Homeಕರ್ನಾಟಕಸುಲಲಿತ ವಾಣಿಜ್ಯ ಸಂಸ್ಕೃತಿಗೆ ರಾಜ್ಯ ಸರಕಾರದ ಸಂಕಲ್ಪ, 28 ಸೇವೆಗಳ ತ್ವರಿತ ಅನುಷ್ಠಾನಕ್ಕೆ ಸೂಚನೆ: ಎಂ...

ಸುಲಲಿತ ವಾಣಿಜ್ಯ ಸಂಸ್ಕೃತಿಗೆ ರಾಜ್ಯ ಸರಕಾರದ ಸಂಕಲ್ಪ, 28 ಸೇವೆಗಳ ತ್ವರಿತ ಅನುಷ್ಠಾನಕ್ಕೆ ಸೂಚನೆ: ಎಂ ಬಿ ಪಾಟೀಲ್

ರಾಜ್ಯದಲ್ಲಿ ಸುಲಲಿತ ವಾಣಿಜ್ಯ ಸಂಸ್ಕೃತಿಯನ್ನು ತರಲು ರಾಜ್ಯ ಸರಕಾರವು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ಇನ್ನೂ ಬಾಕಿ ಇರುವ 28 ಸೇವೆಗಳನ್ನು ಸುಗಮಗೊಳಿಸಿ, ಕೈಗಾರಿಕಾ ಸ್ನೇಹಿಯನ್ನಾಗಿ ಮಾಡಲಾಗುವುದು. ಇದರ ಭಾಗವಾಗಿ ಅಗತ್ಯ ತಿದ್ದುಪಡಿಗಳನ್ನು ತ್ವರಿತವಾಗಿ ಮಾಡಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಈ ಉದ್ದೇಶದಿಂದ ಅವರು ಗುರುವಾರ ವಿಧಾನಸೌದದ ಸಮ್ಮೇಳನ ಸಭಾಂಗಣದಲ್ಲಿ ಇಲ್ಲಿ ಸುಲಲಿತ ವಾಣಿಜ್ಯ ಸಂಸ್ಕೃತಿ ಮತ್ತು ಏಕಗವಾಕ್ಷಿ ಸಮಿತಿಗಳ ಮಹತ್ವದ ಸಭೆ ನಡೆಸಿದರು. ಎಲ್ಲ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಬಳಿಕ ಮಾತನಾಡಿದ ಸಚಿವರು, ‘ನಮಗೆ ನೆರೆಹೊರೆ ರಾಜ್ಯಗಳಿಂದ ತೀವ್ರ ಸ್ಪರ್ಧೆ ಇದೆ. ನಾವು ಅಲ್ಲಿಯ ನೀತಿ ನಿಯಮಾವಳಿಗಳನ್ನೂ ಅಧ್ಯಯನ ಮಾಡಿದ್ದು, ಅದಕ್ಕಿಂತ ಉತ್ತಮವಾದ ಮತ್ತು ಕೈಗಾರಿಕಾ ಸ್ನೇಹಿಯಾದ ವ್ಯವಸ್ಥೆಯನ್ನು ತರಲು ಪಣ ತೊಟ್ಟಿದ್ದೇವೆ. ಏಕಗವಾಕ್ಷಿ ಯೋಜನೆಯಡಿ ಇದುವರೆಗೆ 20 ಇಲಾಖೆಗಳ 115 ಸೇವೆಗಳನ್ನು ಜೋಡಣೆ ಮಾಡಿದ್ದು, ಬಾಕಿ ಇರುವ 28 ಸೇವೆಗಳನ್ನು ಆದ್ಯತಾ ಕ್ಷೇತ್ರಗಳೆಂದು ಪರಿಗಣಿಸಿ ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲು ಸೂಚಿಸಲಾಗಿದೆ. ಇದರಲ್ಲಿ ಕಂದಾಯ, ಅರಣ್ಯ, ಗೃಹ, ಪರಿಸರ, ಪ್ರಾಥಮಿಕ ಶಿಕ್ಷಣ, ಅಗ್ನಿಶಾಮಕ ದಳ, ಇಂಧನ ಮುಂತಾದವನ್ನು ಗುರುತಿಸಲಾಗಿದೆ. ಒಟ್ಟಿನಲ್ಲಿ ಹೂಡಿಕೆದಾರರಿಗೆ ಸಮಯ ವ್ಯರ್ಥವಾಗದಂತೆ, ಅವರನ್ನು ರಾಜ್ಯಕ್ಕೆ ಸೆಳೆಯುವ ಗುರಿ ಇಟ್ಟುಕೊಳ್ಳಲಾಗಿದೆ. ಇದಕ್ಕೆ ಎಲ್ಲ ಇಲಾಖೆಗಳ ಸಹಕಾರ ಮುಖ್ಯ ಎಂದು ಹೇಳಿದರು.

