ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಬಿಜೆಪಿಯಲ್ಲಿ ಬಂಡಾಯ ಸಾರಿ, ಪಕ್ಷೇತರ ಅಭ್ಯರ್ಥಿಯಾಗಿ ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದಾರೆ.
ಶುಕ್ರವಾರ ಬೃಹತ್ ಮೆರವಣಿಗೆ ಮುಖಾಂತರ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ಉಮೇದುವಾರಿಕೆ ಸಲ್ಲಿಸಿದರು. ಪುತ್ರ ಕಾಂತೇಶ್ಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡು, ಬಿಎಸ್ವೈ ಕುಟುಂಬ ರಾಜಕಾರಣ ವಿರುದ್ಧ ತೊಡೆತಟ್ಟಿದ್ದಾರೆ.
“ರಾಜ್ಯ ಬಿಜೆಪಿಯಲ್ಲಿನ ಕುಟುಂಬ ರಾಜಕಾರಣದ ವಿರೋಧಿಸಿ ಸ್ಪರ್ಧೆ ಮಾಡುತ್ತಿದ್ದೇನೆ. ಈ ಲೋಕಸಭೆ ಚುನಾವಣೆಯಲ್ಲಿ ಗೆದ್ದರೆ ನಾನು ನರೇಂದ್ರ ಮೋದಿಯವರಿಗೆ ಬೆಂಬಲ ನೀಡುತ್ತೇನೆ” ಎಂದು ಕೆ ಎಸ್ ಈಶ್ವರಪ್ಪ ಈಗಾಗಲೆ ಹೇಳಿದ್ದಾರೆ.
“ಶಿವಮೊಗ್ಗ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ಪ್ರತಿ ಮನೆ ಮನೆಗೆ ಹೋಗಿ ಈಶ್ವರಪ್ಪ ಏಕೆ ಚುನಾವಣೆಗೆ ನಿಂತಿದ್ದಾರೆ, ಏನು ಅನ್ಯಾಯ ಆಗಿದೆ ಅಂತ ನಮ್ಮ ಕಾರ್ಯಕರ್ತರು ತಿಳಿಸುತ್ತಾರೆ. ಅಪ್ಪ ಮಕ್ಕಳ ಕೈಯಲ್ಲಿ ಪಕ್ಷ ಏಕೆ ಇದೆ? ಚುನಾವಣೆ ಬಳಿಕ ನಂತರ ಬಿಜೆಪಿಯಲ್ಲಿ ಕೆಲವು ಬದಲಾವಣೆ ಆಗುತ್ತದೆ. ಪಕ್ಷ ಶುದ್ದೀಕರಣ ಆಗುವ ವಿಶ್ವಾಸ ಇದೆ” ಎಂದು ನಾಮಪತ್ರ ಸಲ್ಲಿಕೆ ಬಳಿಕ ಕೆ ಎಸ್ ಈಶ್ವರಪ್ಪ ಸುದ್ದಿಗಾರರಿಗೆ ತಿಳಿಸಿದರು.