ಹಾಸನ ಜಿಲ್ಲೆಯ ಅರಣ್ಯದಂಚಿನ ಗ್ರಾಮಗಳ ಜನರಿಗೆ ಆತಂಕ ಸೃಷ್ಟಿಸಿದ್ದ ಎರಡು ಕಾಡಾನೆಗಳನ್ನು ಸೆರೆಹಿಡಿದು ಬೇರೆಡೆಗೆ ಸ್ಥಳಾಂತರಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
“ಸವಾಲಿನ ಕೆಲಸವನ್ನು ಕೈಗೆತ್ತಿಕೊಂಡು, ಹಗಲಿರುಳೆನ್ನದೆ ಶ್ರಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಇತರೆ ಎಲ್ಲಾ ಸಿಬ್ಬಂದಿಗಳಿಗೆ ಅಭಿನಂದನೆಗಳು. ನಿಮ್ಮ ಸೇವೆ ಮತ್ತು ಶ್ರಮದಿಂದ ಇಂದು ಹಾಸನದ ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ” ಎಂದು ಎಕ್ಸ್ ತಾಣದಲ್ಲಿ ಬರೆದುಕೊಂಡಿದ್ದಾರೆ.
“ವನ್ಯಜೀವಿ – ಮಾನವ ಸಂಘರ್ಷದ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ನಿರಂತರ ಕೆಲಸ ಮಾಡುತ್ತಿದೆ. ಆನೆಗಳ ಸಂಖ್ಯೆ ಹೆಚ್ಚಿರುವ ಜಿಲ್ಲೆಗಳಲ್ಲಿ ರೈಲ್ವೆ ಹಳಿಗಳ ಬೇಲಿ ಹಾಕುವುದು, ಕಾಡು ಪ್ರಾಣಿಗಳಿಗೆ ಅರಣ್ಯದಲ್ಲೇ ಮೇವು, ನೀರು ಒದಗಿಸುವತ್ತ ನಾವು ಆದ್ಯತೆ ನೀಡಿದ್ದೇವೆ. ಮುಂದಿನ ಕೆಲ ಸಮಯದಲ್ಲಿ ಈ ಸಮಸ್ಯೆಗೆ ಕರ್ನಾಟಕ ಶಾಶ್ವತ ಪರಿಹಾರ ಕಂಡುಕೊಳ್ಳಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.