ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ 25,000 ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗಳ ನೇಮಕಾತಿಯನ್ನು ರದ್ದುಗೊಳಿಸಿದ್ದ ಕೋಲ್ಕತ್ತಾ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
ಶಿಕ್ಷಕರ ಆಯ್ಕೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳ ನಡುವೆಯೇ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆಘಾತ ನೀಡಿದ್ದು, ಗುರುವಾರ 25,000 ಶಿಕ್ಷಕರನ್ನು ವಜಾಗೊಳಿಸಿ ಆದೇಶಿಸಿದೆ. ಸುಪ್ರೀಂ ಕೋರ್ಟ್ ನಿರ್ಧಾರ ಇದೀಗ ಸಿಎಂ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಶಾಕ್ ನೀಡಿದಂತಾಗಿದೆ.
ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ 25,753 ಶಿಕ್ಷಕರು ಮತ್ತು ಸಹಾಯಕ ಸಿಬ್ಬಂದಿಯನ್ನು ನೇಮಕ ಮಾಡಿದ್ದ ಶಾಲಾ ಸೇವಾ ಆಯೋಗದ(ಎಸ್ಎಸ್‌ಸಿ) ಪ್ರಕ್ರಿಯೆಯನ್ನು ಕೋಲ್ಕತ್ತಾ ಹೈಕೋರ್ಟ್ ರದ್ದುಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಸುಪ್ರೀಂ ಕೋರ್ಟ್‌ನಲ್ಲಿ ದೀದಿ ಸರ್ಕಾರಕ್ಕೆ ಹಿನ್ನಡೆಯಾಗಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಪಿವಿ ಸಂಜಯ್ ಕುಮಾರ್ ಅವರ ಪೀಠ, ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗದ ಅಡಿಯಲ್ಲಿ ನೇಮಕಗೊಂಡ 25,000ಕ್ಕೂ ಅಧಿಕ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗಳ ನೇಮಕಾತಿ ಆಯ್ಕೆ ಪ್ರಕ್ರಿಯೆಯು ಸಂಪೂರ್ಣ ವಂಚನೆಯಿಂದ ಕೂಡಿದೆ ಎಂದು ಹೇಳಿದ ಪೀಠ ಇಡೀ ನೇಮಕಾತಿ ಪ್ರಕ್ರಿಯೆಯನ್ನೇ ರದ್ದುಗೊಳಿಸಿದೆ. ಅಲ್ಲದೆ ಈಗಾಗಲೇ ನೇಮಕವಾಗಿದ್ದ ಎಲ್ಲ 25 ಸಾವಿರ ಶಿಕ್ಷಕರು ಮತ್ತು ಸಿಬ್ಬಂದಿಗಳನ್ನು ವಜಾ ಮಾಡಿದೆ.
ಹೈಕೋರ್ಟ್ ನೀಡಿರುವ ಆದೇಶದಲ್ಲಿ ಮಧ್ಯಪ್ರವೇಶಿಸಲು ಯಾವುದೇ ಸೂಕ್ತ ಕಾರಣ ನಮಗೆ ಕಂಡು ಬಂದಿಲ್ಲ ಎಂದು ಸುಪ್ರೀಂ ಕೋರ್ಟ್ ಪೀಠವು ಹೇಳಿದ್ದು, ಮೂರು ತಿಂಗಳೊಳಗೆ ಹೊಸ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.