ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಿ ಕೆ ಸುರೇಶ್ ಅವರು ನೂರಕ್ಕೆ ನೂರು ಈ ಬಾರಿಯೂ ಗೆಲ್ಲುತ್ತಾರೆ. ಪ್ರತಿನಿತ್ಯ ನನಗೆ ಮಾಹಿತಿ ಬರುತ್ತಿದೆ. ಈ ಆಧಾರದಲ್ಲಿ ಹೇಳುತ್ತೇನೆ. ಸುರೇಶ್ ಅವರು ಗೆಲುವು ಶತಸಿದ್ದ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಿ ಕೆ ಸುರೇಶ್ ನಾಮಪತ್ರ ಸಲ್ಲಿಕೆ ಸಭೆ ಉದ್ದೇಶಿಸಿ ರಾಮನಗರದಲ್ಲಿ ಮಾತನಾಡಿದರು.
“ಡಿ ಕೆ ಸುರೇಶ್ ಕ್ಷೇತ್ರದ ಅಭಿವೃದ್ಧಿಗೆ ಮತ್ತು ಜಿಲ್ಲೆಯ ಪ್ರಗತಿಗೆ ನಿರಂತರವಾಗಿ ದುಡಿಯುತ್ತಾರೆ. ಈ ಕಾರಣಕ್ಕೆ ಕಾಂಗ್ರೆಸ್ ಮತ್ತೆ ಇವರನ್ನು ಅಭ್ಯರ್ಥಿಯನ್ನಾಗಿಸಿದೆ. ಇವರನ್ನು ನಿಮ್ಮ ಪ್ರತಿನಿಧಿಯಾಗಿ ಗೆಲ್ಲಿಸಿ ದೆಹಲಿಗೆ ಕಳುಹಿಸಿದರೆ ಇವರು ನಮ್ಮ ದ್ವನಿಯಾಗಿ ಕೆಲಸ ಮಾಡುತ್ತಾರೆ” ಎಂದರು.
“ಸರ್ಕಾರ ಬಂದ ದಿನದಿಂದಲೇ ನಾವು ಕೊಟ್ಟ ಮಾತನ್ನು ಈಡೇರಿಸುವ ಕೆಲಸ ಶುರು ಮಾಡಿದೆವು. ಎಂಟೇ ತಿಂಗಳಲ್ಲಿ ಐದು ಗ್ಯಾರಂಟಿ ಜಾರಿ ಮಾಡಿದ್ದೇವೆ. ಬಿಜೆಪಿ ಇವತ್ತಿನವರೆಗೂ ಕೊಟ್ಟ ಮಾತಿನಲ್ಲಿ ಒಂದನ್ನೂ ಈಡೇರಿಸಿಲ್ಲ. ಹೀಗಾಗಿ ಬಿಜೆಪಿಗೆ ಮತ ಹಾಕಿದರೆ ಏನು ಪ್ರಯೋಜನ” ಎಂದು ಪ್ರಶ್ನಿಸಿಕೊಳ್ಳಿ ಎಂದರು.
“ಬಿಜೆಪಿ-ಜೆಡಿಎಸ್ ಕಾರ್ಯಕರ್ತರು, ಕುಟುಂಬಗಳಿಗೂ ನಮ್ಮ ಸರ್ಕಾರ ಹಣ ಜಮೆ ಮಾಡುತ್ತಿದೆ. ಪಕ್ಷ, ಜಾತಿ, ಧರ್ಮ ಯಾವುದನ್ನೂ ನೋಡದೆ ಇಡೀ ನಾಡಿನ ಜನತೆಗೆ ಅವರ ಕುಟುಂಬಗಳಿಗೆ ಉಚಿತ ಅಕ್ಕಿ, ಉಚಿತ ವಿದ್ಯುತ್ ಜತೆಗೆ ಮಹಿಳೆಯರ ಖಾತೆಗೆ 2 ಸಾವಿರ ರೂಪಾಯಿ, ನಿರುದ್ಯೋಗಿಗಳ ಖಾತೆಗೆ ಭತ್ಯೆಯನ್ನು ಜಮೆ ಮಾಡುತ್ತಿದೆ. ಹೀಗೆ ಕಾಂಗ್ರೆಸ್ ಪಕ್ಷ ಪ್ರತಿಯೊಬ್ಬ ಮತದಾರರ ನಂಬಿಕೆ ಉಳಿಸಿಕೊಂಡಿದೆ” ಎಂದು ವಿವರಿಸಿದರು.
