ಮುಖ್ಯಮಂತ್ರಿಗಳು ಮಂಡಿಸಿದ 2026-27ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಜನರ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ವಿಧಾನಸಭೆಯಲ್ಲಿ ಗುರುವಾರ ಮಾತನಾಡಿದ ಅವರು, ಈ ಬಜೆಟ್ ಗಮನಿಸಿದರೆ ಈ ಸರಕಾರದ ಆರ್ಥಿಕ- ಬೌದ್ಧಿಕ ದಿವಾಳಿತನವು ಕೂಡ ಪ್ರದರ್ಶನಗೊಂಡಿದೆ. ಹಣಕಾಸಿನ ಸಚಿವರಾದ ಮುಖ್ಯಮಂತ್ರಿಗಳು ತನ್ನ ರಾಜಕೀಯ ಸಂಧ್ಯಾಕಾಲದಲ್ಲಿರುವ ಈ ಸಂದರ್ಭದಲ್ಲಿ 17ನೇ ಬಜೆಟ್ ಮಂಡಿಸಿದ್ದಾರೆ. ಅವರಿಗೆ ಒಂದು ಸುವರ್ಣಾವಕಾಶ ಇತ್ತು. ತಮ್ಮ ರಾಜಕೀಯ ಜೀವನದ ಸುದೀರ್ಘ ಅನುಭವದ ಆಧಾರದ ಮೇಲೆ ರಾಜ್ಯದ ಸಂಕಷ್ಟಗಳಿಗೆ ನಾಡಿನ ಜನರ ಅಪೇಕ್ಷೆಗೆ ತಕ್ಕಂತೆ ಉತ್ತರ ಕಂಡುಕೊಳ್ಳುವ ಅವಕಾಶ ಇತ್ತು. ಆದರೆ, ಈ ಬಜೆಟ್ ನೋಡಿದಾಗ ಅಸಹಾಯಕರಾಗಿ ಕೈಚೆಲ್ಲಿದ್ದಾರೆಂಬ ಭಾವನೆ ರಾಜ್ಯದ ಜನರಲ್ಲಿ ಮೂಡಿದೆ ಎಂದು ವಿಶ್ಲೇಷಿಸಿದರು.
ಒಟ್ಟಾರೆಯಾಗಿ ಬಜೆಟ್‍ನಲ್ಲಿ ಮುಖ್ಯಮಂತ್ರಿಗಳು ತನ್ನ ವೈಫಲ್ಯಗಳನ್ನು ಮುಚ್ಚಿ ಹಾಕಿಕೊಳ್ಳುವ ಸಲುವಾಗಿ ಕೇಂದ್ರ ಸರಕಾರದ ಮೇಲೆ ಆರೋಪ ಮಾಡಿ ಕೈ ತೊಳೆದುಕೊಳ್ಳುವ ಕುತಂತ್ರಕ್ಕೆ ಈ ಬಜೆಟ್ಟನ್ನು ಸೀಮಿತ ಮಾಡಿದ್ದಾರೆ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಆದಾಯ ಸಂಗ್ರಹದಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. ಅತಿ ಹೆಚ್ಚು ಸಾಲ ಮಾಡುವ ಮೂಲಕ ಈ ನಾಡಿನ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಎಂದರು.
ಪದೇ ಪದೆ ಬೆಲೆ ಏರಿಕೆಯ ಬ್ರಹ್ಮಾಸ್ತ್ರ
ಸಾಲದ ಭಾರ ಒಂದು ಕಡೆಯಾದರೆ, ಅಸಲು,ಬಡ್ಡಿ ಕಟ್ಟುವುದೇ ರಾಜ್ಯಕ್ಕೆ ದೊಡ್ಡ ಹೊರೆ ಆಗಿದೆ. ವಿತ್ತೀಯ ಕೊರತೆ ಹೆಚ್ಚಾಗಿ ರಾಜ್ಯದ ಜನರ ಮೇಲೆ ಪದೇಪದೇ ಬೆಲೆ ಏರಿಕೆಯ ಬ್ರಹ್ಮಾಸ್ತ್ರವನ್ನು ರಾಜ್ಯ ಸರಕಾರ ಪ್ರಯೋಗ ಮಾಡುತ್ತಿರುವುದು ಈ ನಾಡಿನ ದುರಂತ ಎಂದು ಬಿ.ವೈ.ವಿಜಯೇಂದ್ರ ಅವರು ಹೇಳಿದರು.
