ಒಬ್ಬರೂ ತಪ್ಪಿಸಿಕೊಳ್ಳದೆ ಕಡ್ಡಾಯವಾಗಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು ಎಂದು ನಾನು ಈ ಮೂಲಕ ವಿನಂತಿಸಿಕೊಳ್ಳುವೆ. ಸಹಾಯವಾಣಿ ಸಂಖ್ಯೆ (8050770004) ತೆರೆದಿದ್ದೇವೆ. ಈ ನಂಬರ್‌ಗೆ ಕರೆ ಮಾಡಿ ಕೂಡ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದು. ಹಾಗೆಯೇ ಆನ್ ಲೈನ್ ಮೂಲಕವೂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದು” ಎಂದು ಹೇಳಿದರು.
“ಆಶಾ ಕಾರ್ಯಕರ್ತೆಯರು ನಾಳೆಯಿಂದಲೇ (ಸೆ.13) ಮನೆ ಮನೆಗೆ ಹೋಗಿ 60 ಪ್ರಶ್ನೆಗಳ ನಮೂನೆಯನ್ನು ಪ್ರತೀ ಮನೆಗೆ ತಲುಪಿಸುತ್ತಾರೆ. ಬಳಿಕ ಶಿಕ್ಷಕರು ಸಮೀಕ್ಷೆಗೆ ಬರುತ್ತಾರೆ. ಯಾರೂ ಸಮೀಕ್ಷೆಯಿಂದ ಹೊರಗೆ ಉಳಿಯದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಜಾತಿ ಹೇಳಿಕೊಳ್ಳಲು ಕಷ್ಟ ಆದವರು ಸಹಾಯವಾಣಿಗೆ ಕರೆ ಮಾಡಿ ಜಾತಿ ಹೇಳಬಹುದು. ಯಾವುದೇ ನ್ಯೂನ್ಯತೆಗಳು ಇಲ್ಲದಂತೆ, ಹಿಂದಿನ ಸಮೀಕ್ಷೆಗಳಲ್ಲಿ ಎದುರಾದ ಯಾವುದೇ ತಾಂತ್ರಿಕ ಸಮಸ್ಯೆ ಈ ಬಾರಿ ಇಲ್ಲದಂತೆ ಸಿದ್ಧತೆ ಮಾಡಿಕೊಂಡಿದ್ದೇವೆ. ಮತಾಂತರಗೊಂಡವರು ಅಥವಾ ಜಾತಿ ಗೊಂದಲ ಇದ್ದದ್ದನ್ನು ಆಯೋಗದ ತಜ್ಞರ ತಂಡ ವಿಶ್ಲೇಷಣೆ ಮಾಡಿ ತೀರ್ಮಾನಿಸುತ್ತಾರೆ” ಎಂದು ತಿಳಿಸಿದರು.