“ಬಿಜೆಪಿ ಸರ್ಕಾರ ಇದ್ದಾಗಲೂ ನೀವು ತೆರಿಗೆ ಕಟ್ಟಿದ್ದೀರಿ. ಆದರೆ ಬಿಜೆಪಿ ನಿಮ್ಮ ತೆರಿಗೆ ಹಣವನ್ನು ನಿಮಗಾಗಿ ಖರ್ಚು ಮಾಡಲಿಲ್ಲ. ಡೀಸೆಲ್, ಪೆಟ್ರೋಲ್, ಗ್ಯಾಸ್, ರಸಗೊಬ್ಬರ ಬೆಲೆಯನ್ನು ವಿಪರೀತ ಹೆಚ್ಚಿಸಿ ನಿಮ್ಮ ತೆರಿಗೆ ಹಣವನ್ನೂ ನಿಮಗಾಗಿ ಖರ್ಚು ಮಾಡಲಿಲ್ಲ. ಆದರೆ ನಾವು ಪ್ರತೀ ತಿಂಗಳು 4 ರಿಂದ 5 ಸಾವಿರ ರೂಪಾಯಿಯನ್ನು ಪ್ರತಿ ಅರ್ಹ ಕುಟುಂಬಗಳಿಗೆ ನಮ್ಮ ಕಾಂಗ್ರೆಸ್ ಸರ್ಕಾರ ನೀಡುತ್ತಿದೆ. ಕಾಂಗ್ರೆಸ್ ಅಂದರೆ ಬಡವರ, ಮಧ್ಯಮ ವರ್ಗದವರ ಪರವಾಗಿ ಕೆಲಸ ಮಾಡುವ” ಪಕ್ಷ ಎಂದರು.
“ಹೀಗಾಗಿ ಜನರ ನಡುವೆ ನಿಂತು ಜನರ ದಿನನಿತ್ಯದ ಕಷ್ಟ ಸುಖಗಳಿಗೆ ಸ್ಪಂದಿಸುವ ಡಿ.ಕೆ.ಸುರೇಶ್ ಬೇಕೊ ಅಥವಾ ವೈಟ್ ಕಾಲರ್ ಡಾ.ಮಂಜುನಾಥ್ ಬೇಕೋ ಎನ್ನುವುದನ್ನು ಕ್ಷೇತ್ರದ ಮತದಾರರು ನಿರ್ಧರಿಸಿ ಆಗಿದೆ. ಡಿ.ಕೆ.ಸುರೇಶ್ ಅವರನ್ನು ಜನ ಗೆಲ್ಲಿಸಲು ತೀರ್ಮಾನಿಸಿ” ಆಗಿದೆ ಎಂದರು.
“ಕುಮಾರಸ್ವಾಮಿ ಅವರು ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದಾಗ, ಮುಖ್ಯಮಂತ್ರಿ ಆಗಿದ್ದಾಗ ರಾಮನಗರ ಜಿಲ್ಲೆಯನ್ನು ಏಕೆ ಕಡೆಸಿದ್ದರು ಎನ್ನುವುದಕ್ಕೆ ಜನರಿಗೆ ಉತ್ತರಿಸಲಿ” ಎಂದು ಆಗ್ರಹಿಸಿದರು.
ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಎಂ.ಸಿ.ಸುಧಾಕರ್, ಮಂಕಾಳ ವೈದ್ಯ , ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಬಿ.ವಿ.ಶ್ರೀನಿವಾಸ್ , ವಿಧಾನ ಪರಿಷತ್ ಸದಸ್ಯ ಸುದಾಮ ದಾಸ್ ಸೇರಿ ರಾಮನಗರ ಜಿಲ್ಲೆಯ ಕಾಂಗ್ರೆಸ್ ಶಾಸಕರುಗಳು ಮತ್ತು ಜಿಲ್ಲಾ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.