ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಉಪನಗರ ವರ್ತುಲ ರಸ್ತೆ (STRR) ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸುವ ಹಾಗೂ ಭೂಮಿ ಕಳೆದುಕೊಂಡಿರುವ ರೈತರಿಗೆ ತ್ವರಿತವಾಗಿ ಪರಿಹಾರ ನೀಡುವ ಬಗ್ಗೆ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದ ಮಟ್ಟದಲ್ಲಿ ನಡೆಸಿರುವ ಪ್ರಯತ್ನಗಳು ಫಲಪ್ರದವಾಗುವ ದಿಕ್ಕಿನಲಿವೆ.
ಈ ಬಗ್ಗೆ ಸಚಿವ ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಗೂ ಕೇಂದ್ರದ ಭೂ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವರಾದ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದು ವಿನಂತಿಸಿದ್ದರು. ಅಲ್ಲದೆ, ಹಲವು ಬಾರಿ ನವದೆಹಲಿಯಲ್ಲಿ ಇಬ್ಬರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸಚಿವ ಕುಮಾರಸ್ವಾಮಿ ಅವರು; ಸದರಿ ಯೋಜನೆಯು ಅನುಮೋದನೆಗಾಗಿ ಪರಿಗಣನೆಯಲ್ಲಿದೆ. ಯೋಜನೆಯ ಹೂಡಿಕೆಗೆ ಅನುಮೋದನೆ ನೀಡಿದ ನಂತರವೇ ಪರಿಹಾರ ವಿತರಣೆಯನ್ನು ಪುನರಾರಂಭಿಸಬಹುದು ಎಂದು ಹೆದ್ದಾರಿ ಸಚಿವರು ಪತ್ರ ಮುಖೇನ ನನಗೆ ತಿಳಿಸಿದ್ದಾರೆ. ಹೀಗಾಗಿ ಭೂಮಿ ಕಳೆದುಕೊಂಡಿರುವ ರೈತರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 948Aಗೆ ಸಂಪರ್ಕ ಕಲ್ಪಿಸುವ ನೆಲಮಂಗಲ ತಾಲೂಕಿನ ತಾಲೂಕಿನ ಓಬಳಾಪುರದಿಂದ ರಾಮನಗರ ತಾಲೂಕಿನ ಕುಣಗಾಲುವರೆಗೆ ಹಾಗೂ ರಾಮನಗರದ ಕುಣಗಾಲು ನಿಂದ ಹೊಸೂರು ತಾಲೂಕಿನ ಎಸ್. ಮುದುಗದಪಲ್ಲಿವರೆಗೆ ಉಪನಗರ ವರ್ತುಲ ರಸ್ತೆ ನಿರ್ಮಾಣ ಯೋಜನೆಯನ್ನು ಅನುಷ್ಠಾನಗೊಳಿಸುವ ಹಾಗೂ ರೈತರಿಗೆ ಭೂ ಪರಿಹಾರ ನೀಡುವ ಬಗ್ಗೆ ಸಚಿವ ಕುಮಾರಸ್ವಾಮಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದರು.
ಈಗಾಗಲೇ 2023ರವರೆಗೆ ಮೇಲಿನ ಎರಡು ವಿಭಾಗಗಳಲ್ಲಿ ₹216.92 ಕೋಟಿ ಹಾಗೂ ₹52.70 ಕೋಟಿ ಭೂ ಪರಿಹಾರವನ್ನು ವಿತರಣೆ ಮಾಡಲಾಗಿದೆ ಎಂಬ ಅಂಶವನ್ನು ಗಡ್ಕರಿ ಅವರು ತಮಗೆ ಬರೆದಿರುವ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ ಎಂದು ಸಚಿವರಾದ ಕುಮಾರಸ್ವಾಮಿ ಅವರು ಮಾಹಿತಿ ನೀಡಿದ್ದಾರೆ
ಪ್ರಧಾನಿಗಳಿಗೂ ಪತ್ರ ಬರೆದಿದ್ದ ಕೇಂದ್ರ ಸಚಿವರು
ಬೆಂಗಳೂರು ಗ್ರಾಮೀಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮಾಗಡಿ, ರಾಮನಗರ, ಕನಕಪುರ, ಹಾರೋಹಳ್ಳಿ ಮತ್ತು ಆನೇಕಲ್ ಪ್ರದೇಶಗಳಲ್ಲಿ ಉಪನಗರ ಹೊರವರ್ತುಲ ರಸ್ತೆ (STRR-ಪಶ್ಚಿಮ ಭಾಗ) ಯೋಜನೆಗಾಗಿ ಭೂಮಿ ಕಳೆದುಕೊಂಡಿರುವ ಸಾವಿರಾರು ರೈತರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಪ್ರಧಾನಿಗಳಿಗೆ ಬರೆದಿರುವ ಪತ್ರದಲ್ಲಿ ಕೇಂದ್ರ ಸಚಿವರು ಗಮನ ಸೆಳೆದಿದ್ದರು.
2021ರಲ್ಲಿಯೇ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭವಾಗಿದೆ. ಆದರೆ ಭೂಮಿ ಕಳೆದುಕೊಂಡ ರೈತರಿಗೆ ಇನ್ನೂ ಪರಿಹಾರ ವಿತರಣೆ ಪೂರ್ಣಗೊಂಡಿಲ್ಲ, ಇದು ರೈತರಿಗೆ ತೀವ್ರ ತೊಂದರೆ ಉಂಟು ಮಾಡಿದೆ. ಅಲ್ಲದೆ, ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡರು ಕೂಡ ತಮಗೆ ಪತ್ರ ಬರೆದು ಈ ಬಗ್ಗೆ ವಿನಂತಿಸಿದ್ದಾರೆ ಎಂಬ ಅಂಶವನ್ನು ಸಚಿವರು ಪ್ರಧಾನಿಗಳಿಗೆ ಬರೆದಿದ್ದ ಪತ್ರದಲ್ಲಿ ಉಲ್ಲೇಖಿಸಿದ್ದರು.
ಯೋಜನೆಯ ಅನುಷ್ಠಾನ ಮತ್ತು ಭೂ ಪರಿಹಾರ ವಿತರಣೆಯ ಬಗ್ಗೆ ಯಾರೂ ಆತಂಕ ಪಡಬೇಕಿಲ್ಲ. ಪ್ರಧಾನಿಗಳು ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸುವ ವಿಶ್ವಾಸ ಇದೆ. ಈ ಬಗ್ಗೆ ನಾನು ಪ್ರಧಾನಿಗಳು ಹಾಗೂ ಹೆದ್ದಾರಿ ಸಚಿವರಿಗೆ ಪತ್ರ ಬರೆದಿರುವುದು ಮಾತ್ರವಲ್ಲದೆ, ಖುದ್ದು ಭೇಟಿಯಾಗಿ ಚರ್ಚೆ ನಡೆಸಿದ್ದೇನೆ ಎಂದು ಸಚಿವ ಕುಮಾರಸ್ವಾಮಿ ಅವರು ಮಾಹಿತಿ ನೀಡಿದ್ದಾರೆ.


