Homeಕರ್ನಾಟಕಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ ಸಿ ಬಯ್ಯಾರೆಡ್ಡಿ ನಿಧನ

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ ಸಿ ಬಯ್ಯಾರೆಡ್ಡಿ ನಿಧನ

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಹಾಗೂ ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಜಿ.ಸಿ.ಬಯ್ಯಾರೆಡ್ಡಿ ನಿಧನರಾಗಿದ್ದಾರೆ. ಅವರಿಗೆ ಪತ್ನಿ ಮತ್ತು ಪುತ್ರಿ ಇದ್ದಾರೆ.

ಹಲವು ವರ್ಷಗಳಿಂದ ಅವರಿಗೆ ಉಸಿರಾಟ ಸಮಸ್ಯೆ ಇತ್ತು. ಇತ್ತೀಚೆಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೂ ದಾಖಲಾಗಿದ್ದರು. ತುಮಕೂರಿನಲ್ಲಿ ಇತ್ತೀಚೆಗೆ ನಡೆದ ಸಿಪಿಎಂ ರಾಜ್ಯ ಸಮ್ಮೇಳನದಲ್ಲಿ ಅವರನ್ನು ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾಗಿ ಆಯ್ಕೆ ಮಾಡಲಾಗಿತ್ತು.

ಶ್ವಾಸಕೋಶದ ಸೋಂಕಿನಿಂದ ಗುಣಮುಖರಾಗುವ ನಿರೀಕ್ಷೆ ಹುಸಿಯಾಗಿ ಶನಿವಾರ ಬೆಳಿಗ್ಗೆ 3-30 ಗಂಟೆ ಸಮಯದಲ್ಲಿ ಹೃದಯಾಘಾತ ಉಂಟಾಗಿ ನಿಧನರಾದರು.ಅವರಿಗೆ 64 ವರ್ಷ ವಯಸ್ಸಾಗಿತ್ತು.

10-11-1960ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಗಡಿಗಿವಾರಪಲ್ಲಿ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ಚೌಡಪ್ಪ ಹಾಗೂ ಬಯ್ಯಮ್ಮ ರವರ ನಾಲ್ಕನೆಯ ಮಗನಾಗಿ ಜನಿಸಿದ ಕಾಂ. ಜಿಸಿ ಬಯ್ಯಾರೆಡ್ಡಿ ರವರು ಬಾಲ್ಯದಿಂದಲೇ ಹೋರಾಟದ ಮನೋಭಾವ ಇದ್ದವರು .

1980 ರಲ್ಲಿ ಚಿಂತಾಮಣಿ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಯಾಗಿರುವಾಗಲೇ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ ಎಫ್ ಐ) ಸಂಘಟನೆಯ ಸೆಳೆತಕ್ಕೆ ಒಳಗಾಗಿ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟ ಕಾಂ.ಜಿಸಿ ಬಯ್ಯಾರೆಡ್ಡಿ ರವರು ಸಮರಶೀಲ ವಿದ್ಯಾರ್ಥಿ ನಾಯಕರಾಗಿ ಬೆಳೆದು ಬಂದರು. ಸುಪ್ರಸಿದ್ಧ ನವಲಗುಂದ-ನರಗುಂದ ರೈತ ಹೋರಾಟದ ಗೋಲಿಬಾರ್ ಖಂಡಿಸಿ ಚಿಂತಾಮಣಿಯಲ್ಲಿ ಬಹು ದೊಡ್ಡ ವಿದ್ಯಾರ್ಥಿ ಪ್ರತಿಭಟನೆ ಸಂಘಟಿಸಿದ್ದರು. ಈ ಪ್ರತಿಭಟನೆಯ ಮೇಲೂ ಗೋಲಿಬಾರ್ ಆಗಿತ್ತು. ಉತ್ತಮ ನಾಯಕತ್ವ ಗುಣ ಹಾಗೂ ಸಮರಶೀಲ ಹೋರಾಟದಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಕಾಂ.ಜಿಸಿ ಬಯ್ಯಾರೆಡ್ಡಿ ರವರು ಅವಿಭಜಿತ ಕೋಲಾರ ಜಿಲ್ಲೆಯ ಎಸ್ ಎಫ್ ಐ ಜಿಲ್ಲಾ ನಾಯಕರಾಗಿ ನಂತರ 1987 ರಲ್ಲಿ ರಾಜ್ಯಾಧ್ಯಕ್ಷರಾಗಿದ್ದರು.

