ಫಾಝಿಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿ, ರೌಡಿ ಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಮಂದಿ ಆರೋಪಿತರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು.
ಮಂಗಳೂರಿನಲ್ಲಿ ಶನಿವಾರ ಮಾಧ್ಯಮಗಳಿಗೆ ವಿಷಯ ತಿಳಿಸಿದ ಅವರು, “ಸದ್ಯ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಕೊಲೆಗೆ ಕಾರಣವಾದ ಅಂಶಗಳ ಬಗ್ಗೆ ಪೊಲೀಸರಿಂದ ತನಿಖೆ ನಡೆಯುತ್ತಿದೆ. ಸುಹಾಸ್ ಕೇಸಿನಲ್ಲಿ 8 ಮಂದಿಯನ್ನು ಬಂಧಿಸಲಾಗಿದ್ದರೆ, ವಯನಾಡು ಮೂಲದ ಅಶ್ರಫ್ ಕೊಲೆ ಪ್ರಕರಣದಲ್ಲಿ 21 ಮಂದಿಯನ್ನು ಬಂಧಿಸಲಾಗಿದೆ” ಎಂದು ಹೇಳಿದರು.
“ದಕ್ಷಿಣ ಕನ್ನಡ ಜಿಲ್ಲೆಯ ಶಾಂತಿ ಕದಡಲು ಬಿಡುವುದಿಲ್ಲ. ಕಾನೂನು ಚೌಕಟ್ಟಿನಲ್ಲಿ ಏನು ಮಾಡಬೇಕೋ ಅದನ್ನು ಮಾಡುತ್ತೇವೆ. ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಕೋಮು ಸಂಘರ್ಷದ ಹಿಂದೆ ಅನೇಕ ಶಕ್ತಿಗಳು ಅಡಗಿದ್ದು, ಅವುಗಳನ್ನು ಮಟ್ಟ ಹಾಕುತ್ತೇವೆ,” ಎಂದು ಎಚ್ಚರಿಸಿದರು.
ಆಂಟಿ ಕಮ್ಯೂನಲ್ ಪೋರ್ಸ್
ಕರಾವಳಿಯಲ್ಲಿ ಶಾಂತಿ ಕಾಪಾಡಲು ಪಣ ತೊಡುವುದಾಗಿ ಹೇಳಿರುವ ಗೃಹ ಸಚಿವರು, “ಆಂಟಿ ನಕ್ಸಲ್ ಫೋರ್ಸ್ ಮಾದರಿಯಲ್ಲಿ ಆಂಟಿ ಕಮ್ಯೂನಲ್ ಪೋರ್ಸ್ ರಚನೆ ಮಾಡಲಾಗುವುದು” ಎಂದು ಗೃಹ ಸಚಿವರು ಇದೇ ವೇಳೆ ಮಾಹಿತಿ ನೀಡಿದ್ದಾರೆ.
“ಸುಹಾಸ್ ಶೆಟ್ಟಿ ಕೊಲೆಗಾರರನ್ನು ಬಂಧಿಸಲು ಪೊಲೀಸರು ಐದು ವಿಶೇಷ ತಂಡಗಳನ್ನು ರಚಿಸಿದ್ದರು. ಬಂಧಿತರೆಲ್ಲರನ್ನೂ ವಿಚಾರಣೆ ನಡೆಸಲಾಗುತ್ತಿದ್ದು, ಇವರನ್ನು ದಕ್ಷಿಣ ಕನ್ನಡದ ವಿವಿಧೆಡೆ ಬಂಧಿಸಲಾಗಿದೆ” ಎಂದು ಹೇಳಿದರು.