ಕರ್ನಾಟಕ ರಾಜ್ಯ ಕೇಂದ್ರ ಸರಕಾರಕ್ಕೆ 100 ರೂ. ಕೊಟ್ಟರೆ ಕೇವಲ 15 ರೂಪಾಯಿ ಮಾತ್ರ ನಮ್ಮ ರಾಜ್ಯಕ್ಕೆ ಕೊಡುತ್ತಿದ್ದಾರೆ; ಅನ್ಯಾಯ ಮಾಡುತ್ತಿದ್ದಾರೆ ಎಂದು ವಿಶ್ಲೇಷಣೆ ನಡೆಯುತ್ತಿದೆ. ನಾನು ಈ ಸದನದ ಮೂಲಕ ಕೆಲವು ಅಂಕಿ ಅಂಶಗಳ ಮೂಲಕ ಇವತ್ತು ಬೆಳಕನ್ನು ಚೆಲ್ಲುವ ಪ್ರಯತ್ನ ಮಾಡುತ್ತೇನೆ. ಈ ಸರಕಾರವು 4.3 ಲಕ್ಷ ಕೋಟಿಯನ್ನು ಕೇಂದ್ರ ಸರಕಾರಕ್ಕೆ ಕಳಿಸಿಕೊಡುವುದಾಗಿ ಹೇಳುತ್ತಿದ್ದಾರೆ. ಆದಾಯ ತೆರಿಗೆ, ಜಿಎಸ್‍ಟಿ ಮತ್ತಿತರ ಮೂಲದಿಂದ ಇದು ಸಂಗ್ರಹ ಆಗುತ್ತಿದೆ. ಆದರೆ, ಇದರಲ್ಲಿ ನೇರ ತೆರಿಗೆ, ಪರೋಕ್ಷ ತೆರಿಗೆ ಎಲ್ಲವನ್ನೂ ಪರಿಗಣಿಸಲಾಗುತ್ತದೆ. ಮಹಾರಾಷ್ಟ್ರದ ನಂತರದಲ್ಲಿ ಅತಿ ಹೆಚ್ಚು ತೆರಿಗೆ ಕೊಡುವ ರಾಜ್ಯ ನಮ್ಮದೆಂದು ಒಪ್ಪಿಕೊಳ್ಳುತ್ತೇನೆ. ಆದರೆ, ಇವತ್ತು ಪ್ರತಿಷ್ಠಿತ ಸಂಸ್ಥೆಗಳಾದ ಇನ್‍ಫೋಸಿಸ್, ವಿಪ್ರೋ ಮೊದಲಾದ ಸಂಸ್ಥೆಗಳಿರುವ ಬೆಂಗಳೂರು ಮಹಾನಗರ ಹೆಡ್ ಕ್ವಾರ್ಟರ್ಸ್ ಮಾತ್ರ. ಆದರೆ, ಈ ಕಂಪೆನಿಗಳು ಇಡೀ ದೇಶದಲ್ಲಿ ವ್ಯವಹಾರ ಮಾಡುತ್ತವೆ. ಅಂತರರಾಷ್ಟ್ರೀಯ ಮಟ್ಟದಲ್ಲೂ ಮಾಡುತ್ತಾರೆ. ನಮ್ಮ ದೇಶದಲ್ಲಿ ವ್ಯವಹರಿಸುವಾಗ ದೇಶದ ಬೇರೆ ಬೇರೆ ರಾಜ್ಯಗಳಲ್ಲೂ ಗ್ರಾಹಕರು ಹೆಚ್ಚಾಗಿದ್ದಾರೆ. ಕಂಪೆನಿಗಳ ಹೆಡ್ ಕ್ವಾರ್ಟರ್ಸ್ ಇಲ್ಲಿದ್ದರೂ ದೇಶಕ್ಕೇ ಸೇವೆಗಳನ್ನು ಕೊಡುತ್ತಾರೆ. ನಾನಾ ರಾಜ್ಯದಲ್ಲಿ ಅವರಿಗೆ ಗ್ರಾಹಕರಿದ್ದಾರೆ. ಈ ಅಂಶವನ್ನು ಕೂಡ ಗಮನಿಸಬೇಕಿದೆ. ದೇಶದ ಎಲ್ಲ ರಾಜ್ಯಗಳು ಸೇವೆ ಪಡೆಯುವ ಸಂದರ್ಭದಲ್ಲಿ ಇಲ್ಲಿಂದಲೇ ಎಲ್ಲವೂ ಉತ್ಪತ್ತಿ ಆಗುವುದಿಲ್ಲ. ಹೆಡ್ ಕ್ವಾರ್ಟರ್ಸ್‍ನಲ್ಲಿ ಇರುವ ಕಾರಣಕ್ಕಾಗಿ ನಮ್ಮ ರಾಜ್ಯದಿಂದ ಆ ತೆರಿಗೆ ಮೂಲಕ ಹೋಗುವುದನ್ನು ನಾವು ಗಮನಿಸಬೇಕು ಎಂದು ನುಡಿದರು.
