Homeಕರ್ನಾಟಕರಾಜ್ಯದ ಅರಿವು ಕೇಂದ್ರ ಕಾರ್ಯಕ್ರಮ ರಾಷ್ಟ್ರದಲ್ಲಿಯೇ ಮಾದರಿ: ಪ್ರಿಯಾಂಕ್‌ ಖರ್ಗೆ

ರಾಜ್ಯದ ಅರಿವು ಕೇಂದ್ರ ಕಾರ್ಯಕ್ರಮ ರಾಷ್ಟ್ರದಲ್ಲಿಯೇ ಮಾದರಿ: ಪ್ರಿಯಾಂಕ್‌ ಖರ್ಗೆ

ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಿವು ಕೇಂದ್ರಗಳು ಜ್ಞಾನದ ಕೇಂದ್ರಗಳಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗಿಗಳಾಗುವ ಅಭ್ಯರ್ಥಿಗಳಿಗೆ ಮಾಹಿತಿ ನೀಡುವಲ್ಲಿ ಹಾಗೂ ಉದ್ಯೋಗಾವಕಾಶಗಳನ್ನು ಅರಸುವವರಿಗೆ ಮಾರ್ಗದರ್ಶಿಯಾಗಿವೆ, ಇದರೊಂದಿಗೆ ವಿಶೇಷ ಚೇತನರಿಗೆ ವಿಶೇಷ ಅರಿವು ನೀಡುವಲ್ಲಿಯೂ ಸುಸಜ್ಜಿತವಾಗಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ಅರಿವು ಕೇಂದ್ರಗಳಲ್ಲಿ ವಿಶೇಷ ಚೇತನರಿಗೆ ಸ್ನೇಹಮಯಿ ಸಾಧನಗಳನ್ನು ವಿತರಿಸುವ ʼದರ್ಶಿನಿʼ ವಿನೂತನ ಕಾರ್ಯಕ್ರಮಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ವಿಡಿಯೊ ಸಭೆ ಮೂಲಕ ಚಾಲನೆ ನೀಡಿ ಮಾತನಾಡಿದರು.

ರಾಜ್ಯದ 6,000 ಗ್ರಾಮ ಪಂಚಾಯತಿಗಳು ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವಿಡಿಯೊ ಸಭೆಯಲ್ಲಿ ಭಾಗಿಗಳಾಗಿದ್ದರು.

“ಇಡೀ ಭಾರತ ದೇಶಕ್ಕೆ ಮಾದರಿಯಾಗುವಂತಹ ಕಾರ್ಯಕ್ರಮ ಇದಾಗಿದ್ದು, ವಿಶೇಷ ಚೇತನ ವ್ಯಕ್ತಿಗಳು ಅರಿವು ಕೇಂದ್ರಗಳನ್ನು ಸುಲಭವಾಗಿ ಬಳಸಲು ಅಗತ್ಯವಾದ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ವಿಶೇಷವಾಗಿ, ದೃಷ್ಟಿ ಹೀನತೆ ಹೊಂದಿರುವ ವ್ಯಕ್ತಿಗಳಿಗೆ ಬ್ರೈಲ್ ಸಾಹಿತ್ಯ ಮತ್ತು ಇತರ ಸಹಾಯಕ ತಂತ್ರಜ್ಞಾನಗಳು ಲಭಿಸುವಂತೆ ವ್ಯವಸ್ಥೆ ಮಾಡಲಾಗಿದೆ” ಎಂದು ಹೇಳಿದರು.

“ರಾಷ್ಟ್ರೀಯ ಅಂಧರ ಸಂಸ್ಥೆ ಇಂಟರ್‌ಪಾಯಿಂಟ್ ಬ್ರೈಲ್ ಸ್ಲೇಟು ಮತ್ತು ಸ್ಟೈಲಸ್, ಕಾನ್ಕ್ಲೇವ್ ಹೆಡ್ ಪ್ಲಾಸ್ಟಿಕ್ ಸ್ಟೈಲಸ್, ಟ್ಯಾಕ್ಟೈಲ್ ಚೆಸ್ ಬೋರ್ಡ್ (ಇನ್‌ಕ್ಲೂಸಿವ್ ಡಿಸೈನ್), ಆಡಿಯೋ ಬಾಲ್, ಪಜಲ್, ಸ್ನೇಕ್ ಮತ್ತು ಲಾಡರ್ ಡೈಸ್ ಜೊತೆ ಪ್ಲೇಟ್ ಮತ್ತು ಆಬಾಕಸ್ ಉಪಕರಣಗಳನ್ನು ಅರಿವು ಕೇಂದ್ರಗಳಿಗೆ ಒದಗಿಸಲಾಗಿದೆ. ಇದರೊಂದಿಗೆ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಿಗೆ ಕಂಪ್ಯೂಟರ್ ಮತ್ತು ಯುಪಿಎಸ್‌ ಖರೀದಿಸಲು ಅನುದಾನ ಬಿಡುಗಡೆ ಮಾಡಲಾಗಿದೆ” ಎಂದರು.

