ಬಿಡದಿಯ ಕೇತಗಾನಹಳ್ಳಿ ಗ್ರಾಮದಲ್ಲಿ ಕುಮಾರಸ್ವಾಮಿ ಮತ್ತು ಅವರ ಕುಟುಂಬ ಸದಸ್ಯರು ದೊಡ್ಡ ಪ್ರಮಾಣದ ಭೂ ಅತಿಕ್ರಮಣ ಮಾಡಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ನ್ಯಾಯಾಂಗ ನಿಂದನೆ ವಿಚಾರಣೆಯಲ್ಲಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ಕ್ರಮ ಜರುಗಿಸುವ ಆದೇಶಕ್ಕೆ ಸುಪ್ರೀಂ ಕೋರ್ಟ್ ಗುರುವಾರ ತಡೆ ನೀಡಿದೆ.
ಕರ್ನಾಟಕ ಹೈಕೋರ್ಟ್‌ನ ಏಪ್ರಿಲ್ 17 ರ ಆದೇಶದ ವಿರುದ್ಧ ಕೇಂದ್ರ ಭಾರೀ ಕೈಗಾರಿಕಾ ಸಚಿವ ಕುಮಾರಸ್ವಾಮಿ ಸಲ್ಲಿಸಿದ ಅರ್ಜಿಯನ್ನು ಗಮನಿಸಿದ ನ್ಯಾಯಮೂರ್ತಿಗಳಾದ ಪಂಕಜ್ ಮಿಥಲ್ ಮತ್ತು ಪ್ರಸನ್ನ ಬಿ ವರಾಳೆ ಅವರನ್ನೊಳಗೊಂಡ ಪೀಠ, ವಕೀಲ ಪ್ರಶಾಂತ್ ಭೂಷಣ್ ಪ್ರತಿನಿಧಿಸುತ್ತಿರುವ “ಸಮಾಜ ಪರಿವರ್ತನ ಸಮುದಾಯ” ಎಂಬ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದೆ.
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಮೇಲೆ ನ್ಯಾಯಾಂಗ ನಿಂದನೆ ಆರೋಪ ಹೊರಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ. ಬಿಡದಿ ತಾಲೂಕಿನ ಕೇತಗಾನಹಳ್ಳಿ ವ್ಯಾಪ್ತಿಯಲ್ಲಿ ಕುಮಾರಸ್ವಾಮಿ ಮತ್ತವರ ಸಂಬಂಧಿಕರು ಭೂ ಕಬಳಿಕೆ ಮಾಡಿರುವ ಆರೋಪ ಸಂಬಂಧ ಲೋಕಾಯುಕ್ತ ಜಾಗವನ್ನು ತೆರವು ಮಾಡುವಂತೆ ಆದೇಶಿಸಿತ್ತು.
ಈ ಕುರಿತ ಆದೇಶವನ್ನು ಜಾರಿಗೊಳಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್.ಹಿರೇಮಠ ಅವರು ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್, ಕುಮಾರಸ್ವಾಮಿ ಅವರನ್ನು ಪ್ರಕರಣದಲ್ಲಿ ವಿಚಾರಣೆ ಎದುರಿಸಲು ಸೂಚಿಸಿತ್ತು.
ಇದೇ ಪ್ರಕರಣಕ್ಕೆ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ಬಾಕಿ ಇರುವ ಸಂಬಂಧ ಹೈಕೋರ್ಟ್ನಲ್ಲಿ ದಾಖಲಾದ ಅರ್ಜಿ ವಿಚಾರಣೆಗೆ ತಡೆ ನೀಡಬೇಕು ಎಂದು ಕೇಂದ್ರ ಸಚಿವರು ಮನವಿ ಮಾಡಿದ್ದರು. ಇದನ್ನು ಪುರಸ್ಕರಿಸಿದ್ದ ಹೈಕೋರ್ಟ್, ಬಲವಂತದ ಕ್ರಮ ಜರುಗಿಸದಂತೆ ಸೂಚಿಸಿ ವಿಚಾರಣೆ ಮುಂದೂಡಿತ್ತು.
ಇದೀಗ, ಸುಪ್ರೀಂಕೋರ್ಟ್ ಕೂಡ ನ್ಯಾಯಾಂಗ ನಿಂದನೆ ಆರೋಪದಡಿ ಕೇಂದ್ರ ಸಚಿವರ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸುವಂತಿಲ್ಲ ಎಂದು ಸೂಚಿಸಿ ವಿಚಾರಣೆಗೆ ತಡೆ ನೀಡಿದೆ.