ಕರ್ನಾಟಕವು ರಾಜಸ್ಥಾನ, ಉತ್ತರಪ್ರದೇಶ ಮೊದಲಾದ ರಾಜ್ಯಗಳನ್ನು ಹೋಲಿಸುವುದೇ ಅವೈಜ್ಞಾನಿಕ. ಮುಂದುವರೆದ ರಾಜ್ಯಗಳು ರಾಜಸ್ಥಾನ, ಬಿಹಾರಕ್ಕೆ ಹೋಲಿಸಿಕೊಳ್ಳಲು ಸಾಧ್ಯವಿಲ್ಲ. 2014ರ ಯುಪಿಎ ಅವಧಿಯಲ್ಲಿ 19 ಸಾವಿರ ಕೋಟಿ ನಿಧಿ ಹಂಚಿಕೆ ಮೂಲಕ ಬಂದಿದೆ. ಬಿಹಾರಕ್ಕೆ 36 ಸಾವಿರ ಕೋಟಿ ಸಿಕ್ಕಿತ್ತು. ಉತ್ತರ ಪ್ರದೇಶ ಅತಿ ಹೆಚ್ಚು ಜನಸಂಖ್ಯೆ ಇರುವ ರಾಜ್ಯವಾಗಿದ್ದು, 66 ಸಾವಿರ ಕೋಟಿ ಬಂದಿತ್ತು. ಮಹಾರಾಷ್ಟ್ರಕ್ಕೆ 17 ಸಾವಿರ ಕೋಟಿ ಬಂದಿದೆ. ನಮ್ಮ ರಾಜ್ಯಕ್ಕೆ ತೆರಿಗೆ ಹಂಚಿಕೆ ಮೂಲಕ 14 ಸಾವಿರ ಕೋಟಿ ಬಂದಿತ್ತು ಎಂದು ತಿಳಿಸಿದರು. 2026ರಲ್ಲಿ ರಾಜಸ್ಥಾನಕ್ಕೆ 94 ಸಾವಿರ ಕೋಟಿ, ಬಿಹಾರ 1.50 ಲಕ್ಷ ಕೋಟಿ ಬಂದಿದೆ. ಉತ್ತರ ಪ್ರದೇಶಕ್ಕೆ 1 ಲಕ್ಷದ 60 ಸಾವಿರ ಕೋಟಿ ಬಂದಿದೆ. ಮಹಾರಾಷ್ಟ್ರಕ್ಕೆ 98 ಸಾವಿರ ಕೋಟಿ, ಕರ್ನಾಟಕಕ್ಕೆ 63 ಸಾವಿರ ಕೋಟಿಗೂ ಹೆಚ್ಚು ಲಭಿಸಿದೆ ಎಂದು ಅಂಕಿ ಅಂಶಗಳನ್ನು ನೀಡಿದರು. ತೆರಿಗೆ ಹಂಚಿಕೆಗೂ ಅದರದ್ದೇ ಆದ ಮಾನದಂಡಗಳಿವೆ ಎಂದು ತಿಳಿಸಿದರು. ಆ ಮಾನದಂಡಗಳ ಆಧಾರದಲ್ಲಿ ತೀರ್ಮಾನ ಆಗುತ್ತಿದೆ. ಪದೇಪದೇ ಕೇಂದ್ರ ಸರಕಾರ ಅನ್ಯಾಯ ಮಾಡುತ್ತಿದೆ ಎಂದು ಕೆಲವರು ಬೊಬ್ಬೆ ಹೊಡೆಯುತ್ತಿದ್ದು, ಇದು ಅರ್ಧ ಸತ್ಯ ಎಂದು ಗಮನ ಸೆಳೆದರು.