“ಈಗಾಗಲೇ ಡಿಜಿಟಲ್‌ ಕಲಿಕಾ ಸಾಮಗ್ರಿಗಳು, ವೃತ್ತಿಪರ ಮಾರ್ಗದರ್ಶನ ವ್ಯವಸ್ಥೆ, ಸಂವಿಧಾನದ ಶೈಕ್ಷಣಿಕ ವ್ಯವಸ್ಥೆ, ವಿಶೇಷ ಚೇತನ ಸ್ನೇಹಿ ತಾಂತ್ರಿಕತೆ ಹಾಗೂ ನುರಿತ ವ್ಯಕ್ತಿಗಳಿಂದ ಜ್ಞಾನಾರ್ಜನೆ ಮುಂತಾದ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ, ಗ್ರಾಮೀಣ ಪ್ರದೇಶದಲ್ಲಿ ಒಟ್ಟು 5888 ಗ್ರಾಮ ಪಂಚಾಯತಿ ಅರಿವು ಕೇಂದ್ರಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, 5767 ಅರಿವು ಕೇಂದ್ರಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ, ಈ ಕೇಂದ್ರಗಳಲ್ಲಿ ʼಓದುವ ಬೆಳಕುʼ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಲ್ಲಿ ಸುಮಾರು 50 ಲಕ್ಷ ಮಕ್ಕಳು ನೋಂದಾಯಿಸಲ್ಪಟ್ಟಿದ್ದಾರೆ” ಎಂದು ಮಾಹಿತಿ ನೀಡಿದರು.

“ಅರಿವು ಕೇಂದ್ರಗಳಲ್ಲಿ ಪ್ರತಿ ಮಾಹೆ ಮಕ್ಕಳ ಬೌದ್ಧಿಕ ವಿಕಸನಕ್ಕೆ ಅನುವಾಗುವಂತಹ ಓದಿನ ಮನೆಗೆ ಹೋಗೋಣ, ಚದುರಂಗ ಆಟ ಆಡೋಣ, ಗಟ್ಟಿ ಓದು, ಅಮ್ಮನಿಗಾಗಿ ಒಂದು ಪುಸ್ತಕ, ಪತ್ರ ಬರೆಯುವ ಅಭಿಯಾನ, ಚಿಣ್ಣರ ಚಿತ್ತಾರ, ಮಕ್ಕಳಿಗೆ ಬೇಸಿಗೆ ಶಿಬಿರ, ಸಣ್ಣ ಕಥೆ ಬರೆಯುವುದು, ನನ್ನ ಪ್ರೀತಿಯ ಗ್ರಂಥಾಲಯ ಅಭಿಯಾನಗಳ ಮೂಲಕ ಚಟುವಟಿಕೆಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಅರಿವು ಕೇಂದ್ರಗಳು ಮಕ್ಕಳ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದ್ದು ರಾಷ್ಟ್ರದಲ್ಲಿಯೇ ಮಾದರಿಯಾಗಿವೆ. 6600 ಹೊಸ ಗ್ರಾಮ ಗ್ರಂಥಾಲಯಗಳನ್ನು ಪ್ರಾರಂಭಿಸುತ್ತಿದ್ದು, ಜ್ಞಾನದ ಹರಿವು ಗ್ರಾಮೀಣ ಪ್ರದೇಶದ ಶೈಕ್ಷಣಿಕ ಅಭ್ಯುದಯಕ್ಕೆ ನಾಂದಿ ಹಾಡಿದೆ ಎಂದೂ ಸಚಿವರು ಹೇಳಿದರು. ಹಲವಾರು ಸಂಸ್ಥೆಗಳು ಅರಿವು ಕೇಂದ್ರಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments