ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಮಾತನಾಡುವಾಗ ಸಿಎಂ ಸಿದ್ದರಾಮಯ್ಯ ಅವರನ್ನು ‘ಸಿದ್ರಾಮುಲ್ಲಾ ಖಾನ್’ ಅಂತ ಮತ್ತೆ ಕರೆದಿದ್ದು, ಕಾಂಗ್ರೆಸ್ ನಾಯಕರ ಕಣ್ಣು ಕೆಂಪಾಗಿಸಿದೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಅನಂತಕುಮಾರ್ ಹೆಗಡೆಯನ್ನು ತೀವ್ರ ತರಾಟೆಗೆ ತಗೆದುಕೊಂಡಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಣಾವರ ಗ್ರಾಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, “ಯಾರಾದರೂ ಸರ್ಕಾರಿ ನೌಕರರು ಸಂಬಳ ಸಿಕ್ಕಿಲ್ಲ ಎಂದು ಹೇಳಿದ್ದಾರಾ? ಅಥವಾ ಕಾಂಗ್ರೆಸ್ ಸರ್ಕಾರದಲ್ಲಿ ಸಂಬಳ ಸಿಕ್ಕಿಲ್ಲ ಎಂದು ಹೇಳಿದ್ದಾರಾ? ಸುಮ್ಮನೇ ಬೊಗಳೆ ಬಿಡುವ ಅನಂತಕುಮಾರ್ ಹೆಗಡೆ ಸಂಸದನಾಗಲು ಯೋಗ್ಯನಾ?” ಎಂದು ಕಿಡಿಕಾರಿದರು.
“ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಸಿದ್ದರಾಮುಲ್ಲಾ ಖಾನ್ ಬಳಿ ಹಣವಿಲ್ಲ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹೆಗಡೆ ಆರೋಪಿಸಿದ್ದರು. ಇದಕ್ಕೆ ಸಿದ್ದರಾಮಯ್ಯ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. “ನನಗೆ ಸಿದ್ರಾಮುಲ್ಲಾ ಖಾನ್ ಎಂದು ಏಕೆ ಕರೆಯುತ್ತಾರೆ? ಅವರು ಅಲ್ಪಸಂಖ್ಯಾತರ ವಿರುದ್ಧ ಇದ್ದಾರೆ” ಎಂದರು.
“ಟ್ಯಾಕ್ಸ್ ಹಂಚಿಕೆ ವಿಚಾರದಲ್ಲಿ ಆಂಧ್ರಪ್ರದೇಶ, ಕೇರಳ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ, ಆದರೆ ರಾಜ್ಯ ಅಪಪ್ರಚಾರ ಮಾಡುತ್ತಿದೆ ಎಂಬ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗ್ಡೆ ಹೇಳಿಕೆ ವಿಚಾರವಾಗಿ ಕೇರಳದವರು ದೆಹಲಿಗೆ ಯಾಕೆ ಹೋಗಿದ್ದರು, ಅವರಿಗೆ ಬೆಂಬಲ ಮಾಡಿ ತಮಿಳುನಾಡಿನವರು ಏಕೆ ಹೋಗಿದ್ದರು” ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಇಂಡಿ ತಾಲ್ಲೂಕಿನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿ, ” ದೀಪಾ ಆರುವ ಮುಂಚೆ ಜೋರಾಗಿ ಉರಿಯುತ್ತದೆ. ಹಾಗೇ ಅನಂತಕುಮಾರ ಹೆಗಡೆ ರಾಜಕೀಯವಾಗಿ ಕಳೆದು ಹೋಗುವ ಮುನ್ನ ಅವಾಚ್ಯ ಶಬ್ದಗಳಿಂದ ಮಾತನಾಡುತ್ತಿದ್ದಾರೆ. ತಮ್ಮ ಅಸ್ತಿತ್ವವನ್ನು ತಾವೇ ಕಳೆದುಕೊಳ್ಳುತ್ತಿರುವುದು ಪ್ರಾರಂಭವಾಗಿದೆ. ವಿನಾಶ ಕಾಲೇ ವಿಪರೀತ ಬುದ್ಧಿ” ಎಂದು ತಿರುಗೇಟು ನೀಡಿದರು.
ಅನಂತಕುಮಾರ್ ಹೆಗಡೆ ವಿರುದ್ಧ ಕಾನೂನು ಸಚಿವ ಹೆಚ್ ಕೆ ಪಾಟೀಲ್ ಮಾತನಾಡಿದ್ದು, “ಯಾವ ಶಾಸಕರು ಪಗಾರ ಇಲ್ಲದೆ ಇದ್ದಾರೆ ಹೇಳಿ? ಮಾಜಿ ಶಾಸಕರು ಪಿಂಚಣಿ ಪಡೆಯುದ್ದಾರೆ. 2 ಸಾವಿರ ರೂಪಾಯಿ ಮಹಿಳೆಯರ ಖಾತೆಗೆ ಬೀಳುತ್ತಿದೆಯಲ್ಲ, ಅದನ್ನು ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ” ಎಂದರು.
ಸಿದ್ರಾಮುಲ್ಲಾಖಾನ್ ಪದಬಳಕೆ ವಿಚಾರವಾಗಿ ಪ್ರತಿಕ್ರಿಯಿಸಿ, “ಸಮಾಧಾನ ಕೆದಕಿ ಅಗೌರವದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಅದು ನಿಮ್ಮ ಮೈಮೇಲೆ ಬರುತ್ತದೆ. ಸಾರ್ವಜನಿಕ ಬದುಕಿನಲ್ಲಿರುವವರು ಇಂಥ ಭಾಷೆ ಬಳಸಬಾರದು” ಎಂದು ಹೇಳಿದರು.
ಸಚಿವ ಸಂತೋಷ್ ಲಾಡ್ ಈ ಬಗ್ಗೆ ಮಾತನಾಡಿ, “ಸಿದ್ದರಾಮಯ್ಯ ಅವರು ನಮ್ಮ ದೇಶದವರು ಅಲ್ವಾ? ಕರ್ನಾಟಕದವರು ಅಲ್ವಾ? ದೇಶಕ್ಕೆ ಅವರ ಕೊಡುಗೆ ಏನಿಲ್ವಾ? ಇನ್ನು ರೈತರ ಹೋರಾಟ ಯಾವುದು? ಖಲಿಸ್ತಾನಿ ಹೋರಾಟ ಯಾವುದು? ಅನಂತಕುಮಾರ್ ಅವರನ್ನೇ ಕೇಳಬೇಕು. ಶಿಕ್ಷಣ, ಆರೋಗ್ಯದಲ್ಲಿ ಗುಜರಾತ್ ಮಾಡೆಲ್ ಎಷ್ಟಿದೆ ಗೊತ್ತಾ? ಅಭಿವೃದ್ಧಿ, ಮೂಲಭೂತ ಸೌಕರ್ಯಗಳ ಬಗ್ಗೆ ಮಾತನಾಡಬೇಕು. ಸಿಎಂ ಸಿದ್ದರಾಮಯ್ಯ ಅವರಿಗೆ ಸಿದ್ದರಾಮುಲ್ಲಾ ಖಾನ್ ಮತ್ತು ದೆಹಲಿಯಲ್ಲಿ ಹೋರಾಟ ಮಾಡುತ್ತಿರುವ ರೈತರಿಗೆ ಖಲಕಿಸ್ತಾನ ದೇಶ ದ್ರೋಹಿಗಳು ಅನ್ನುವುದು ಸಂಸದರ ಯೋಗ್ಯತೆಯನ್ನು ತೋರಿಸುತ್ತದೆ” ಎಂದು ತಿರುಗೇಟು ನೀಡಿದರು.
ರೈತರು ಟೆರರಿಸ್ಟ್ಗಳಾದರೆ ಕೇಂದ್ರ ಸಚಿವರು ಸಭೆ ಯಾಕೆ ಮಾಡಿದರು? ಪಂಜಾಬ್ ರೈತರು ಟೆರರಿಸ್ಟ್ಗಳು ಎಂಬ ಅನಂತ್ ಕುಮಾರ್ ಹೆಗಡೆ ಹೇಳಿಕೆ ವಿಚಾರವಾಗಿ ಮಾತನಾಡಿದ ಸಚಿವ ಶಿವಾನಂದ ಪಾಟೀಲ್, “ಅನಂತ್ ಕುಮಾರ್ ಹೆಗಡೆ ಏನಾದರೂ ಅಲ್ಲಿಗೆ ಹೋಗಿ ನೋಡಿದ್ದಾರಾ? ಅವರು ಟೆರ್ರಿಸ್ಟ್ಗಳಾದರೆ ಕೇಂದ್ರ ಸಚಿವರು ಯಾಕೆ ಅವರ ಜೊತೆ ಸಭೆ ನಡೆಸಿದರು? ಆರಾರು ಮಂದಿ ಕೇಂದ್ರ ಸಚಿವರು ಮೂರು ಮೂರು ಸಭೆ ಯಾಕೆ ಮಾಡಿದರು” ಎಂದು ಪ್ರಶ್ನಿಸಿದರು.
ಹೆಗಡೆಯನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸಬೇಕು
ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಮಾತನಾಡಿದ ಎಂಬಿ ಪಾಟೀಲ್, “ಅನಂತಕುಮಾರ್ ಹೆಗಡೆಯನ್ನ ಮೆಂಟಲ್ ಆಸ್ಪತ್ರೆಗೆ ಸೇರಿಸಬೇಕು. ಇವರು ಐದು ವರ್ಷ ಕಾಣೆಯಾಗಿದ್ದರು. ಎಲ್ಲಿಯೂ ಇರಲಿಲ್ಲ, ಮತದಾರರಿಗೆ ಮುಖ ತೋರಿಸಿರಲಿಲ್ಲ. ಚುನಾವಣೆ ಬಂದ ಕಾರಣ ಹಿಂದೂ ಮುಸ್ಲಿಂ ಹೇಳಿಕೆ ಕೊಡುವ ಮೂಲಕ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲು ಬಯಸಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
“ಈ ಹಿಂದೆ ಸಂವಿಧಾನ ತಿರುಚಬೇಕೆಂದು ಹೇಳಿದ್ದರು. ಇಂಥವರ ಬಗ್ಗೆ ಬಹಳ ಮಾತನಾಡುವ ಅವಶ್ಯಕತೆಯಿಲ್ಲ. ಇದನ್ನು ಯಾರೂ ಗಂಭೀರವಾಗಿ ಪರಿಗಣಿಸಲ್ಲ. ಇದು ಚುನಾವಣೆ ಗಿಮಿಕ್” ಎಂದು ಕುಟುಕಿದರು.