ಸಕಲ ವೀರಶೈವ- ಲಿಂಗಾಯತರನ್ನು ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಗೆ (ಒಬಿಸಿ) ಸೇರ್ಪಡೆಗೆ ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಶಾಮನೂರು ಶಿವಶಂಕರಪ್ಪ ಆಗ್ರಹಿಸಿದರು.
ಸೋಮವಾರ ಹರಿಹರ ಸಮೀಪದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ನಡೆದ ಹರ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದ ಅವರು, “ವೀರಶೈವ-ಲಿಂಗಾಯತ ಬೇರೆ ಬೇರೆ ಅಲ್ಲ. ಎಲ್ಲರೂ ಒಂದೇ.ವೀರಶೈವ ಲಿಂಗಾಯತರು ಒಳಪಂಗಡಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳ ಬಾರದು. ಎಲ್ಲ ವೀರಶೈವ ಲಿಂಗಾಯತರು ಒಂದೇ ಎಂಬುದನ್ನು ತಿಳಿಯಬೇಕು” ಎಂದು ಹೇಳಿದರು.
ಇಡೀ ವೀರಶೈವ ಲಿಂಗಾಯತ ಸಮಾಜಕ್ಕೆ ಒಂದೇ ಮೀಸಲಾತಿ ಇರಬೇಕು. ವೀರಶೈವ ಲಿಂಗಾಯತರು ಕೆಲವರು 2ಎ, 2ಎ, 2ಬಿ ಹಾಗೂ ಎಸ್ಸಿ ಮೀಸಲಾತಿ ಪಡೆಯುತ್ತಿದ್ದಾರೆ. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎನ್ನವಂತಾಗಿದೆ. ನಾವು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೇಳುತ್ತಿದ್ದೇವೆ. ನಾವು ಸಮಾಜವನ್ನು ಒಡೆಯುವುದಿಲ್ಲ” ಎಂದರು.
“ನಮ್ಮ ಸಮಾಜದ 2ಎ ಮೀಸಲಾತಿಗಾಗಿ ನಾವು ಕಾನೂನು ಹೋರಾಟವೂ ಮಾಡುತ್ತಿದ್ದೇವೆ ಈಗಾಗಲೇ ನಾವು ಸಕಲ ಲಿಂಗಾಯತರನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರ್ಪಡೆ ಆಗಬೇಕು. ನಮ್ಮ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸಿಗಬೇಕು. ಈ ಹಿಂದೆ ಬಸವರಾಜ ಬೊಮ್ಮಯಿ ಅವರ ಸರ್ಕಾರ ಮೀಸಲಾತಿ ಪ್ರಕಟಿಸಿದನ್ನು ನಾವು ವಿರೋಧಿಸಿಯೂ ಇಲ್ಲ. ಸ್ವಾಗತಿಸಿಯೂ ಇಲ್ಲ” ಎಂದು ಹೇಳಿದರು.
“ಸಮಾಜದ ಬಡ ಮಕ್ಕಳಿಗೆ ಶಿಕ್ಷಣ, ಉದ್ಯೋಗಕ್ಕೆ ಅನುಕೂಲ ಆಗುವ ದೃಷ್ಠಿಯಿಂದ ರಾಜ್ಯ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಂಡು ಕೇಂದ್ರ ಸರ್ಕಾರ ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಬೇಕು. ಧರ್ಮ ಎಂಬ ವಿಚಾರಕ್ಕೆ ಬಂದರೆ ಸಕಲ ವೀರಶೈವ ಲಿಂಗಾಯತರು ಹಿಂದೂಗಳು. ಜ. 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಆಗಲಿದೆ. ನಮಗೂ ರಾಮ ಮಂದಿರ ಉದ್ಘಾಟನೆಗೆ ಆಹ್ವಾನ ಬಂದಿದೆ. ಎಲ್ಲ ವೀರಶೈವ ಲಿಂಗಾಯತರು ಆ ದಿನ ಎಲ್ಲರೂ ಅಂದೇ ರಾಮ ನವಮಿ ಎಂದು ತಿಳಿದು ಪೂಜೆ ಮಾಡಿ” ಎಂದು ವಚನಾನಂದ ಸ್ವಾಮೀಜಿ ಹೇಳಿದರು.