ಐಟಿ ಕ್ಷೇತ್ರದಲ್ಲಿ ನಾವು ಮುಂಚೂಣಿಯಲ್ಲಿದ್ದೆವು. ಈಗ ಎಐ ಬಂದಿರುವುದರಿಂದ ಇದರ ಭವಿಷ್ಯ ಏನಾಗುತ್ತದೆ ಎನ್ನುವುದು ಗೊತ್ತಿಲ್ಲ. ಆದ್ದರಿಂದ ಕೆಐಎಡಿಬಿ ಸೇರಿದಂತೆ ಎಲ್ಲ ಇಲಾಖೆಗಳಲ್ಲೂ ಕೈಗಾರಿಕಾ ಯೋಜನೆಗಳಿಗೆ ತ್ವರಿತ ಅನುಮೋದನೆ ದೊರೆಯುವಂತೆ ನೋಡಿಕೊಳ್ಳಬೇಕಾಗಿದೆ. ವಿದ್ಯುತ್ ಸಂಪರ್ಕ, ಅಗ್ನಿಶಾಮಕ ಇಲಾಖೆ ಅನುಮತಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಲಿ ಅನುಮತಿಗಳು ತ್ವರಿತವಾಗಿ ಸಿಗುವಂತೆ ಮಾಡಬೇಕು. ಈ ವಿಷಯದಲ್ಲಿ ಉದ್ಯಮಿಗಳಿಗೆ ಸತಾಯಿಸುವುದನ್ನು ತಪ್ಪಿಸಬೇಕು ಎಂದು ಅವರು ಸೂಚಿಸಿದರು.