ವಿದ್ಯಾರ್ಥಿ ಚಳವಳಿ ಯಿಂದ ಬಿಡುಗಡೆ ಗೊಂಡ ನಂತರ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ರೈತ ಚಳವಳಿ ಕಟ್ಟಲು ಸಂಪೂರ್ಣವಾಗಿ ತೊಡಗಿಸಿಕೊಂಡ ಕಾಂ.ಜಿಸಿ ಬಯ್ಯಾರೆಡ್ಡಿ ರವರು 2000ನೇ ಇಸವಿಯಲ್ಲಿ ಗುಲ್ಬರ್ಗದಲ್ಲಿ ನಡೆದ ಹನ್ನೆರಡನೇ ರಾಜ್ಯ ಸಮ್ಮೇಳನದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆಗಿ ಆಯ್ಕೆಗೊಂಡು ಇಡೀ ರಾಜ್ಯದಾದ್ಯಂತ ಸಾವಿರಾರು ಹೋರಾಟಗಳಲ್ಲಿ ಭಾಗವಹಿಸಿ ನೂರಾರು ಹೋರಾಟಗಳನ್ನು ರೂಪಿಸುವ ಮೂಲಕ ರಾಜ್ಯದ ಜನಪ್ರಿಯ ರೈತ ನಾಯಕರಾಗಿ ಗುರುತಿಸಿಕೊಂಡಿದ್ದರು.

ವಿದ್ಯಾರ್ಥಿ ಚಳವಳಿ ಯಿಂದ ಬಿಡುಗಡೆ ಗೊಂಡ ನಂತರ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ರೈತ ಚಳವಳಿ ಕಟ್ಟಲು ಸಂಪೂರ್ಣವಾಗಿ ತೊಡಗಿಸಿಕೊಂಡ ಕಾಂ.ಜಿಸಿ ಬಯ್ಯಾರೆಡ್ಡಿ ರವರು 2000ನೇ ಇಸವಿಯಲ್ಲಿ ಗುಲ್ಬರ್ಗದಲ್ಲಿ ನಡೆದ ಹನ್ನೆರಡನೇ ರಾಜ್ಯ ಸಮ್ಮೇಳನದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆಗಿ ಆಯ್ಕೆಗೊಂಡು 2013 ರ ತನಕ ಈ ಜವಾಬ್ಧಾರಿ ನಿರ್ವಹಿಸಿ ಇಡೀ ರಾಜ್ಯದಾದ್ಯಂತ ಸಾವಿರಾರು ಹೋರಾಟಗಳಲ್ಲಿ ಭಾಗವಹಿಸಿ ನೂರಾರು ಹೋರಾಟಗಳನ್ನು ರೂಪಿಸುವ ಮೂಲಕ ರಾಜ್ಯದ ಜನಪ್ರಿಯ ರೈತ ನಾಯಕರಾಗಿ ಗುರುತಿಸಿಕೊಂಡಿದ್ದರು. ನಂತರ 2017 ರಲ್ಲಿ ಹುಬ್ಬಳ್ಳಿ ಯಲ್ಲಿ ನಡೆದ 16 ನೇ ರಾಜ್ಯ ಸಮ್ಮೇಳನದಲ್ಲಿ ರಾಜ್ಯಾಧ್ಯಕ್ಷರಾಗಿ ಅವರು ಕೊನೆ ಉಸಿರು ಎಳೆಯವವರೆಗೂ ರೈತ ಹೋರಾಟದಲ್ಲಿ ಅಸೀಮ ಬದ್ದತೆ ಹಾಗೂ ಸೈದ್ಧಾಂತಿಕ ನಿಷ್ಠೆ ಯಲ್ಲಿ ಯಾವುದೇ ಕುಂದುಟಾಗದಂತೆ ಜತನದಿಂದ ಕಾಪಾಡಿಕೊಂಡಿದ್ದ ಒಬ್ಬ ಮಹಾನ್ ಮಾರ್ಕ್ಸ್‌ವಾದಿ ಹೋರಾಟಗಾರರಾಗಿದ್ದರು.

ಬಗರ್ ಹುಕುಂ ಸಾಗುವಳಿ ರೈತರ ಹೋರಾಟ, ರೈತರ ಕೃಷಿ ಪಂಪ ಸೆಟ್ ಗಳಿಗೆ ಮೀಟರೀಕರಣ ವಿರುದ್ಧ ನಡೆದ ಹೋರಾಟ, ರೇಷ್ಮೆ, ಹಾಲು,ಕಬ್ಬು, ತೆಂಗು ,ತೊಗರಿ,ಹತ್ತಿ ಮುಂತಾದ ಬೆಳೆಗಾರರ ಹೋರಾಟ , ಕೋಳಿ ಸಾಕಾಣಿಕೆ ದಾರ ರೈತರ ಪರವಾದ ಹೋರಾಟ, ಅರಣ್ಯ ಸಾಗುವಳಿ ರೈತರ ಪರವಾದ ಹೋರಾಟ, ರಾಜ್ಯದ ವಿವಿಧ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ನಡೆದ ಹೋರಾಟ ,ಎಂಎಸ್ ಪಿ ಕಾನೂನು, ಸಾಲಭಾಧೆಯಿಂದ ನರಳುವ ರೈತ ಸಮುದಾಯಕ್ಕೆ ಋಣಮುಕ್ತಿ ಕಾನೂನು ಜಾರಿಗಾಗಿ ನಡೆದ ಹೋರಾಟ ಹೀಗೆ ತಮ್ಮ ಸುದೀರ್ಘ ನಲವತ್ತು ವರ್ಷಗಳ ರೈತ ಚಳವಳಿಯಲ್ಲಿ ನೂರಾರು ಹೋರಾಟಗಳನ್ನು ಮುನ್ನೆಡಿಸಿದ್ದರು .

ಕರಾಳ ಕೃಷಿ ಕಾಯ್ದೆಗಳ ವಿರುದ್ಧ ಐತಿಹಾಸಿಕ ದೆಹಲಿ ರೈತ ಚಳವಳಿ ಪ್ರಾರಂಭವಾದ ಸಂದರ್ಭದಲ್ಲಿ ಕರ್ನಾಟಕದಿಂದಲೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅಪಾರ ಮುತುವರ್ಜಿ ವಹಿಸಿದ್ದ ಕಾಂ.ಜಿಸಿ ಬಯ್ಯಾರೆಡ್ಡಿ ರವರು ಕರ್ನಾಟಕದಲ್ಲೂ ಐಕ್ಯ ಹೋರಾಟಗಳನ್ನು ರೂಪಿಸಿ ಸಂಯುಕ್ತ ಹೋರಾಟ ಕರ್ನಾಟಕ ವೇದಿಕೆ ರೂಪಿಸಿ ರಾಜ್ಯದ ಬಹುತೇಕ ರೈತ ಸಂಘಗಳನ್ನು ಒಂದೇ ವೇದಿಕೆಯಡಿಯಲ್ಲಿ ಒಗ್ಗೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಮತ್ತು ಅದರ ಸಂಯೋಜಕರಾಗಿ ಎಲ್ಲಾ ರೈತ ಸಂಘಟನೆಗಳ ಪ್ರೀತಿ ಪಾತ್ರ ನಾಯಕರಾಗಿ ವಿಶ್ವಾಸ ಗಳಿಸಿದ್ದರು. ಕೆಂಪೇಗೌಡ ಬಡಾವಣೆ ಸಂದರ್ಭದ ಭೂ ಸ್ವಾಧೀನ ದಿಂದ ಹಿಡಿದು ಇತ್ತೀಚಿನ ದೇವನಹಳ್ಳಿ ಚನ್ನರಾಯಪಟ್ಟಣ ಭೂ ಸ್ವಾಧೀನದವರೆಗಿನ ಬೆಂಗಳೂರಿನ ಹಾಗೂ ರಾಜ್ಯದ ಭೂ ಸ್ವಾಧೀನದ ನೂರಾರು ಹೋರಾಟಗಳಲ್ಲಿ ರೈತರು ನ್ಯಾಯ ಪಡೆಯುವಂತೆ ಸದಾ ಅವರ ನೆಚ್ಚಿನ ನಾಯಕರಾಗಿದ್ದರು.

ಸುಮಾರು ನಲವತ್ತು ವರ್ಷಗಳ ಕಾಲದ ರೈತ ಚಳವಳಿ‌ ಮುನ್ನೆಡಿಸಿದ್ದ ಅಪಾರ ಅನುಭವಿ ರೈತ ನಾಯಕನ ಸಾವಿನಿಂದ ರಾಜ್ಯದ ಐಕ್ಯ ರೈತ ಚಳವಳಿಗೆ ಹಾಗೂ ಎಡಪಂಥೀಯ ರೈತ ಹೋರಾಟಕ್ಕೆ ಬಹಳ ದೊಡ್ಡ ಹಿನ್ನಡೆ ಉಂಟಾಗಿದ್ದು ಸಾಮೂಹಿಕ ಪ್ರಯತ್ನದಿಂದ ಅವರ ಹೋರಾಟವನ್ನು ಮುಂದುವರೆಸುವುದು ಕಾಂ.ಜಿಸಿ ಬಯ್ಯಾರೆಡ್ಡಿ ರವರಿಗೆ ಸಲ್ಲಿಸುವ ಸರಿಯಾದ ಶ್ರದ್ಧಾಂಜಲಿ ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ಸಂತಾಪ ಸೂಚಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments