ಬೇಲೆಕೆರಿ ಬಂದರಿನಲ್ಲಿ ಜಪ್ತಿ ಮಾಡಲಾಗಿದ್ದ ಕಬ್ಬಿಣದ ಅದಿರನ್ನು ಅಕ್ರಮವಾಗಿ ಕಳ್ಳಸಾಗಾಣಿಕೆ ಮಾಡಿರುವ ಅದಾನಿ ಸಂಸ್ಥೆಯ ವಿರುದ್ಧ ರಾಜ್ಯಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಆಗ್ರಹಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “2011 ರ ಜುಲೈನಲ್ಲಿ ಲೋಕಾಯುಕ್ತರು ನೀಡಿರುವ ವರದಿಯಲ್ಲಿ ಬೇಲೆಕೆರಿ ಬಂದರು ಅದಿರು ಸಾಗಾಣಿಕೆ ಹಗರಣದಲ್ಲಿ ಭಾಗವಹಿಸಿರುವ ನಾಲ್ಕು ಕಂಪನಿಗಳ ಹೆಸರನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ” ಎಂದರು.
“ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈ.ಲಿಮಿಟೆಡ್, ಸಲ್‌ಗಾಂವ್ಕರ್ ಮೈನಿಂಗ್ ಇಂಡಸ್ಟ್ರೀಸ್ ಪ್ರೈ.ಲಿಮಿಟೆಡ್, ರಾಜ್‌ಮಹಲ್ ಸೆನ್‌್ಸಕಿ ಕಂಪನಿಗಳ ವಿರುದ್ಧ ತನಿಖೆಯಾಗಿದೆ. ಅರಣ್ಯ ಇಲಾಖೆ ಜಪ್ತಿ ಮಾಡಿದ ಎಂಟು ಲಕ್ಷ ಮೆಟ್ರಿಕ್ ಟನ್‌ಗೂ ಅಧಿಕ ಅದಿರನ್ನು ದೊಡ್ಡ ಪ್ರಮಾಣದಲ್ಲಿ ವಿದೇಶಕ್ಕೆ ಕಳ್ಳಸಾಗಾಣಿಕೆ ಮಾಡಿರುವ ಹಗರಣದಲ್ಲಿ ಅದಾನಿ ಎಂಟರ್‌ಪ್ರೈಸಸ್ ಕೂಡ ಭಾಗಿಯಾಗಿದೆ” ಎಂದು ಆರೋಪಿಸಿದರು.
“ಅದಿರು ಸಾಗಾಣಿಕೆ ಪ್ರಕರಣದ ತನಿಖೆ ನಡೆಸಿದ ಅರಣ್ಯಾಧಿಕಾರಿ ಯು.ಬಿ.ಸಿಂಗ್ ಅವರು ನೀಡಿದ ಮಾಹಿತಿ ಆಧರಿಸಿ ಲೋಕಾಯುಕ್ತರು ವರದಿ ನೀಡಿದ್ದರು. ಅದರಲ್ಲಿ ಪುಟ ಸಂಖ್ಯೆ 51 ರಿಂದ 56 ರ ನಡುವೆ ಅದಾನಿ ಕಂಪನಿ ತನ್ನ ಶಾಖೆಗೆ ಇ-ಮೇಲ್ ಕಳುಹಿಸಿ ಯಾವೆಲ್ಲಾ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಣ ನೀಡಬೇಕು ಎಂಬ ಸ್ಪಷ್ಟ ಉಲ್ಲೇಖ ಇದೆ. ದಾಖಲೆ ಇದ್ದರೂ ಇದರ ವಿರುದ್ಧ ತನಿಖೆ ನಡೆದಿಲ್ಲ ಎಂದರು.
ಅಮೆರಿಕದಲ್ಲಿ ಲಂಚ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅದಾನಿ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಕರ್ನಾಟಕದಲ್ಲೇ ಈ ರೀತಿಯ ಹಗರಣ ನಡೆದಿದ್ದರೂ ಏಕೆ ಕ್ರಮ ಕೈಗೊಂಡಿಲ್ಲ ಎಂಬುದು ಪ್ರಶ್ನಾರ್ಹ” ಎಂದರು.
“ಅಕ್ರಮ ಗಣಿಗಾರಿಕೆ ನಡೆದು 2009 ಮತ್ತು 2010 ರಲ್ಲಿ ಈ ಅದಿರನ್ನು ಕಳ್ಳಸಾಗಾಣಿಕೆ ಮಾಡಲು ಯತ್ನಿಸಲಾಗಿತ್ತು. ಅರಣ್ಯಾಧಿಕಾರಿಗಳು ಜಪ್ತಿ ಮಾಡಿದ್ದರು. ಮುಂದುವರೆದ ತನಿಖೆಯಲ್ಲಿ ಲೋಕಾಯುಕ್ತರು ಸುದೀರ್ಘ ವರದಿ ನೀಡಿದ್ದರು. ಅದನ್ನು ಆಧರಿಸಿ ಸಾಮಾಜಿಕ ಪರಿವರ್ತನಾ ಸಂಸ್ಥೆಯ ಎಸ್.ಆರ್.ಹಿರೇಮಠ್ ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಿದಾಗ ಸಿಬಿಐ ಮತ್ತು ಲೋಕಾಯುಕ್ತ ತನಿಖೆಗಳು ನಡೆದಿವೆ.
ಕಳ್ಳಸಾಗಾಣಿಕೆಯ ಮೂರು ಕಂಪನಿಗಳ ವಿರುದ್ಧ ಈಗಾಗಲೇ ತನಿಖೆ ಪೂರ್ಣಗೊಂಡು, ಕಾಂಗ್ರೆಸ್‌ನ ಶಾಸಕ ಸತೀಶ್ ಶೈಲ್ ಸೇರಿದಂತೆ ಹಲವರಿಗೆ ಶಿಕ್ಷೆಯಾಗಿದೆ. ಅದಕ್ಕೆ ಹೈಕೋರ್ಟ್ ತಡೆಯಾಜ್ಞೆಯನ್ನೂ ನೀಡಿದೆ. ಮೂರು ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾದರೆ ಅದಾನಿ ಕಂಪನಿ ವಿರುದ್ಧ ಏಕಿಲ್ಲ” ಎಂದು ಪ್ರಶ್ನಿಸಿದರು.
ಲೋಕಾಯುಕ್ತ ವರದಿ ಸಲ್ಲಿಕೆಯಾದಾಗ ಕೇಂದ್ರದಲ್ಲಿ ಯುಪಿಎ ಸರ್ಕಾರವೇ ಇತ್ತು. ಅನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎರಡು ಬಾರಿ ಅಧಿಕಾರಕ್ಕೆ ಬಂದಿದೆ. ಆದರೂ ಅದಾನಿ ಕಂಪನಿ ವಿರುದ್ಧ ತನಿಖೆಯಾಗಿಲ್ಲ, ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ ಎಂದು ಬಿ.ಕೆ.ಹರಿಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದರು. ಈಗಲಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಕೂಡಲೇ ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು. ಯಾರು, ಎಷ್ಟೇ ದೊಡ್ಡವರಾಗಿದ್ದರೂ ಮುಲಾಜು ನೋಡದೇ ಕ್ರಮ ಕೈಗೊಳ್ಳುವ ಅಗತ್ಯವಿದೆ. ರಾಜ್ಯ ಸರ್ಕಾರ ಕ್ರಮ ಕೈಗೊಳ್ಳದೇ ಇದ್ದರೆ ತಾವು ಮತ್ತೊಂದು ಸುತ್ತಿನ ಸುದ್ದಿಗೋಷ್ಠಿ ನಡೆಸಿ ತಮ ಅಭಿಪ್ರಾಯ ವ್ಯಕ್ತಪಡಿಸುವುದಾಗಿ ಎಚ್ಚರಿಕೆ ನೀಡಿದರು.