ಗೃಹ ಇಲಾಖೆಯಡಿ ಬರುವ ಅಗ್ನಿಶಾಮಕ ದಳದಿಂದ ಎನ್ಒಸಿ ಕೊಡಲು ಇದುವರೆಗೂ 60 ದಿನಗಳ ಅವಕಾಶವಿತ್ತು. ಇದನ್ನು ಈಗ 21 ದಿನಕ್ಕೆ ಇಳಿಸಲಾಗಿದೆ. ವಿದ್ಯುತ್ ಸೌಲಭ್ಯಕ್ಕೆ ಬೇಕಾದ ಅನುಮತಿಗೆ ಕಾಲಾವಕಾಶವನ್ನು 25 ದಿನದಿಂದ 10 ದಿನಕ್ಕೆ, ಲಿಫ್ಟ್/ಎಸ್ಕಲೇಟರ್ ಬಳಕೆಗೆ ಬೇಕಾದ ಅನುಮತಿಗೆ 40 ದಿನದಿಂದ 20 ದಿನಕ್ಕೆ, ಹೊಸ ನಲ್ಲಿ ಸಂಪರ್ಕಕ್ಕೆ 42 ದಿನದಿಂದ 30 ದಿನಕ್ಕೆ ಇಳಿಸಲು ತೀರ್ಮಾನಿಸಲಾಗಿದೆ. ಕಾರ್ಮಿಕ ಇಲಾಖೆಯು ಕೈಗಾರಿಕಾ ಯೋಜನೆ ಮತ್ತು ಲೈಸೆನ್ಸ್, ಬಾಯ್ಲರ್ ನೋಂದಣಿಗಳನ್ನು ಇನ್ನು ಮುಂದೆ 30 ದಿನಗಳ ಬದಲು 14 ದಿನಗಳಲ್ಲಿ ಕೊಡಲಿದೆ. ಈ ಸಂಬಂಧದ ತಿದ್ದುಪಡಿಗಳಿಗೆ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ. ಇವು ಸದ್ಯದಲ್ಲೇ ಸಂಪುಟ ಸಭೆಯ ಮುಂದೆ ಚರ್ಚೆಗೆ ಬರಲಿದ್ದು, ಕ್ಷಿಪ್ರಗತಿಯಲ್ಲಿ ಕಾನೂನಿನ ರೂಪ ನೀಡಲಾಗುವುದು ಎಂದು ಅವರು ವಿವರಿಸಿದ್ದಾರೆ.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿಯಲ್ಲಿ ಕೂಡ ವಿವಿಧ ರೀತಿಯ ಅನುಮತಿಗಳಿಗೆ ಇದುವರೆಗೆ ಇದ್ದ ಕಾಲಾವಧಿಯನ್ನು ಗಣನೀಯವಾಗಿ ಕಡಿತಗೊಳಿಸಲಾಗಿದೆ. ಹಾಗೆಯೇ ಭೂ ಬಳಕೆ ಉದ್ದೇಶ ಪರಿವರ್ತನೆಗೆ ಅನುಮತಿ ನೀಡಲು ಬೆಂಗಳೂರಿನ ಪರಿಮಿತಿಯಲ್ಲಿ ಈವರೆಗೆ 120 ದಿನಗಳ ಕಾಲಾವಕಾಶವಿತ್ತು. ಇನ್ನು ಮುಂದೆ ಇದು 45 ದಿನಗಳಲ್ಲಿ ಆಗಲಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದ ವಿವಿಧ ಕಡೆ ಒಟ್ಟು 32 ಡೇಟಾ ಸೆಂಟರುಗಳಿವೆ. ಇವುಗಳಿಗೆ ಅಡೆತಡೆ ಇಲ್ಲದೆ ವಿದ್ಯುತ್ ಪೂರೈಕೆ ನಿರ್ಣಾಯಕವಾಗಿದೆ. ಆದ್ದರಿಂದ ಡೇಟಾ ಸೆಂಟರ್ ಕ್ಲಸ್ಟರ್ ಅಭಿವೃದ್ಧಿ ಪಡಿಸಿ, ಇವುಗಳಿಗೆ ಪ್ರತ್ಯೇಕ ಲೈನ್ ಮೂಲಕ ವಿದ್ಯುತ್ ಒದಗಿಸುವ ಅಗತ್ಯ ಇದೆ ಎಂದು ಪಾಟೀಲ ಹೇಳಿದ್ದಾರೆ.

ಎಲ್ಲೆಲ್ಲಿ ಹೊಸದಾಗಿ ಡೇಟಾ ಸೆಂಟರ್ ಗಳು‌ ಬರುತ್ತವೆ? ಅವುಗಳಿಗೆ‌ ವಿದ್ಯುತ್ ಸಂಪರ್ಕ ಇತ್ಯಾದಿ‌ ಮೂಲ ಸೌಲಭ್ಯ ಒದಗಿಸುವ ಸಂಬಂಧ ಸದ್ಯದಲ್ಲೇ‌ ಸಚಿವರ ಮಟ್ಟದಲ್ಲಿ ಸಭೆ ನಡೆಸಲಾಗುವುದು ಎಂದು ಅವರು ಹೇಳಿದರು.

ಸಭೆಯಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತ, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪಾ ಜೋಳನ್, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಕಂದಾಯ ಆಯುಕ್ತರಾದ ಮೀನಾ ನಾಗರಾಜ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ.ಶಿವಶಂಕರ ಸೇರಿದಂತೆ ಬಹುತೇಕ ಎಲ್ಲ ಇಲಾಖೆಗಳ ಕಾರ್ಯದರ್ಶಿಗಳು, ಹಿರಿಯ ಅಧಿಕಾರಿಗಳು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments