ರಾಜ್ಯ ಸರ್ಕಾರ ಎಸ್ಸಿ ಎಸ್ಟಿಗೆ ಮೀಸಲಿಟ್ಟಿರುವ ಹಣವನ್ನು ಚುನಾವಣೆಗಾಗಿ ಜಾರಿಗೆ ತಂದ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಂಡು ಎಸ್ಸಿ ಎಸ್ಟಿ ಸಮುದಾಯಗಳಿಗೆ ಮೋಸ ಮಾಡುತ್ತಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಶಿಗ್ಗಾವಿಯಲ್ಲಿ ಪತ್ರಿಕಾಗೋಷ್ಠಿ ಕರೆದು ಮಾತನಾಡಿ, “ರಾಜ್ಯ ಸರ್ಕಾರ ದಿವಾಳಿ ಆಗಿರೋದು ಪ್ರತಿ ಹೆಜ್ಜೆಯಲ್ಲಿ ಪ್ರದರ್ಶನ ಮಾಡುತ್ತಿದೆ. ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಮಾಡುವುದರಿಂದ ಹಿಡಿದು ಎಲ್ಲ ದರ ಹೆಚ್ಚಳ ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಅನುದಾನ ವರ್ಗಾಯಿಸುತ್ತಿದ್ದಾರೆ” ಎಂದರು.
“ಎಸ್ ಸಿ ಎಸ್ ಟಿ ಸಮುದಾಯಗಳಿಗೆ 14,000 ಕೋಟಿ ರೂಪಾಯಿ ಅನುದಾನ ಬಳಕೆ ಆಗಬೇಕಿತ್ತು. ಎಲ್ಲ ಹಣ ಗ್ಯಾರಂಟಿಗಳಿಗೆ ಹೋಗುತ್ತಿದೆ. ಎಸ್ ಸಿ ಎಸ್ ಟಿ ಜನಕ್ಕೂ ಗ್ಯಾರಂಟಿ ಮೂಲಕ ಅನುಕೂಲ ಮಾಡುತ್ತಿದ್ದೇವೆ ಎಂದು ಕಾಂಗ್ರೆಸ್ ನವರು ಹೇಳುತ್ತಾರೆ. ಆದರೆ, ಕಾನೂನಿನಲ್ಲಿ ಅನುದಾನ ಎಸ್ ಸಿ ಎಸ್ ಟಿ ಗಳಿಗೆ ಹೋಗಬೇಕು ಅಂತ ಇದೆ. ಆ ಕಾನೂನು ಉಲ್ಲಂಘನೆ ಆಗಿದೆ” ಎಂದು ಆರೋಪಿಸಿದರು.
ವೈಫಲ್ಯ ಮುಚ್ಚಿಕೊಳ್ಳಲು ಡೆಂಘೀ ಸಾವಿನ ಸಂಖ್ಯೆ ಮುಚ್ಚಿಡುತ್ತಿದ್ದಾರೆ
“ರಾಜ್ಯ ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಡೆಂಘೀ ಸಾವಿನ ಸಂಖ್ಯೆ ಕಡಿಮೆ ತೋರಿಸುತ್ತಿದ್ದಾರೆ. ಡೆಂಘೀ ರೋಗಿಗಳ ಸಾವಿನ ಸಂಖ್ಯೆ ಮುಚ್ಚಿಡುತ್ತಿದ್ದಾರೆ. ಹಾವೇರಿಯಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಜನರು ದಾವಣಗೆರೆ ಹುಬ್ಬಳ್ಳಿಗೆ ಹೋಗಿದ್ದಾರೆ. ಸರಿಯಾದ ಚಿಕಿತ್ಸೆ ಸಿಗದೇ ರೋಗಿಗಳು ಸಾವನ್ನಪ್ಪಿದರೂ ಮುಚ್ಚಿಡುತ್ತಿದ್ದಾರೆ” ಎಂದು ಆರೋಪಿಸಿದರು.